×
Ad

ದೋಷಯುಕ್ತ 28 ಲ.ವಾಷಿಂಗ್ ಮಷಿನ್ ವಾಪಸ್ ಪಡೆಯಲಿರುವ ಸ್ಯಾಮ್ಸಂಗ್

Update: 2016-11-04 21:49 IST

ವಾಷಿಂಗ್ಟನ್,ನ.4: ಬ್ಯಾಟರಿ ದೋಷದಿಂದಾಗಿ ವಿಶ್ವಾದ್ಯಂತದಿಂದ ತನ್ನ ಕನಿಷ್ಠ 25 ಲಕ್ಷ ಗೆಲಾಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ಗಳನ್ನು ವಾಪಸ್ ಪಡೆದುಕೊಂಡು ಹೈರಾಣಾಗಿರುವ ದ.ಕೊರಿಯಾ ಮೂಲದ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್ ಇದೀಗ ಹೊಸದೊಂದು ಸಂಕಷ್ಟಕ್ಕೆ ಸಿಲುಕಿದೆ. ಸುರಕ್ಷತಾ ಕಳವಳಗಳನ್ನು ನಿವಾರಿಸಲು ಅಮೆರಿಕದಾದ್ಯಂತದಿಂದ ತನ್ನ 28 ಲಕ್ಷ ಟಾಪ್-ಲೋಡ್ ವಾಷಿಂಗ್ ಮಷಿನ್‌ಗಳನ್ನು ವಾಪಸ್ ಪಡೆದುಕೊಳ್ಳಬೇಕಾದ ಅನಿವಾರ್ಯ ಕರ್ಮವನ್ನು ಅದು ಎದುರಿಸುತ್ತಿದೆ.
ಬಳಕೆಯ ಸಂದರ್ಭ ಸ್ಯಾಮ್ಸಂಗ್ ವಾಷಿಂಗ್ ಮಷಿನ್‌ನ ಮೇಲ್ಭಾಗವು ಅನಿರೀಕ್ಷಿತವಾಗಿ ಯಂತ್ರದ ಬಾಡಿಯಿಂದ ಕಳಚಿಕೊಳ್ಳಬಹುದು,ಸ್ಫೋಟಗೊಳ್ಳಬಹುದು ಮತ್ತು ಸಮೀಪದಲ್ಲಿರುವ ವ್ಯಕ್ತಿಯನ್ನು ಗಾಯಗೊಳಿಸಬಹುದು ಎಂದು ಅಮೆರಿಕದ ಬಳಕೆದಾರ ಉತ್ಪನ್ನ ಸುರಕ್ಷಾ ಆಯೋಗವು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಕಂಪನಿಯು ಈಗ ವಾಪಸ್ ಪಡೆದುಕೊಳ್ಳುತ್ತಿರುವ ವಾಷಿಂಗ್ ಮಷಿನ್‌ಗಳು ಮಾರ್ಚ್ 2011ರಿಂದ ನವಂಬರ್ 2016ರ ನಡುವಿನ ಅವಧಿಯಲ್ಲಿ ತಯಾರಾಗಿದ್ದವು.
ಈ ಸುರಕ್ಷತಾ ದೋಷಕ್ಕೆ ಸಂಬಂಧಿಸಿದಂತೆ ಗಾಯಗಳ ಒಂಬತ್ತು ದೂರುಗಳನ್ನು ಸ್ಯಾಮ್ಸಂಗ್ ಸ್ವೀಕರಿಸಿದೆ. ದವಡೆ ಮುರಿತ,ಭುಜಕ್ಕೆ ಗಾಯ ಇತ್ಯಾದಿ ಪ್ರಕರಣಗಳು ಇವುಗಳಲ್ಲಿ ಸೇರಿವೆ.
 ತೊಂದರೆಗೊಳಗಾಗಿರುವ ಗ್ರಾಹಕರಿಗೆ ವಾಷಿಂಗ್ ಮಷಿನ್‌ನ ಮೇಲ್ಭಾಗವನ್ನು ಸುಭದ್ರಗೊಳಿಸುವುದು ಸೇರಿದಂತೆ ಮನೆಗೆ ಬಂದು ಉಚಿತ ದುರಸ್ತಿಗೊಳಿಸುವ ಆಯ್ಕೆಯ ಜೊತೆಗೆ ವಾರಂಟಿಯ ಒಂದು ವರ್ಷದ ವಿಸ್ತರಣೆ ಅಥವಾ ರಿಯಾಯಿತಿಯ ಕೊಡುಗೆಯನ್ನು ಸ್ಯಾಮ್ಸಂಗ್ ಮುಂದಿಟ್ಟಿದೆ. ಈ ರಿಯಾಯಿತಿಯನ್ನು ಹೊಸ ಸ್ಯಾಮ್ಸಂಗ್ ಅಥವಾ ಇತರ ಯಾವುದೇ ಬ್ರಾಂಡ್‌ನ ವಾಷಿಂಗ್ ಮಷಿನ್ ಖರೀದಿಗೆ ಬಳಸಬಹುದಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News