ಪಾಕ್: ರೆಲುಗಳ ಢಿಕ್ಕಿ; 19 ಸಾವು
Update: 2016-11-04 00:00 IST
ಕರಾಚಿ, ನ. 3: ಪಾಕಿಸ್ತಾನದ ದಕ್ಷಿಣದ ಬಂದರು ನಗರ ಕರಾಚಿಯಲ್ಲಿ ನಿಂತಿದ್ದ ರೈಲೊಂದಕ್ಕೆ ಪ್ರಯಾಣಿಕ ರೈಲೊಂದು ಢಿಕ್ಕಿ ಹೊಡೆದಾಗ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ ಹಾಗೂ 40 ಮಂದಿ ಗಾಯಗೊಂಡಿದ್ದಾರೆ.
ಇದು ಪಾಕಿಸ್ತಾನದಲ್ಲಿ ಎರಡು ತಿಂಗಳಲ್ಲಿ ನಡೆದಿರುವ ಎರಡನೆ ಬೃಹತ್ ರೈಲು ಅಪಘಾತವಾಗಿದೆ.
ಲಾಂದಿ ಪ್ರದೇಶದ ಗಡ್ಡಾಫಿ ಪಟ್ಟಣದಲ್ಲಿ ಬೆಳಗ್ಗೆ 7:18ಕ್ಕೆ ಅಪಘಾತ ಸಂಭವಿಸಿದೆ. ಜುಮಾ ಗಾತ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಫರೀದ್ ಎಕ್ಸ್‌ಪ್ರೆಸ್‌ಗೆ ಝಕಾರಿಯ ಎಕ್ಸ್‌ಪ್ರೆಸ್ ಗುದ್ದಿದೆ.
ಫರೀದ್ ಎಕ್ಸ್‌ಪ್ರೆಸ್‌ನ ಎರಡ ಬೋಗಿಗಳು ಮತ್ತು ಝಕಾರಿಯ ಎಕ್ಸ್‌ಪ್ರೆಸ್‌ನ ಒಂದು ಬೋಗಿ ಢಿಕ್ಕಿಯಲ್ಲಿ ಸಂಪೂರ್ಣವಾಗಿ ನಾಶವಾಗಿವೆ.
ಝಕಾರಿಯ ಎಕ್ಸ್‌ಪ್ರೆಸ್‌ನ ಚಾಲಕ ಸಿಗ್ನಲ್ ಉಲ್ಲಂಘಿಸಿರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನುವುದು ಆರಂಭಿಕ ತನಿಖೆಯಿಂದ ಗೊತ್ತಾಗಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.
ರೈಲುಗಳು ಢಿಕ್ಕಿಯಾದ ಬಳಿಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ರಕ್ಷಣಾ ಸಿಬ್ಬಂದಿ.