ಎನ್ ಡಿ ಟಿ ವಿ ಮೇಲೆ ನಿರ್ಬಂಧ ವಿರೋಧಿಸಿ ಸುದ್ದಿ ಪ್ರಸಾರ ನಿಲ್ಲಿಸಲಿರುವ ಇನ್ನೊಂದು ವೆಬ್ ಸೈಟ್
ಹೊಸದಿಲ್ಲಿ, ನ.4: ಪಠಾಣ್ ಕೋಟ್ ವಾಯು ನೆಲೆಯ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಜನವರಿ ತಿಂಗಳಲ್ಲಿ ಪ್ರಸಾರ ಮಾಡಿದ ಸುದ್ದಿಯೊಂದರಲ್ಲಿ ರಕ್ಷಣಾ ಸಂಬಂಧಿತ ಕೆಲವೊಂದು ಪ್ರಮುಖ ಹಾಗೂ ಗೌಪ್ಯ ಮಾಹಿತಿಗಳನ್ನು ಬಹಿರಂಗ ಪಡಿಸಿದೆ ಎಂಬ ಆರೋಪದ ಮೇಲೆ ಎನ್ ಡಿ ಟಿ ವಿ ಚಾನೆಲನ್ನು ಒಂದು ದಿನದ ಮಟ್ಟಿಗೆ ನವೆಂಬರ್ 9 ರ ರಾತ್ರಿ 1 ಗಂಟೆಯಿಂದ ಮುಂದಿನ 24 ಗಂಟೆಗಳ ತನಕ ನಿರ್ಬಂಧಿಸುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಂತರ್ ಸಚಿವಾಲಯ ಸಮಿತಿಯ ಶಿಫಾರಸನ್ನು ವಿರೋಧಿಸಿ ಆ ದಿನ ಕನಿಷ್ಠ ಒಂದು ಗಂಟೆಯ ತನಕ ಜನತಾ ಕಾ ರಿಪೋರ್ಟರ್ ಸುದ್ದಿ ಜಾಲ ಕೂಡ ತನ್ನ ಪ್ರಸಾರ ನಿಲ್ಲಿಸಲಿದೆಯೆಂದು ಹೇಳಿಕೊಂಡಿದೆ. ಎನ್ ಡಿ ಟಿ ವಿ ಗೆ ಬೆಂಬಲಾರ್ಥವಾಗಿ ಹಾಗೂ ಸರಕಾರದ ಕ್ರಮವನ್ನು ಪ್ರತಿಭಟಿಸಲು ತಾನು ಈ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಹೇಳಿಕೊಂಡಿದೆ.
ಎನ್ ಡಿ ಟಿ ವಿ ದೇಶದ ಒಂದು ಜವಾಬ್ದಾರಿಯುತ ಸುದ್ದಿ ಸಂಸ್ಥೆಯಾಗಿದೆ ಎಂದು ಹೇಳಿರುವ ಜನತಾ ಕಾ ರಿಪೋರ್ಟರ್, ಮಾಧ್ಯಮ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಯಾವತ್ತೂ ರಾಜಕಾರಣಿಗಳ ಕೈಗೆ ನೀಡಬಾರದು ಎಂದು ಹೇಳಿದೆ. ಇಂತಹ ಒಂದು ಕ್ರಮ ಮಾಧ್ಯಮ ಸಂಸ್ಥೆಯ ಕಾರ್ಯನಿರ್ವಹಣೆಯ ಮೇಲೂ ಪ್ರಭಾವ ಬೀರುವುದು ಎಂದುಅದು ಹೇಳಿಕೊಂಡಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲೆ ನಡೆಯುತ್ತಿರುವ ಈ ದಾಳಿ ಖಂಡನೀಯ ಹಾಗೂ ಇಂತಹುದೇ ಕ್ರಮವನ್ನು ನಾಳೆ ಬೇರೆ ಯಾವುದೇ ಸುದ್ದಿ ಸಂಸ್ಥೆ ಕೂಡ ಎದುರಿಸಬಹುದು ಎಂಬ ಭೀತಿಯನ್ನು ಜನತಾ ಕಾ ರಿಪೋರ್ಟರ್ ವ್ಯಕ್ತಪಡಿಸಿದೆ.