ಎಡಕ್ಕೂ ಬಲಕ್ಕೂ ಇರುವ ದೊಡ್ಡ ಕತ್ತಲ ಬಾವಿಗಳು
ಮನುವಾದ ಎಂದರೆ ಬಹಳಷ್ಟು ಜನರು ದಮನಿಸುವ ಒಂದು ಸಿದ್ಧಾಂತ ಎಂದು ಹೇಳುತ್ತಾರೆ. ಆದರೆ ಬಹಳ ಮುಖ್ಯವಾಗಿ ಮನುವಾದ ಎಂದರೆ ಬೇರ್ಪಡಿಸುವ ಸಿದ್ಧಾಂತ. ಒಗ್ಗಟ್ಟಾಗಿರುವ ಸಮುದಾಯವನ್ನು ಮನುವಾದ ಎಂದಿಗೂ ಎದುರಿಸಲು ಆಗುವುದಿಲ್ಲ. ಹಾಗಾಗಿ ಮೊದಲು ಒಗ್ಗಟ್ಟಾಗಿರುವ ಸಮುದಾಯಗಳನ್ನು ಬೇರ್ಪಡಿಸುತ್ತದೆ. ಇಂತಹಾ ಬೇರ್ಪಟ್ಟ ಸಮುದಾಯಗಳನ್ನು ದಮನಿಸುವುದು ಅಥವಾ ಶೋಷಿಸುವುದು ತುಂಬಾ ಸುಲಭ.
ಆದರೆ ವಿಪರ್ಯಾಸವೆಂದರೆ ಕೆಲವರು ನಾವು ಬೇರ್ಪಡಲು ಸಿದ್ದರಿದ್ದೀವಿ, ಬಂದು ದಮನಿಸಿ ಎಂದು ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ. ನಾನು ಮಾತಾಡುತ್ತಿರುವುದು ಮಾದಿಗ ದಂಡೋರ ಮತ್ತು ಛಲವಾದಿ ಮಹಾಸಭಾಗಳ ಬಗ್ಗೆ. ದುರಂತವೆಂದರೆ ಈ ಸಮುದಾಯಗಳಲ್ಲಿರುವ ಅಕ್ಷರಸ್ಥರೇ ಇದಕ್ಕೆ ಬೆಂಬಲವಾಗಿರುವುದು. ಪ.ಜಾತಿ ಸಂಘಟನೆಗಳು ಎತ್ತ ಸಾಗುತ್ತಿವೆ? ಪ.ಜಾತಿ ಸಂಘಟನೆಗಳಿಗೆ, ಮುಖ್ಯವಾಗಿ ದಂಡೋರ ಮತ್ತು ಛಲವಾದಿ ಮಹಾಸಭಾಗಳಿಗೆ ಯಾವುದೇ ನಿರ್ದಿಷ್ಟವಾದ ಗುರಿ ಇರುವುದಿಲ್ಲ. ಇವರ ಹೋರಾಟದ ಏಕೈಕ ಬೇಡಿಕೆಯೆಂದರೆ ಒಳಮೀಸಲಾತಿ ಜಾರಿಯಾಗಬೇಕೆಂಬುದು. ಸರಿ ಒಂದು ಮಾತನ್ನು ನಾವು ಒಪ್ಪಿಕೊಳ್ಳೋಣ ಏನೆಂದರೆ ಅವರವರ ಜನಸಂಖ್ಯೆಗೆ ತಕ್ಕಂತೆ ಅವರ ಪಾಲು ಸಿಗಬೇಕು. ಆದರೆ ಇವರ ಸಂಕುಚಿತ ಮನಸ್ಥಿತಿ ಹೇಗಿದೆಯೆಂದರೆ ಇವರ ಹೋರಾಟಗಳು ಹಾಲಿ ಇರುವ ಮೀಸಲಾತಿಯ ಬಗ್ಗೆಯೇ ಹೊರತು ಮನುವಾದಿಗಳ ಸೊಕ್ಕಿನ ಮೂಲವಾದ ಕೃಷಿ ಭೂಮಿ, ಕೈಗಾರಿಕೆ, ಸೇವಾ ವಲಯಗಳಲ್ಲಿ ಇವರಿಗೆ ಸಿಗಬೇಕಾದ ಪಾಲಿನ ಬಗ್ಗೆ ಇವರಿಗೆ ಅರಿವೇ ಇಲ್ಲ. ಜೊತೆಗೆ ಈಗಾಗಲೇ ಖಾಲಿ ಬಿದ್ದಿರುವ ಬ್ಯಾಕ್ ಲಾಗ್ ಹುದ್ದೆಗಳ ಬಗ್ಗೆಯಾಗಲಿ ಮತ್ತು ಭಡ್ತಿ ಮೀಸಲಾತಿಯ ಬಗ್ಗೆಯಾಗಲಿ ಗಮನವಿಲ್ಲ. ಹೋಗಲಿ ಇವರು ಪಾಲಿಸುತ್ತಿರುವ ಉಪಜಾತಿ ನಾಯಕರ ದಾರಿ ಎಂತಹುದೆಂದು ನೋಡಿ. ಮಾದಿಗ ದಂಡೋರದ ನಾಯಕ ಮಂದಕೃಷ್ಣ ಮಾದಿಗ ಮತ್ತು ಛಲವಾದಿ ಮಹಾಸಭಾದ ನಾಯಕ ಕೆ.ಶಿವರಾಂ ಈ ಇಬ್ಬರೂ ಎಂತಹಾ ಮಹಾನ್ ನಾಯಕರೆಂದರೆ ತಮ್ಮ ಉಪಜಾತಿಯ ಹಣೆಪಟ್ಟಿಯೊಂದಿಗೆ ಅಧಿಕಾರದಲ್ಲಿರುವ ಪಕ್ಷಗಳಿಗೆ ಸಲಾಂ ಹಾಕುತ್ತಿರುತ್ತಾರೆ. ಹೊರನೋಟಕ್ಕೆ ಈ ಇಬ್ಬರೂ ಬೇರ್ಪಟ್ಟಂತೆ ಕಂಡರೂ ಇವರ ಗುಲಾಮತನ ಮಾತ್ರ ಒಂದೇ ಆಗಿದೆ. ಮಂದಕೃಷ ಮಾದಿಗ ತನ್ನ ದಂಡೋರದ ಹೆಸರಿನಲ್ಲಿ ಬಿಜೆಪಿಯ ವೆಂಕಯ್ಯ ನಾಯ್ಡುವಿಗೆ ಶರಣಾದರು. ಕೆ.ಶಿವರಾಂ ತನ್ನ ಛಲವಾದಿ ಮಹಾಸಭಾದ ಹೆಸರಿನಲ್ಲಿ ಅದೇ ಬಿಜೆಪಿಯ ಕೇಂದ್ರ ಸರಕಾರದ ಗೃಹಮಂತ್ರಿ ರಾಜನಾಥ್ ಸಿಂಗ್ ಪಾದಚರಣಗಳಿಗೆ ವಂದಿಸಿ ಬಿಜೆಪಿ ಸೇರಿಬಿಟ್ಟರು. ಎರಡು ಸಮುದಾಯಗಳನ್ನು ಬೇರ್ಪಡಿಸಿ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಕೂಡಾ ಮನುವಾದವೇ ಆಗಿದೆಯೆಂದು ಅರಿಯಬೇಕು. ಇವರು ಎಡಗೈ ಬಲಗೈ ಎಂದು ಇವರಷ್ಟಕ್ಕೆ ಇವರು ಹೇಳಿಕೊಳ್ಳುತ್ತಿರಬಹುದು. ಆದರೆ ಶೋಷಣೆ ಮಾಡುವವರು ಎಡ ಬಲ ಎರಡನ್ನೂ ಸಮಾನವಾಗಿಯೇ ದಮನಿಸಿದ್ದಾರೆ. ಆದರೆ ಶೋಷಣೆಗೆ ಒಳಪಟ್ಟವರು ಮಾತ್ರ ‘‘ನಾನು ಎಡಗಾಲಿನಿಂದ ಪೆಟ್ಟು ತಿಂದೆ ನೀನು ಬಲಗಾಲಿನಿಂದ ಪೆಟ್ಟು ತಿಂದೆ’’ ಎಂದು ಬಡಿದಾಡಿಕೊಳ್ಳ್ಳುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬೂ ಜಗಜೀವನರಾಂ ಛಲವಾದಿ ಮತ್ತು ದಂಡೋರಗಳ ಮತ್ತೊಂದು ವಾದವೇನೆಂದರೆ ಅಂಬೇಡ್ಕರ್ ಹೊಲೆಯರು ಮತ್ತು ಬಾಬೂ ಜಗಜೀವನರಾಂ ಮಾದಿಗರು ಎಂದು. ಆದರೆ ನನ್ನ ಪ್ರಶ್ನೆಯೇನೆಂದರೆ ಮಹಾರಾಷ್ಟ್ರದ ಮಹರ್ ಸಮುದಾಯ ಕರ್ನಾಟಕದಲ್ಲಿ ಹೇಗೆ ಹೊಲೆಯರಾಗುತ್ತಾರೆ? ಮತ್ತು ಬಿಹಾರ, ಉತ್ತರ ಪ್ರದೇಶದ ಚಮ್ಮಾರರು ಹೇಗೆ ಮಾದಿಗರಾಗುತ್ತಾರೆ?. ಇದಕ್ಕೆ ಮಾನದಂಡವಾದರೂ ಏನೆಂದು ಹೇಳಬಲ್ಲರೆ? ಕುಲಕಸುಬುಗಳ ಆಧಾರದ ಮೇಲೆ ಹೇಳುವುದಾದರೆ ಖಂಡಿತಾ ಯಾರು ಮಾದಿಗರು? ಯಾರು ಹೊಲೆಯರು? ಎಂದು ಹೇಳಲು ಸಾಧ್ಯವೇ ಆಗುವುದಿಲ್ಲ. ಏಕೆಂದರೆ ಚಪ್ಪಲಿ ಹೊಲಿಯುವ ಕೆಲಸ ಚಮ್ಮಾರರೂ ಮಾಡುತ್ತಾರೆ ಹಾಗೇ ಮಹರರೂ ಮಾಡುತ್ತಾರೆ. ಇತ್ತ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ. ಹಾಗಾದರೆ ಏಕೆ ಬಾಬಾ ಸಾಹೇಬರನ್ನೂ ಮತ್ತು ಜಗಜೀವನರಾಂರವರನ್ನೂ ಒಂದೊಂದು ಉಪಜಾತಿಗೆ ಅಂಟಿಸಿದ್ದಾರೆಂದು ಅಗತ್ಯವಾಗಿ ತಿಳಿಯಲೇಬೇಕು. ಈ ವಾದಗಳ ಮೂಲ ತಿಳಿಯಬೇಕಾದರೆ ಸ್ವಲ್ಪಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜಗಜೀವನರಾಂರವರ ಕಾಲಘಟ್ಟವನ್ನು ಪರಿಶೀಲಿಸಬೇಕಿದೆ.
ಮನುವಾದದ ಮೊದಲ ರಾಜಕೀಯ ಪಕ್ಷವೆಂದರೆ ಕಾಂಗ್ರೆಸ್. ಈ ಪಕ್ಷದ ವಿರುದ್ಧ ಶೋಷಿತರ ವಿಮೋಚನೆಗೆ ನಿಂತಿದ್ದ ಏಕೈಕ ದೈತ್ಯ ನಾಯಕರೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರು. ಕಾಂಗ್ರೆಸ್‌ನ ಮುಂದೆ ಇದ್ದ ಬಹು ದೊಡ್ಡ ಸವಾಲೆಂದರೆ ಅಂಬೇಡ್ಕರ್‌ರವರ ನಾಯಕತ್ವವನ್ನು ನಾಶಗೊಳಿಸುವುದು. ಆದರೆ ಅಂಬೇಡ್ಕರ್‌ರವರು ಹುಟ್ಟಿದ ಮಹರ್ ಸಮುದಾಯದಲ್ಲಿಯೇ ಅವರ ವಿರುದ್ಧ ನಾಯಕತ್ವವನ್ನು ಬೆಳೆಸುವುದು ಅಸಾಧ್ಯವಾದ ಕೆಲಸವೆಂದು ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಮಹರ್ ಸಮುದಾಯದ ಬದಲಿಗೆ ಅದಕ್ಕೆ ಸರಿಸಮನಾದ ಮತ್ತೊಂದು ಸಮುದಾಯವಾದ ಚಮ್ಮಾರ್ ಸಮುದಾಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ನಾಯಕತ್ವ ಬೆಳೆಸಬಹುದು ಮತ್ತು ಆ ಮೂಲಕ ಕಾಂಗ್ರೆಸ್ ಪರವಾಗಿ ಅಸ್ಪಶ್ಯರ ನಾಯಕತ್ವ ಬೆಳೆಸಿ ಅಸ್ಪಶ್ಯರಲ್ಲೇ ಬಣಗಳಾಗಿ ಮಾಡುವಂತಹ ಮನುವಾದಿ ತಂತ್ರ ಹೂಡಿದರು. ಇದರ ಪ್ರತಿಫಲವಾಗಿ ಬಾಬೂ ಜಗಜೀವನರಾಂರವರನ್ನು ಬಾಬಾ ಸಾಹೇಬ್ ಅಂಬೇಡ್ಕರರ ವಿರುದ್ಧ ಬೆಳೆಸಿದರು. ಕಾಂಗ್ರೆಸ್‌ನಲ್ಲಿ ಉನ್ನತ ಪದವಿಗಳನ್ನು ಕೂಡಾ ಕೊಟ್ಟರು. ಆದರೆ ಒಂದು ಸತ್ಯವನ್ನು ಒಪ್ಪಲೇಬೇಕಾಗಿದೆ. ಏನೆಂದರೆ ಬಾಬಾ ಸಾಹೇಬರ ಹೋರಾಟದ ಫಲಾನುಭವಿಗಳಲ್ಲಿ ಜಗಜೀವನರಾಂ ಕೂಡಾ ಒಬ್ಬರೇ ಹೊರತೂ ಶೋಷಿತರ ವಿಮೋಚನೆಯ ಹರಿಕಾರರಂತೂ ಅಲ್ಲ. ಆದರೆ ಬಾಬಾ ಸಾಹೇಬರೇ ಅಸ್ಪಶ್ಯರ ಏಕೈಕ ಪ್ರತಿನಿಧಿಯೆಂದು ದುಂಡು ಮೇಜಿನ ಸಭೆಯಲ್ಲಿಯೇ ಸಾಬೀತಾಯಿತು.
ಆದರೆ ಕಾಂಗ್ರೆಸ್ ಎಂದಿಗೂ ಇದನ್ನು ಒಪ್ಪಲಿಲ್ಲ ಮತ್ತು ಎಂದಿಗೂ ಅಸ್ಪಶ್ಯ ಸಮುದಾಯಗಳನ್ನು ಒಗ್ಗಟ್ಟಾಗಿ ಇರಲು ಬಿಡುವುದಿಲ್ಲ. 1945ರಲ್ಲಿ ಕಾಂಗ್ರೆಸ್ ಪಕ್ಷವು ದಿಲ್ಲಿಯಲ್ಲಿ ಅಖಿಲ ಭಾರತ ಶೋಷಿತ ಸಮುದಾಯಗಳ ನಾಯಕರುಗಳ ಸಭೆ(All India Depressed class leaders conference) ನಡೆಸಿತು. ಆ ಸಭೆಯ ಅಧ್ಯಕ್ಷತೆ ಬಂದು ಬಾಬೂ ರಾಜೇಂದ್ರಪ್ರಸಾದ್ ಮತ್ತು ಅದರ ರೂಪುರೇಷೆಗಳನ್ನು ಪಟೇಲ್ ನಿರ್ವಹಿಸಿದ್ದರು ಹಾಗೂ ಬಾಬೂ ಜಗಜೀವನರಾಂ ಒಳಗೊಂಡಂತೆ ಇನ್ನೂ ಹಲವು ಕಾಂಗ್ರೆಸ್‌ನಲ್ಲಿದ್ದ ಅಸ್ಪಶ್ಯ ನಾಯಕರು ಉಪಸ್ಥಿತರಿದ್ದರು. ಈ ಸಭೆಯ ಮೊದಲ ನಿರ್ಣಯವೇನೆಂದರೆ ‘‘ಬಾಬಾ ಸಾಹೇಬ್ ಅಂಬೇಡ್ಕರ್ ಅಸ್ಪಶ್ಯರ ಏಕೈಕ ನಾಯಕನಲ್ಲ ಮತ್ತು ಮಹಾತ್ಮಾ ಗಾಂಧೀಜಿಯವರೇ ನಮ್ಮ ನಾಯಕರು.’’ ಹೀಗೆ ಕಾಂಗ್ರೆಸ್ ಮೊಟ್ಟಮೊದಲಿಗೆ ಉಪಜಾತಿ ನಾಯಕರನ್ನು ಸೃಷ್ಟಿಸುವ ಮೂಲಕ ಅಸ್ಪಶ್ಯರನ್ನು ಬೇರ್ಪಡಿಸುವ ಕೆಲಸಕ್ಕೆ ನಾಂದಿ ಹಾಡಿತು. ಈ ಕೆಲಸವನ್ನು ಬಿಜೆಪಿ ಮತ್ತು ಇತರೆ ಮನುವಾದಿ ಪಕ್ಷಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಬಿಜೆಪಿಯ ಮೋರ್ಚಾ, ಕಾಂಗ್ರೆಸ್‌ನ ಸೆಲ್‌ಗಳು, ಕಮ್ಯುನಿಸ್ಟರ ಅಗೋಚರ ಸೆಲ್‌ಗಳು
ನಾವು ಹಿಂದೂಗಳು! ನಮಗೆ ಜಾತಿಯಿಲ್ಲ! ನಾವೆಲ್ಲಾ ಹಿಂದೂಗಳಷ್ಟೇ! ಎಂದು ಬಿಜೆಪಿ ಹೇಳುತ್ತಿದೆ. ಆದರೆ ಇದೇ ಪಕ್ಷದಲ್ಲಿ ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾಗಳಿವೆ. ಅದರ ಒಳಗೇ ದಂಡೋರ, ಛಲವಾದಿ ಮೋರ್ಚಾಗಳು ಕಾಣದಂತೆ ಇವೆ. ಆದರೆ ಬ್ರಾಹ್ಮಣ ಮೋರ್ಚಾ, ರೆಡ್ಡಿ ಮೋರ್ಚಾ, ಲಿಂಗಾಯಿತ ಮೋರ್ಚಾ, ಕುರುಬ, ಗಾಣಿಗ ಮೋರ್ಚಾಗಳು ಏಕಿಲ್ಲ?. ಕಾರಣವೇನೆಂದರೆ ಬಿಜೆಪಿಯಲ್ಲಿ ಎಷ್ಟೇ ಪ್ರಬಲ ಎಸ್ಸಿ/ಎಸ್ಟಿ ನಾಯಕನಿದ್ದರೂ ಅವನು ಮೋರ್ಚಾದ ಒಳಗೇ ಕಮರಿಹೋಗಬೇಕು ಮತ್ತು ಹಿಂದುತ್ವದ ಗುಲಾಮನಾಗಿಯೇ ಇರಬೇಕು. ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಎಸ್ಸಿ/ಎಸ್ಟಿ ಸೆಲ್‌ಗಳಿವೆ. ಆದರೆ ಅಲ್ಲಿಯೂ ಬೇರೆ ಯಾವ ಸಮುದಾಯದ ಸೆಲ್‌ಗಳು ಇಲ್ಲ. ಇಲ್ಲಿಯೂ ಅಷ್ಟೆ ಸತತವಾಗಿ ಗೆದ್ದ ಯಾವ ಎಸ್ಸಿ/ಎಸ್ಟಿ ನಾಯಕನೇ ಆಗಲಿ ಸೆಲ್‌ಗಳಿಗೆ ಸೀಮಿತವಾಗುತ್ತಾನೆ. ಇನ್ನು ಜನತಾದಳದ ಬಗ್ಗೆ ಹೇಳಬೇಕಿಲ್ಲ. ಅದು ಕುಟುಂಬದ ರಾಜಕಾರಣ. ಇನ್ನೂ ವಿಚಿತ್ರವೆಂದರೆ ಪರಿವರ್ತನೆಯ ಬಗ್ಗೆ ಮಾತಾಡುವ ಎಸ್ಸಿ/ಎಸ್ಟಿಗಳೇ ಇಲ್ಲದೆ ಅಸ್ಪಶ್ಯರನ್ನು ಅಸ್ಪಶ್ಯರಾಗಿಯೇ ಉಳಿಸಿಕೊಂಡ ಪಕ್ಷವೆಂದರೆ ಕಮ್ಯುನಿಸ್ಟ್ ಪಕ್ಷ. ಮನುವಾದಿ ಪಕ್ಷಗಳ ಬಗ್ಗೆ ಗೊತ್ತಿರುವ ವಿಷಯವೇ ಆದರೂ ಪ್ರಸಕ್ತವಾಗಿ ಮಾದಿಗ ದಂಡೋರ ಮತ್ತು ಛಲವಾದಿ ಮಹಾಸಭಾಗಳು ಎಲ್ಲಿಗೆ ಹೋಗಬೇಕೆಂಬುದು ಮುಖ್ಯ. ಉಪಜಾತಿಗಳ ಹೆಸರಿನಲ್ಲಿ ಮನುವಾದಿಗಳಿಗೆ ಬೆಂಬಲವಾಗಿರುತ್ತೀರೋ ಅಥವಾ ಬಹುಜನರ ಹೆಸರಿನಲ್ಲಿ ಅಧಿಕಾರ ಪಡೆಯುತ್ತೀರೋ ನೀವೇ ನಿರ್ಣಯಿಸಿ.
ಇನ್ನೊಂದು ಮಾತು ಮಾದಿಗ ದಂಡೋರಗಳೇ ನೀವೇ ಹೇಳುತ್ತೀರಲ್ಲವೇ ಚಮ್ಮಾರರು ಮಾದಿಗರೆಂದು!. ಹಾಗಾದರೆ ಉತ್ತರ ಪ್ರದೇಶದ ಚಮ್ಮಾರ ಸಮುದಾಯದ ಮಾಯಾವತಿಯವರನ್ನು ಅನುಸರಿಸಬೇಕಲ್ಲವೇ!. ಛಲವಾದಿ ಮಹಾಸಭಾಗಳೇ ನೀವೇ ಹೇಳುತ್ತೀರಲ್ಲವೇ ಬಾಬಾ ಸಾಹೇಬ್ ಅಂಬೇಡ್ಕರರು ಹೊಲೆಯರೆಂದು. ಹಾಗಾದರೆ ಅಂಬೇಡ್ಕರ್ ವಾದವೇ ಜೀವಾಳವಾದ ಬಹುಜನ ಚಳವಳಿಯನ್ನು ಅನುಸರಿಸಬೇಕಲ್ಲವೇ!. ನೀವು ನಿಜವಾಗಿಯೂ ನಿಮ್ಮ ಸ್ವಜಾತಿಗಳ ಹಿತಾಸಕ್ತಿಗೆ ಬೆಲೆ ಕೊಡುವುದಿದ್ದರೆ ನಿಮಗಿರುವ ಏಕೈಕ ದಾರಿ ಫುಲೆ- ಅಂಬೇಡ್ಕರ್ ವಾದದ ಬಹುಜನ ಚಳುವಳಿ. ಏಕೆಂದರೆ ನಿಮ್ಮಂತಹ ಇನ್ನೂ 6000 ಜಾತಿಗಳನ್ನು ಒಂದುಗೂಡಿಸಿ ವಿಮೋಚನೆಗೊಳಿಸಬಲ್ಲ ಫುಲೆ-ಅಂಬೇಡ್ಕರ್ ವಾದವನ್ನು ಜೀವಾಳವಾಗಿ ಪಾಲಿಸುವ ಬಹುಜನ ಚಳುವಳಿಯೇ ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬುದು ಅರಿಯಬೇಕಿದೆ. ಪ.ಜಾತಿಗಳೆಂದು ಬೇರ್ಪಟ್ಟು ಎಡ ಬಲಗಳೆಂಬ ಕತ್ತಲ ಬಾವಿಗಳಿಂದ ನಮಗೆ ಎಂದಿಗೂ ವಿಮೋಚನೆಯಿಲ್ಲ. ಫುಲೆ-ಅಂಬೇಡ್ಕರ್‌ವಾದದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಜಾತಿಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಒಗ್ಗೂಡಿಸಿ ಆಳುವ ವರ್ಗದ ಕಡೆಗೆ ಮುನ್ನುಗ್ಗೋಣ- ಪ್ರಬುದ್ದ ಭಾರತ ಕಟ್ಟೋಣ.