×
Ad

ಪತ್ರಿಕೆ ಮಾರುವಲ್ಲಿಂದ ಐಐಟಿ ಪಾಸಾಗುವವರೆಗಿನ ಶಿವಾಂಗಿಯ ಯಶೋಗಾಥೆ

Update: 2016-11-04 16:11 IST

ಕಾನ್ಪುರ, ನ.4: ಇದು ಶಿವಾಂಗಿ ಎಂಬ ಪ್ರತಿಭಾನ್ವಿತ ಯುವತಿಯ ಯಶೋಗಾಥೆ. ಒಂದೊಮ್ಮೆ ಪತ್ರಿಕೆ ಮಾರುತ್ತಿದ್ದ ಈ ಹುಡುಗಿ ಐಐಟಿ ರೂರ್ಕಿಯಲ್ಲಿ ಪದವಿ ಪಡೆದು ಈಗ ಉತ್ತಮ ಉದ್ಯೋಗ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ.

ಶಿವಾಂಗಿ ಹುಟ್ಟಿದ್ದು ಕಾನ್ಪುರದಿಂದ 60 ಕಿ.ಮೀ. ದೂರದ ದೇಹಾ ಎಂಬ ಗ್ರಾಮದಲ್ಲಿ. ಆಕೆ ತನ್ನ ತಂದೆಯೊಡಗೂಡಿ ಪತ್ರಿಕೆಗಳನ್ನು ಹಾಗೂ ಮ್ಯಾಗಝೀನ್ ಗಳನ್ನು ಮಾರಾಟ ಮಾಡುತ್ತಿದ್ದಳು. ಸ್ಥಳೀಯ ಸರಕಾರಿ ಶಾಲೆಗೆ ಹೋಗುತ್ತಿದ್ದ ಆಕೆ ಸಮಯ ಸಿಕ್ಕಾಗೆಲ್ಲಾ ತನ್ನ ತಂದೆಯ ಅಂಗಡಿಯಲ್ಲಿ ಕುಳಿತು ಕಲಿಯುತ್ತಿದ್ದಳು. ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಕೂಲಕರವಾಗಲು ಆನಂದ್ ಕುಮಾರ್ ಎಂಬವರು ಪ್ರಾರಂಭಿಸಿದ ಸೂಪರ್ 30 ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡಳು. ಶಿವಾಂಗಿ ಆನಂದ್ ಕುಮಾರ್ ಅವರನ್ನು ಭೇಟಿಯಾದಳು ಹಾಗೂ ಈ ಕಾರ್ಯಕ್ರಮಕ್ಕೆ ಆಯ್ಕೆ ಕೂಡ ಆದಳು.ಮುಂದೆ ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾಗಿ ಐಐಟಿ ರೂರ್ಕಿಯಲ್ಲಿ ಪದವಿ ಪಡೆದು ಈಗ ಉದ್ಯೋಗವನ್ನೂ ಪಡೆದಿದ್ದಾಳೆ ಈ ಯುವತಿ.

ಶಿವಾಂಗಿಯ ಸಾಹಸಗಾಥೆಯನ್ನುಕುಮಾರ್ ತಮ್ಮ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ್ದು ತಮ್ಮ ಕಾರ್ಯಕ್ರಮದಂಗವಾಗಿ ಆಕೆತರಬೇತಿ ಹೊಂದುತ್ತಿದ್ದಾಗ ತಮ್ಮ ಮನೆ ಮಗಳಂತೆಯೇ ಇದ್ದಳು. ಹಾಗೂ ತಮ್ಮ ತಾಯಿಗೆ ಅಸೌಖ್ಯವಾದಾಗಲೆಲ್ಲ ಅವರ ಸೇವೆಗೈಯ್ಯುತ್ತಿದ್ದಳು ಎಂಬುದನ್ನು ಸ್ಮರಿಸುತ್ತಾರೆ. ಆಕೆಗೆ ಉದ್ಯೋಗ ದೊರೆತಿದೆ ಎಂದು ತಿಳಿದಾಗ ತಮ್ಮ ಇಡೀ ಕುಟುಂಬ ಸಂತಸ ಪಟ್ಟಿತ್ತು ಹಾಗೂ ತನ್ನ ತಾಯಿ ಮುಂದಿನ ಜನ್ಮದಲ್ಲಿ ತಮಗೆ ಶಿವಾಂಗಿಯಂತಹ ಹುಡುಗಿ ಮಗಳಾಗಿ ಹುಟ್ಟಿ ಬರಲಿ ಎಂದು ಹಾರೈಸಿದ್ದಾರೆ ಎಂದು ಆನಂದ್ ಕುಮಾರ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಮೂಲತಃ ಹಿಂದಿಯಲ್ಲಿ ಬರೆಯಲಾಗಿದ್ದ ಅವರ ಪೋಸ್ಟ್ ವೈರಲ್ ಆಗಿದ್ದು ಮೂರೇ ಮೂರು ದಿನಗಳಲ್ಲಿ 9,000 ಕ್ಕೂ ಅಧಿಕ ಲೈಕುಗಳನ್ನು ಪಡೆದಿದೆ ಹಾಗೂ 900 ಕ್ಕೂ ಹೆಚ್ಚು ಮಂದಿ ಅದನ್ನು ಶೇರ್ ಕೂಡ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News