ಶೋಚನೀಯ ಸ್ಥಿತಿಯಲ್ಲಿ ಭಾರತೀಯ ಮಹಿಳೆಯರು
ಈ ವರದಿಯಲ್ಲಿ ಮಹಿಳೆಯರ ಆರೋಗ್ಯ ಹಾಗೂ ಬದುಕಿನ ಕುರಿತ ನಿರ್ದಿಷ್ಟ ಸೂಚ್ಯಂಕದಲ್ಲಿ ಕೊನೆಯ 3 ಸ್ಥಾನಗಳಲ್ಲಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಈ ಸೂಚ್ಯಂಕದಲ್ಲಿರುವ ಒಟ್ಟು 144 ಸ್ಥಾನಗಳ ಪೈಕಿ ಭಾರತವು 142ನೆ ರ್ಯಾಂಕ್‌ನಲ್ಲಿದೆ. ಮಹಿಳೆಯರ ಹಾಗೂ ಪುರುಷರ ನಡುವಿನ ಅರೋಗ್ಯದಲ್ಲಿ ಅಸಮಾನತೆಯ ನಿವಾರಣೆಯಲ್ಲಿ ದಶಕದುದ್ದಕ್ಕೂ ಭಾರತವು ವಿಶ್ವದಲ್ಲೇ ಅತ್ಯಂತ ಕನಿಷ್ಠ ಸುಧಾರಿತ ದೇಶವಾಗಿಯೇ ಉಳಿದುಕೊಂಡಿದೆ.
ಜಾ ಗತಿಕ ಆರ್ಥಿಕ ವೇದಿಕೆಯು ಈಗ ತಾನೇ ಜಾಗತಿಕ ಲಿಂಗ ಅಸಮಾನತೆ ಕುರಿತ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿದೆ. ಮೊದಲ ನೋಟಕ್ಕೆ ಈ ವರದಿಯು ಭಾರತಕ್ಕೆ ಸಿಹಿಸುದ್ದಿಯೆಂಬಂತೆ ಭಾಸವಾಗುತ್ತದೆ. ವೌಲ್ಯಮಾಪನಕ್ಕೊಳಗಾದ 144 ದೇಶಗಳ ಪೈಕಿ, 2016ರ ವರದಿಯು ಭಾರತಕ್ಕೆ 87ನೆ ರ್ಯಾಂಕನ್ನು ನೀಡಿದ್ದು, ಇದು ನೆರೆಯ ರಾಷ್ಟ್ರವಾದ ಬಾಂಗ್ಲಾದೇಶಕ್ಕಿಂತಲೂ ಕಳಪೆಯಾಗಿದೆ. ಆದಾಗ್ಯೂ 2006ರ ವರದಿಯಲ್ಲಿ 98ನೆ ರ್ಯಾಂಕ್‌ನಲ್ಲಿದ್ದ ಭಾರತಕ್ಕೆ ಇದೊಂದು ಗಣನೀಯವಾದ ಸುಧಾರಣೆಯಾಗಿದೆ.
ಆದರೆ ಲಿಂಗ ಅಸಮಾನತೆಯ ನಿವಾರಣೆಯಲ್ಲಿ ಸಮಗ್ರ ಪ್ರಗತಿಯನ್ನು ಸಾಧಿಸಿರುವುದಕ್ಕೆ ಭಾರತವು ಸಂಭ್ರಮಪಡುವಂತಹದ್ದೇನೂ ಇಲ್ಲ. ಇದೇ ವರದಿಯಲ್ಲಿ ಮಹಿಳೆಯರ ಆರೋಗ್ಯ ಹಾಗೂ ಬದುಕಿನ ಕುರಿತ ನಿರ್ದಿಷ್ಟ ಸೂಚ್ಯಂಕದಲ್ಲಿ ಕೊನೆಯ 3 ಸ್ಥಾನಗಳಲ್ಲಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ಈ ಸೂಚ್ಯಂಕದಲ್ಲಿರುವ ಒಟ್ಟು 144 ಸ್ಥಾನಗಳ ಪೈಕಿ ಭಾರತವು 142ನೆ ರ್ಯಾಂಕ್‌ನಲ್ಲಿದೆ. ಮಹಿಳೆಯರ ಹಾಗೂ ಪುರುಷರ ನಡುವಿನ ಅರೋಗ್ಯದಲ್ಲಿ ಅಸಮಾನತೆಯ ನಿವಾರಣೆಯಲ್ಲಿ ದಶಕದುದ್ದಕ್ಕೂ ಭಾರತವು ವಿಶ್ವದಲ್ಲೇ ಅತ್ಯಂತ ಕನಿಷ್ಠ ಸುಧಾರಿತ ದೇಶವಾಗಿಯೇ ಉಳಿದುಕೊಂಡಿದೆ.
ಶಿಕ್ಷಣ, ಆರೋಗ್ಯ, ಆರ್ಥಿಕತೆ ಹಾಗೂ ರಾಜಕೀಯದಲ್ಲಿ ರುವ ಲಿಂಗ ತಾರತಮ್ಯಗಳನ್ನು ಅಳೆಯುವುದಕ್ಕಾಗಿ ವಿಶ್ವ ಆರ್ಥಿಕ ವೇದಿಕೆಯು 11 ವರ್ಷಗಳ ಹಿಂದೆ ಜಾಗತಿಕ ಲಿಂಗ ಅಸಮಾನತೆ ಸೂಚ್ಯಂಕವನ್ನು ಜಾರಿಗೊಳಿಸಿತ್ತು. ಈ ನಾಲ್ಕು ಪ್ರಧಾನ ಸೂಚ್ಯಂಕಗಳ ಆಧಾರದಲ್ಲಿ ವಿವಿಧ ದೇಶಗಳಿಗೆ ರ್ಯಾಂಕಿಂಗ್ ನೀಡುವ ಮೂಲಕ ಈ ವಾರ್ಷಿಕ ವರದಿಯು ಲಿಂಗ ಸಮಾನತೆಯ ಕುರಿತು ಮಾನದಂಡಗಳನ್ನು ಸೃಷ್ಟಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
ಒಟ್ಟಾರೆಯಾಗಿ ಈ ವರ್ಷದ ವರದಿಯಲ್ಲಿ ಜಗತ್ತಿನಾದ್ಯಂತ ವಿವಿಧ ರಾಷ್ಟ್ರಗಳು ಆರೋಗ್ಯ ಹಾಗೂ ಶಿಕ್ಷಣದಲ್ಲಿ ಲಿಂಗ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಪ್ರಗತಿಯತ್ತ ಸಾಗಿವೆ.ಆದರೆ ಆರ್ಥಿಕ ಪಾಲ್ಗೊಳ್ಳುವಿಕೆ ಹಾಗೂ ರಾಜಕೀಯ ಸಬಲೀಕರಣದಲ್ಲಿ ಇನ್ನೂ ಅಗಾಧವಾದ ಅಂತರ ಕಂಡು ಬರುತ್ತಿದೆ. ಆದಾಗ್ಯೂ, ಭಾರತದ ಸ್ಥಾನಮಾನವು ಒಂದು ಸೂಚ್ಯಂಕದಿಂದ ಇನ್ನೊಂದು ಸೂಚ್ಯಂಕದೆಡೆಗೆ ಬದಲಾಗುತ್ತಾ ಸಾಗುತ್ತಿದೆ. ಶೈಕ್ಷಣಿಕ ದಾಖಲಾತಿಯಲ್ಲಿ ಲಿಂಗ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಭಾರತವು ಅತ್ಯುತ್ತಮವಾದ ನಿರ್ವಹಣೆ ಯನ್ನು ತೋರಿದೆ. ಆದರೆ ಇದೇ ವೇಳೆಗೆ ಮಹಿಳೆಯರ ಆರೋಗ್ಯ ಹಾಗೂ ಆರ್ಥಿಕ ಪಾಲ್ಗೊಳ್ಳುವಿಕೆಯನ್ನು ಸುಧಾರಿಸುವಲ್ಲಿ ಅದು ಗಣನೀಯವಾಗಿ ವಿಫಲವಾಗಿದೆ.
ಜಾಗತಿಕ ಲಿಂಗ ಸಮಾನತೆ ಕುರಿತ ವರದಿಯಲ್ಲಿ ವಿವರಿಸಲಾದ ವಿಭಿನ್ನ ಸೂಚ್ಯಂಕಗಳು ಹಾಗೂ ಈ ಪ್ರತಿಯೊಂದು ವಿಭಾಗದಲ್ಲೂ ಭಾರತವು ಹೇಗೆ ನಿರ್ವಹಣೆಯನ್ನು ತೋರಿದೆ ಎಂಬ ಕುರಿತಾದ ಕಿರು ವಿಶ್ಲೇಷಣೆಯೊಂದನ್ನು ಇಲ್ಲಿ ನೀಡಲಾಗಿದೆ.
ಆರೋಗ್ಯ ಹಾಗೂ ಅಸ್ತಿತ್ವ
ಇದು ದೇಶದ ಲಿಂಗ ಅನುಪಾತ ಹಾಗೂ ಮಹಿಳೆಯರ ಆರೋಗ್ಯಯುತ ಜೀವಿತಾವಧಿ ಕುರಿತ ಸಮೀಕ್ಷೆಯನ್ನು ಒಳಗೊಂಡಿರುತ್ತದೆ. ಈ ವರ್ಷದ ವರದಿಯ ಪ್ರಕಾರ ವಿಶ್ವದಾದ್ಯಂತ 38 ರಾಷ್ಟ್ರಗಳು ಲಿಂಗ ಅಸಮಾನತೆಯನ್ನು ನಿವಾರಿಸುವಲ್ಲಿ ಸಫಲವಾಗಿವೆ. ಆದರೆ ಭಾರತ, ಅರ್ಮೆನಿಯಾ ಹಾಗೂ ಚೀನಾ ಅತ್ಯಂತ ಕಳಪೆ ನಿರ್ವಹಣೆಯನ್ನು ಪ್ರದರ್ಶಿಸಿವೆ. ಭಾರತದಲ್ಲಿ ಪ್ರತಿ 1 ಸಾವಿರ ಗಂಡಸರಿಗೆ 943 ಮಹಿಳೆಯರಿರುವುದು ಈ ಸೂಚ್ಯಂಕದಲ್ಲಿ ದೇಶದ ಕಳಪೆ ಸಾಧನೆಗೆ ಮುಖ್ಯ ಕಾರಣವಾಗಿದೆ. ಸ್ತ್ರೀಯರ ಆಯುಷ್ಯಪ್ರಮಾಣದಲ್ಲಿ ಭಾರತವು 71ನೆ ರ್ಯಾಂಕ್‌ನಲ್ಲಿದೆ. ಭಾರತೀಯ ಪುರುಷರಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು ಕಿರಿಯ ವಯಸ್ಸಿನಲ್ಲಿ ವಿವಾಹಿತರಾಗುತ್ತಾರೆ. ಶೇ.74ರಷ್ಟು ಭಾರತೀಯ ಮಹಿಳೆಯರು 25 ವರ್ಷಕ್ಕಿಂತ ಮೊದಲೇ ಮದುವೆಯಾದರೆ, ಆ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಪುರುಷರ ಸಂಖ್ಯೆ ಶೇ.35 ಮಾತ್ರ. ಸಾಕ್ಷರತೆ
ಈ ಸೂಚ್ಯಂಕವು ಮಹಿಳಾ ಸಾಕ್ಷರತೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅವರ ದಾಖಲಾತಿಯನ್ನು ಒಳಗೊಂಡಿದೆ.
ಲಿಂಗ ಅಸಮಾನತೆಯು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವವಾಗಿ ಕಡಿಮೆಯಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಅಂತರ ಕಂಡುಬಂದಿದೆ ಹಾಗೂ ತೃತೀಯ ಹಂತದ ಶಿಕ್ಷಣದಲ್ಲಿ ಹೆಚ್ಚುಕಮ್ಮಿ ಸಂಪೂರ್ಣ ಸಮಾನತೆ ಕಂಡುಬರುತ್ತಿದೆ. ಸ್ತ್ರೀಯರು ಹಾಗೂ ಪುರುಷರು ಸಮಾನವಾದ ನೈಪುಣ್ಯತೆ ಹಾಗೂ ಜ್ಞಾನದೊಂದಿಗೆ ಹೊರಬರುತ್ತಿದ್ದಾರೆ. ಆದರೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳಲ್ಲಿ ಸ್ತ್ರೀ ಹಾಗೂ ಪುರುಷರ ನಡುವೆ ಶೇ.47ರಷ್ಟು ಅಂತರ ಕಂಡುಬರುತ್ತಿದೆ. ಸ್ತ್ರೀಯರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಪುರುಷರು ಈ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಮಹಿಳಾ ಸಾಕ್ಷರತೆಯಲ್ಲಿ ಭಾರತವು 124ನೆ ರ್ಯಾಂಕ್‌ನಲ್ಲಿದ್ದು, ಶೇ.63ರಷ್ಟು ಮಹಿಳೆಯರು ಹಾಗೂ ಶೇ.81ರಷ್ಟು ಪುರುಷರು ಸಾಕ್ಷರರಾಗಿದ್ದಾರೆ. ಈ ಉಪಸೂಚ್ಯಂಕದಲ್ಲಿ ಭಾರತವು ಶ್ರೀಲಂಕಾ, ಬೋಟ್ಸವಾನಾ ಹಾಗೂ ಮಾಲ್ದೀವ್ಸ್‌ನಂತಹ ದೇಶಗಳಿಗಿಂತ ಮುಂದಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ದಾಖಲಾತಿಯಲ್ಲಿ ಭಾರತದಲ್ಲಿ ಲಿಂಗತಾರತಮ್ಯ ಕಾಣದಿದ್ದರೂ ಹಾಗೂ ಕೇವಲ ಶೇ.2ರಷ್ಟು ಮಂದಿ ತೃತೀಯ ಹಂತದ (ಪದವಿಪೂರ್ವ ಅಥವಾ ಪದವಿ ಇತ್ಯಾದಿ) ಶಿಕ್ಷಣಕ್ಕೆ ಸೇರ್ಪಡೆಯಾಗಿರುವ ಹೊರತಾಗಿಯೂ ಈ ಅಂತರ ಕಂಡುಬಂದಿದೆ.
ಆರ್ಥಿಕತೆ
ಶ್ರಮಿಕವರ್ಗ, ವೇತನ ತಾರತಮ್ಯ ಹಾಗೂ ಹಿರಿಯ ಹುದ್ದೆಗಳಿಗೆ ನೇಮಕಗೊಂಡಿರುವ ಮಹಿಳೆಯರ ಪಾಲ್ಗೊಳ್ಳುವಿಕೆ ಯನ್ನು ಈ ಸೂಚ್ಯಂಕವು ಒಳಗೊಂಡಿರುತ್ತದೆ. ಈ ಸೂಚ್ಯಂಕದಲ್ಲಿ ಜಾಗತಿಕ ಮಟ್ಟದ ಸಾಧನೆ ಉತ್ತಮವಾಗಿಲ್ಲವೆಂದು ವರದಿ ಸಾಬೀತುಪಡಿಸಿದೆ. ಸಾಮಾನ್ಯ ಆರ್ಥಿಕತೆಯಲ್ಲಿ ಶೇ.54ರಷ್ಟು ದುಡಿಯುವ ವಯಸ್ಸಿನ ಮಹಿಳೆಯರು ಪಾಲ್ಗೊಂಡರೆ, ಪುರುಷರ ಪ್ರಮಾಣ ಶೇ.81ರಷ್ಟಿದೆ. ಭಾರತದಲ್ಲಿ ಶೇ.82ರಷ್ಟು ಪುರುಷರು ಸಾಮಾನ್ಯ ಶ್ರಮಿಕವರ್ಗಕ್ಕೆ ಸೇರಿದರೆ, ಮಹಿಳೆಯರು ಶೇ.28ರಷ್ಟಿದ್ದಾರೆ. ಈ ಸೂಚ್ಯಂಕದಲ್ಲಿ ಭಾರತವು 135ನೆ ರ್ಯಾಂಕ್‌ನಲ್ಲಿದೆ.
ವೇತನ ಸಮಾನತೆಯಲ್ಲಿ ಭಾರತವು 103ನೆ ರ್ಯಾಂಕ್‌ನಲ್ಲಿದ್ದು, ನೇಪಾಳ, ಇರಾನ್, ಭೂತಾನ್, ಯೆಮನ್, ಉಗಾಂಡ ಹಾಗೂ ಇತರ ಡಜನ್‌ಗಟ್ಟಲೆ ರಾಷ್ಟ್ರಗಿಂತಲೂ ಕಳಪೆ ಸ್ಥಾನದಲ್ಲಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ವೇತನವನ್ನು ಭಾರತದ ಕಾನೂನು ಕಡ್ಡಾಯಗೊಳಿಸಿಲ್ಲವೆಂಬ ಬಗ್ಗೆ ಈ ಈ ವರದಿಯು ಗಮಸೆಳೆದಿದೆ.
ವೇತನ ರಹಿತ ಉದ್ಯೋಗ, ಈ ವರದಿಯು ಸಮೀಕ್ಷೆ ನಡೆಸಿದ ಇನ್ನೊಂದು ಉಪ ಸೂಚ್ಯಂಕವಾಗಿದೆ. ವಿಶ್ವದಾದ್ಯಂತ ಮಹಿಳೆಯರು ಮಾಡುವ ವೇತನರಹಿತ ದುಡಿಮೆಯ ಶೇ.34ರಷ್ಟು ಭಾಗವನ್ನು ಮಾತ್ರವೇ ಪುರುಷರು ನಿರ್ವಹಿಸುತ್ತಿದ್ದಾರೆ. ‘‘ಈ ಅಸಮತೋಲನವು ಸಣ್ಣ ವಯಸ್ಸಿನಲ್ಲೇ ಆರಂಭವಾಗುತ್ತದೆಯೆಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಹೆಣ್ಣು ಮಕ್ಕಳು ಗಂಡುಮಕ್ಕಳಿಗಿಂತ ಶೇ.30ರಷ್ಟು ಅಧಿಕ ಸಮಯವನ್ನು ವೇತನರಹಿತ ದುಡಿಮೆಗಾಗಿ ವ್ಯಯಿಸುತ್ತಿದ್ದಾರೆಂದು ವರದಿ ಹೇಳಿದೆ. ವೇತನಸಹಿತ ಹಾಗೂ ವೇತನ ರಹಿತ ದುಡಿಮೆಯನ್ನು ಒಟ್ಟು ಗೂಡಿಸಿದರೂ ಸಹ ಪ್ರತಿದಿನ ಮಹಿಳೆಯರು ಪುರುಷರಿಗಿಂತ 50 ನಿಮಿಷಗಳಷ್ಟು ಅಧಿಕ ಸಮಯವನ್ನು ಕೆಲಸದಲ್ಲಿ ಕಳೆಯುತ್ತಾರೆ.
ಭಾರತೀಯ ಮಹಿಳೆಯರು ಸರಾಸರಿಯಾಗಿ ಪ್ರತಿದಿನ 537 ನಿಮಿಷಗಳ ಕಾಲ ದುಡಿಯುತ್ತಾರೆ. ಇದಕ್ಕೆ ಹೋಲಿಸಿದರೆ ಪುರುಷರ ಸರಾಸರಿ ದೈನಂದಿನ ದುಡಿಮೆಯ ಸಮಯ 442 ನಿಮಿಷಗಳು. ಮಹಿಳೆಯರು ಪ್ರತಿದಿನ ಶೇ.66ರಷ್ಟು ವೇತನರಹಿತ ದುಡಿಮೆಯನ್ನು ಮಾಡಿದರೆ, ಪುರುಷರ ವೇತನರಹಿತ ದುಡಿಮೆಯ ಪ್ರಮಾಣ ಶೇ.12 ಮಾತ್ರ. ಶೇ. 62ರಷ್ಟು ಭಾರತೀಯ ಪುರುರಿಗೆ ಯಾವುದಾದರೂ ಒಂದು ಬಗೆಯ ಬ್ಯಾಂಕ್ ಖಾತೆಯಿದ್ದರೆ, ಕೇವಲ ಶೇ.43ರಷ್ಟು ಮಹಿಳೆಯರು ಮಾತ್ರವೇ ಬ್ಯಾಂಕ್ ಖಾತೆ ಹೊಂದಿದ್ದಾರೆ.
ಕೆಲಸದ ಸ್ಥಳಗಳಲ್ಲಿ ಹಿರಿಯ ಹುದ್ದೆಗಳಿಗೆ ಮಹಿಳೆಯರ ನೇಮಕಾತಿಯಲ್ಲಿಯೂ ಲಿಂಗತಾರತಮ್ಯ ಪ್ರತಿಫಲಿಸುತ್ತಿದೆ. ಜಾಗತಿಕವಾಗಿ ಕಂಪೆನಿ ಮಂಡಳಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಪ್ರಮಾಣವು ಕೇವಲ ಶೇ.14 ಆಗಿದೆ. ಭಾರತದಲ್ಲಿ ಈ ಸಂಖ್ಯೆ ಇನ್ನೂ ಕೆಳಮಟ್ಟದಲ್ಲಿದೆ. ಸಾರ್ವಜನಿಕವಾಗಿ ವ್ಯವಹಾರ ನಡೆಸುವ ಕಂಪೆನಿಗಳ ಮಂಡಳಿಗಳ ಸದಸ್ಯರಲ್ಲಿ ಕೇವಲ ಶೇ.10ರಷ್ಟು ಮಂದಿ ಮಹಿಳೆಯರು.
ರಾಜಕೀಯ
ಸರಕಾರಗಳ ಮುಖ್ಯಸ್ಥರಾಗಿ ಹಾಗೂ ಸಚಿವಾಂಗ ಅಥವಾ ಸಂಸದೀಯ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಈ ಸೂಚ್ಯಂಕವು ಒಳಗೊಂಡಿದೆ.
ಜಗತ್ತಿನ ಬಹುತೇಕ ರಾಷ್ಟ್ರಗಳು ಎಂದೂ ಮಹಿಳೆಯ ರನ್ನು ಸರಕಾರದ ಮುಖ್ಯಸ್ಥರನ್ನಾಗಿ ಹೊಂದಿಲ್ಲವೆಂಬುದನ್ನು ಈ ವರದಿಯು ಉಲ್ಲೇಖಿಸಿದೆ. ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಇಬ್ಬರು ಮಹಿಳೆಯರು ಸರಕಾರದ ಮುಖ್ಯ ಹುದ್ದೆಗಳನ್ನು ಆಲಂಕರಿಸಿದ್ದ್ಜಾರೆ. ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಈ ಉಪಸೂಚ್ಯಂಕದಲ್ಲಿ ಬಾಂಗ್ಲಾ ದೇಶದ ಬಳಿಕ ಭಾರತವು ದ್ವಿತೀಯ ಸ್ಥಾನದಲ್ಲಿದೆ.
ಆದರೆ ಸಂಸತ್‌ನಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಭಾರತವು ಬಾಂಗ್ಲಾದೇಶ, ಪಾಕಿಸ್ತಾನ, ಸಿರಿಯಾ, ಈಜಿಪ್ಟ್ ದೇಶಗಳಿಗಿಂತ ಹಿಂದಿದ್ದು, 112ನೆ ರ್ಯಾಂಕ್‌ನಲ್ಲಿದೆ. ಇದಕ್ಕೆ ಹೋಲಿಸಿದರೆ, ಸಚಿವಾಂಗ ಸ್ಥಾನಗಳಲ್ಲಿ ಮಹಿಳಾ ಪ್ರಾತಿನಿಧ್ಯದಲ್ಲಿ ಭಾರತವು 50ನೆ ರ್ಯಾಂಕ್‌ನಲ್ಲಿದೆ. ಇಲ್ಲಿ ಶೇ.22ರಷ್ಟು ಸಚಿವ ಸ್ಥಾನಗಳನ್ನು ಮಹಿಳೆಯರು ಆಲಂಕರಿಸಿದ್ದಾರೆ. ಶೇ.63ರಷ್ಟು ಮಹಿಳಾ ಸಚಿವರನ್ನು ಹೊಂದಿರುವ ಫಿನ್‌ಲ್ಯಾಂಡ್ ದೇಶವು ನಂ.1 ಸ್ಥಾನದಲ್ಲಿದೆ.
ಸಮಗ್ರವಾಗಿ ಹೇಳುವುದಾದರೆ, ಈ ವರದಿಯು ವಾಸ್ತವಿಕ ವಾಗಿ ಲಿಂಗ ಸಮಾನತೆಯಲ್ಲಿ ಸಾಧಿಸಲಾಗಿರುವ ಪ್ರಗತಿಯು ಕುಂಠಿತವಾಗಿರುವ ಸೂಚನೆಯನ್ನು ನೀಡುವ ಮೂಲಕ ವಿಷಾದಕರ ಚಿತ್ರಣವೊಂದನ್ನು ನಮ್ಮ ಮುಂದಿಟ್ಟಿದೆ.
ಕೃಪೆ: scroll.in