ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಸರಿಯಾದೀತೇ?
ಮಾನ್ಯರೆ,
ಜಯನಗರದ ರಾಜೀವ್‌ಗಾಂಧಿ ಸಾರ್ವಜನಿಕ ಆಸ್ಪತ್ರೆಯು ಸಂಪೂರ್ಣವಾಗಿ ಅವ್ಯವಸ್ಥೆಯ ಆಗರವಾಗಿದೆ. ನೋಡಲು ಮಾತ್ರ ಅತ್ಯಂತ ಸುಂದರವಾದ ಭವ್ಯ ಕಟ್ಟಡವನ್ನು ಹೊಂದಿರುವ ಆಸ್ಪತ್ರೆಯ ಒಳಹೊಕ್ಕರೆ ಸಿಗುವುದು ಗಲೀಜು, ನಿರಾಶೆ. ಇಲ್ಲಿ ಶನಿವಾರ ಚಿಕಿತ್ಸೆಗೆಂದು ಮಧ್ಯಾಹ್ನ ತೆರಳಿದರೆ ತುರ್ತುಚಿಕಿತ್ಸಾ ವಿಭಾಗದಲ್ಲಿ ಕೂಡ ವೈದ್ಯರಿರುವುದಿಲ್ಲ. ನಶರ್ರ್ರ್ಗಳೇ ಡಾಕ್ಟರ್‌ಗಳಾಗಿ ಕೆಲಸಮಾಡುವ ಪರಿಸ್ಥಿತಿ ಇಲ್ಲಿ ಇದೆ.
ಇನ್ನು ಚಿಕಿತ್ಸೆಯ ವಿಷಯಕ್ಕೆ ಬಂದರೆ ಇಲ್ಲಿನ ವೈದ್ಯರಲ್ಲಿ ತಾಳ್ಮೆ, ಸಹಾನುಭೂತಿ ಗುಣಗಳೇ ಕಾಣುತ್ತಿಲ್ಲ. ಇಲ್ಲಿನ ಶೌಚಾಲಯದ ಸ್ಥಿತಿಯಂತೂ ಸಹಿಸಲು ಅಸಾಧ್ಯವಾಗಿದೆ. ಆಸ್ಪತ್ರೆಯೇ ಹೀಗಿದ್ದರೆ ಇನ್ನು ಆ ಆಸ್ಪತ್ರೆಗೆ ತೆರಳಿದ ರೋಗಿಗಳ ಪರಿಸ್ಥಿತಿಯೇನಾಗಬೇಕು.
ಸರಕಾರಿ ಆಸ್ಪತ್ರೆಯ ಬಗ್ಗೆ ಈಗಾಗಲೇ ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ ಮತ್ತು ಅಲ್ಲಿಗೆ ತೆರಳಬಾರದೆಂಬ ವ್ಯವಸ್ಥೆ ಆಸ್ಪತ್ರೆಗಳಲ್ಲಿದೆ. ಇಂತಹ ಹದಗೆಟ್ಟ ವ್ಯವಸ್ಥೆ ಕಂಡು ಬಂದರೆ ಬರುವವರು ಸಹ ಕಷ್ಟವಾದರೂ ಈ ಆಸ್ಪತ್ರೆಯ ಹಾದಿ ತುಳಿಯದೆ ಆರೋಗ್ಯ ಕಾಪಾಡಿಕೊಳ್ಳಲು ಖಾಸಗಿ ಆಸ್ಪತ್ರೆಯ ದಾರಿ ತುಳಿಯುತ್ತಾರೆ. ಇದೀಗ ಸರಕಾರಿ ಆಸ್ಪತ್ರೆಗಳು ಸಂಪೂರ್ಣ ಖಾಸಗೀಕರಣಗೊಳ್ಳುವ ಪ್ರಾಥಮಿಕ ಲಕ್ಷಣಗಳು ಗೋಚರಿಸುತ್ತವೆ.
ಪ್ರತಿಯೊಬ್ಬ ನಾಗರಿಕನೂ ತೆರಿಗೆಯನ್ನು ಪಾವತಿ ಮಾಡುತ್ತಾನೆ ಮತ್ತು ಸರಕಾರದ ಸೌಲಭ್ಯಗಳನ್ನು ಪಡೆಯುವ ಹಕ್ಕುಗಳನ್ನು ಹೊಂದಿರುತ್ತಾನೆ. ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದಾಗಿ ಅವನ ಹಕ್ಕನ್ನು ಕಸಿದುಕೊಂಡಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ದಯವಿಟ್ಟು ಈ ಕುರಿತು ಶೀಘ್ರವೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಹಕಾರಿಯಾಗಬೇಕಾಗಿದೆ.