ಬ್ರಿಟನ್‌ನ ವೀಸಾ ನೀತಿ ಬದಲಾವಣೆಯಿಂದ ಭಾರತದ ಐಟಿ ಉದ್ಯೋಗಿಗಳಿಗೆ ಸಂಕಷ್ಟ
ಲಂಡನ್, ನ.4: ಬ್ರಿಟನ್‌ನ ವೀಸಾ ನೀತಿ ಬದಲಾವಣೆಯಿಂದಾಗಿ ಲಂಡನ್‌ನಲ್ಲಿ ನೆಲೆಸಿರುವ ಭಾರತದ ಐಟಿ ಉದ್ಯೋಗಿಗಳು ಸಮಸ್ಯೆ ಎದುರಿಸುವಂತಾಗಿದೆ.
ಹೊಸ ವೀಸಾ ನೀತಿಯಂತೆ ನವೆಂಬರ್ 24 ರ ನಂತರ ಟೈರ್ 2 ವೀಸಾ ಇಂಟ್ರಾ ಕಂಪನಿ ಟ್ರಾನ್ಸ್ಫರ್(ಐಸಿಟಿ) ವಿಭಾಗದಲ್ಲಿ ವೀಸಾಗಾಗಿ ಅರ್ಜಿ ಸಲ್ಲಿಸುವವರು ಕನಿಷ್ಠ 30,000 ಪೌಂಡ್ ಗಳ ವೇತನವನ್ನು ಹೊಂದಿರಬೇಕಾಗುತ್ತದೆ. ಹಿಂದೆ ಕನಿಷ್ಠ ವೇತನ ಮಿತಿ 20,800 ಪೌಂಡ್ ಇತ್ತು. ಇದರಿಂದಾಗಿ ಸಮಸ್ಯೆ ಉಂಟಾಗಿದೆ.
ಬ್ರಿಟನ್ ಪ್ರಧಾನಿ ಥೆರೆಸಾ ಮೇ ಭಾರತಕ್ಕೆ ಮೂರೂ ದಿನಗಳ ಪ್ರವಾಸಕ್ಕಾಗಿ ರವಿವಾರ ಭಾರತಕ್ಕೆ ಆಗಮಿಸಲಿದ್ದಾರೆ. ಇದಕ್ಕಿಂತ ಮೂರು ದಿನಗಳ ಮೊದಲು ಬ್ರಿಟನ್ ತನ್ನ ವೀಸಾ ನೀತಿಯನ್ನು ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ.
ಇಂಟ್ರಾ ಕಂಪನಿ ಟ್ರಾನ್ಸ್ಫರ್(ಐಸಿಟಿ) ವಿಭಾಗದಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಬಹುತೇಕ ಮಂದಿ ಭಾರತದ ಐಟಿ ಉದ್ಯೋಗಿಗಳಾಗಿರುತ್ತಾರೆ. ಬ್ರಿಟನ್‌ನ ವಲಸೆ ಸಲಹಾ ಸಮಿತಿ(ಎಂಎಸಿ) ಶಿಫಾರಸ್ಸಿನಂತೆ ಟೈರ್ -2 ವೀಸಾ ನೀತಿಯಲ್ಲಿ ಎರಡು ಹಂತದ ಬದಲಾವಣೆ ಮಾಡಲಾಗಿತ್ತು. ಇದೀಗ ಇನ್ನಷ್ಟು ಬದಲಾವಣೆಯಾಗಿದ್ದು, ನವೆಂಬರ್ 24 ರ ನಂತರ ಅರ್ಜಿ ಸಲ್ಲಿಸುವವರು ಸಮಸ್ಯೆ ಎದುರಿಸಲಿದ್ದಾರೆ.