ತೆಲಂಗಾಣ ಮದ್ಯ ನೀತಿಯ ವಿರುದ್ಧ ನ.11ರಂದು ಬಿಜೆಪಿ ನಾಯಕನ ನಿರಶನ
Update: 2016-11-03 22:48 IST
ಹೈದರಾಬಾದ್, ನ.3: ಹೆಚ್ಚುತ್ತಿರುವ ಮದ್ಯ ಸೇವನೆಯು ಸಮಾಜಕ್ಕೆ ವಿನಾಶಕಾರಿಯಾಗಿದೆ ಯೆಂದು ಸಮಾಜವನ್ನು ಎಚ್ಚರಿಸಲು ತೆಲಂಗಾಣದ ಹಿರಿಯ ಬಿಜೆಪಿ ನಾಯಕ ಎಸ್.ವಿ. ಶೇಷಗಿರಿ ರಾವ್, ಟಿಎಸ್‌ಆರ್ ಸರಕಾರದ ಮದ್ಯ ನೀತಿಯ ವಿರುದ್ಧ ನ.11ರಂದು 24 ತಾಸುಗಳ ಉಪವಾಸವನ್ನು ನಡೆಸಲಿದ್ದಾರೆ.
ಕುಡುಕರ ಗುಂಪೊಂದು ಇತ್ತೀಚೆಗೆ ಇಲ್ಲಿ ನಡೆಸಿದ್ದ ರಸ್ತೆ ಅಪಘಾತವೊಂದನ್ನು ಜ್ಞಾಪಿಸಿದ ತೆಲಂಗಾಣ ಬಿಜೆಪಿ ಅಧ್ಯಕ್ಷ ಕೆ. ಲಕ್ಷ್ಮಣ್, ಮದ್ಯಪಾನದ ಪಿಡುಗು ಅಪಾರ ಸಂಖ್ಯೆಯ ಕುಟುಂಬಗಳನ್ನು ನಾಶಗೊಳಿಸುತ್ತಿದೆ ಎಂದರು. ಅಪಘಾತದಲ್ಲಿ ಒಂದೇ ಕುಟುಂಬದ ಕೆಲವು ಸದಸ್ಯರು ಅಸುನೀಗಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವಗಳೇ ನಾಶವಾಗುತ್ತಿದ್ದರೂ ಮದ್ಯದಂಗಡಿ, ಬಾರ್ ಹಾಗೂ ಪರ್ಮಿಟ್ ರೂಂಗಳನ್ನು ರಾತ್ರಿ 12 ಗಂಟೆಯ ವರೆಗೆ ತೆರೆದಿಡಲು ಅವಕಾಶ ನೀಡಿರುವುದು ಸರಕಾರವು ಜನರಿಗೆ ಮಾಡಿರುವ ಬಹುದೊಡ್ಡ ವಂಚನೆಯಾಗಿದೆಯೆಂದು ಲಕ್ಷ್ಮಣ್ ಆರೋಪಿಸಿದರು.