ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ಶಿವರಾಜ್‌ಸಿಂಗ್ ಸರಕಾರದಿಂದ ಪ್ರತ್ಯಕ್ಷದರ್ಶಿಗಳಿಗೆ ಹಣದ ಕೊಡುಗೆ
ಭೋಪಾಲ್,ನ.3: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜೈಲಿನಿಂದ ಪರಾರಿಯಾಗಿದ್ದ ಎಂಟು ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ನಡೆದಿದ್ದ ಆಚಾರಪುರ ಗ್ರಾಮದ ಹಲವಾರು ಜನರಿಗೆ 40 ಲ.ರೂ.ಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ. ಅವರ ಈ ಘೋಷಣೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.
ಈ ಘೋಷಣೆಯನ್ನು ಪ್ರಶ್ನಿಸಿರುವ ಸ್ಥಳೀಯ ನಾಯಕರು ಇದು ಎನ್‌ಕೌಂಟರ್‌ನ ಪ್ರತ್ಯಕ್ಷದರ್ಶಿಗಳ ಬಾಯಿ ಮುಚ್ಚಿಸುವ ಪ್ರಯತ್ನವಾಗಿದೆ ಮತ್ತು ಘಟನೆಯ ಕುರಿತು ತನಿಖೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್‌ಕೌಂಟರ್ ಸಂದರ್ಭದಲ್ಲಿ ಪೊಲೀಸರಿಗೆ ನೆರವಾದ ಗ್ರಾಮಸ್ಥರಿಗೆ ಮುಖ್ಯಮಂತ್ರಿ ಗಳು ಬಹುಮಾನವನ್ನು ಪ್ರಕಟಿಸಿದ್ದಾರೆ. ಈ ಬಹುಮಾನದ ಹಣವನ್ನು ಗ್ರಾಮಸ್ಥರಿಗೆ ಸಮಾನವಾಗಿ ಹಂಚಲಾಗುವುದು ಎಂದು ಮಧ್ಯಪ್ರದೇಶ ಸರಕಾರದ ಅಧಿಕೃತ ಹೇಳಿಕೆಯು ತಿಳಿಸಿದೆ.
ಕೈದಿಗಳು ಜೈಲಿನಿಂದ ಪರಾರಿಯಾದ ಘಟನೆಯ ಬಗ್ಗೆ ತನಿಖೆಯೇ ಇನ್ನೂ ಆರಂಭಗೊಂಡಿಲ್ಲ. ಹೀಗಿರುವಾಗ ಇಂತಹ ಪ್ರಕಟಣೆ ತಪ್ಪು ಮತ್ತು ಇದು ಪ್ರಕರಣದ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಥಳೀಯ ನಾಯಕರು ಹೇಳಿದ್ದಾರೆ.
ನಗದು ಬಹುಮಾನದ ಪ್ರಕಟಣೆಯನ್ನು ಖಂಡಿಸಿದ ಅಖಿಲ ಭಾರತ ಮಿಲಿ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆರಿಫ್ ಮಸೂದ್ ಅವರು, ಇದು ಸರಕಾರವು ಅಹಿತಕರ ಪರಿಸ್ಥಿತಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಪಕ್ಕಾ ಲೆಕ್ಕಾಚಾರದೊಡನೆ ಇಟ್ಟಿರುವ ನಡೆ ಎಂದು ಹೇಳಿದರು..
ಸಿಮಿ ಕಾರ್ಯಕರ್ತರು ಆಯುಧಗಳನ್ನು ಹೊಂದಿದ್ದರೇ ಎಂಬ ಬಗ್ಗೆ ಗ್ರಾಮಸ್ಥರ ಹೇಳಿಕೆಗಳಲ್ಲಿ ಮತ್ತು ಎನ್‌ಕೌಂಟರ್ ಸುತ್ತಲಿನ ಇತರ ಸಂದರ್ಭಗಳ ಬಗ್ಗೆ ವೈರುಧ್ಯಗಳಿವೆ ಎಂದು ಭೋಪಾಲದ ಮಧ್ಯಪ್ರದೇಶ ಮುಸ್ಲಿಮ್ ವಿಕಾಸ ಪರಿಷದ್‌ನ ನಾಯಕ ಮೊಹಮ್ಮದ್ ಮಾಹಿರ್ ಹೇಳಿದರು.
ಗ್ರಾಮಸ್ಥರು ತಮ್ಮ ಬಾಯಿ ಮುಚ್ಚಿಕೊಳ್ಳಬೇಕೆಂಬ ಸ್ಪಷ್ಟವಾದ ಸಂಕೇತವನ್ನು ರವಾನಿಸಲಾಗಿದೆ ಮತ್ತು ಹಣವನ್ನು ಇದೇ ಉದ್ದೇಶದಿಂದ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕೆಲವು ಗ್ರಾಮಸ್ಥರು ಸಿಮಿ ಕಾರ್ಯಕರ್ತರು ನಿರಾಯುಧರಾಗಿದ್ದರು ಎಂದು ಈ ಹಿಂದೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಗೃಹಸಚಿವ,ಐಜಿ ಭೋಪಾಲ್ ಮತ್ತು ಎಟಿಎಸ್ ವರಿಷ್ಠರು ನೀಡಿರುವ ಹೇಳಿಕೆಗಳಲ್ಲಿಯೂ ಹತ ವ್ಯಕ್ತಿಗಳು ಆಯುಧಗಳನ್ನು ಹೊಂದಿದ್ದರೇ ಎಂಬ ಬಗ್ಗೆ ವಿರೋಧಾಭಾಸಗಳಿವೆ.
ಭೋಪಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಆಚಾರಪುರದ ಸರಪಂಚ ಮತ್ತು ಇತರ ಕೆಲವು ಗ್ರಾಮಸ್ಥರನ್ನು ಸನ್ಮಾನಿಸಲಾಗಿದ್ದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಹುಮಾನದ ಘೋಷಣೆಯನ್ನು ಮಾಡಿದ್ದಾರೆ.
ವೀಡಿಯೊಗಳು ಸೇರಿದಂತೆ ಎನ್‌ಕೌಂಟರ್ ಕುರಿತು ಅಧಿಕಾರಿಗಳ ಹೇಳಿಕೆಗಳ ಪೊಳ್ಳುತನವನ್ನು ಬಯಲಿಗೆಳೆಯುವ ಸಾಕ್ಷಾಧಾರಗಳಿರುವುದರಿಂದ ಸರಕಾರವು ತನ್ನ ಮುಖವನ್ನುಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದ ಹಿರಿಯ ವಕೀಲರೋರ್ವರು, ತಾನು ಈಬಗ್ಗೆ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವುದಾಗಿ ತಿಳಿಸಿದರು.
ಅತ್ತ ಆರಿಫ್ ಮೊಹಮ್ಮದ್ ಕೂಡ ಉಚ್ಚ ನ್ಯಾಯಾಲಯದಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸುತ್ತಿರುವುದಾಗಿ ಹೇಳಿದರು. ಎನಕೌಂಟರ್ ನಕಲಿಯಾಗಿದೆ ಎಂದು ಆರೋಪಿಸಿ ಮತ್ತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಅಹವಾಲೊಂದನ್ನು ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.