ಬಿಜೆಪಿಯ ಎನ್‌ಕೌಂಟರ್ ಗೆ ಬಲಿಯಾಗುವ ಮೊದಲು ಸರಿಯಾಗಿ ಯೋಚಿಸಿ ಹೆಗ್ಡೆಯವರೇ !

Update: 2016-11-05 06:44 GMT

ಈಗ ದೇಶದಲ್ಲಿ ನಡೆಯುತ್ತಿರುವುದೆಲ್ಲಾ ನಿರೀಕ್ಷಿತವೇ. ಈ ಸರಕಾರ ಬೇಡ ಎಂದು ಮತ ಚಲಾಯಿಸಿದ ಶೇ.69 ಮತದಾರರು ಈ ಅಪಾಯವನ್ನು ಮೊದಲೇ ಊಹಿಸಿದ್ದರು. ಇವರ ಕೈಗೆ ದೇಶ ಕೊಟ್ಟರೆ ಏನೆಲ್ಲಾ ಅನಾಹುತಗಳನ್ನು ನೋಡಬೇಕಾಗುತ್ತೆ ಎಂಬುದು ಈ ಶೇ.69 ಜನರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಶೇ.31 ಭಕ್ತರು ತಮ್ಮ ಮೆದುಳನ್ನು ಅಡವು ಇಟ್ಟುಬಿಟ್ಟಿದ್ದರು. ಅವರು ಯೋಚನೆ ಮಾಡುವ ಸಾಮರ್ಥ್ಯ ಹಾಗೂ ಮನಸ್ಸು ಎರಡನ್ನೂ ಕಳಕೊಂಡಿದ್ದರು. ಆದ್ದರಿಂದ ಸಂಭಾವ್ಯ ಅಪಾಯದ ಬಗ್ಗೆ ಅವರು ಚಿಂತಿಸಲಿಲ್ಲ. ಅವರು ಇಲ್ಲಿನ ರಸ್ತೆಗಳು ಅಮೆರಿಕ ರಸ್ತೆಯಾಗುತ್ತವೆ, ಹಾದಿ ಬೀದಿಗಳು ಸಿಂಗಾಪುರ್ ಆಗುತ್ತವೆ ಎಂಬ ಭ್ರಮೆಯಿಂದಲೇ ಓಟು ಹಾಕಿದರು. ಈ  ಶೇ. ಮಂದಿ ಪೈಕಿ ಬಹುತೇಕರು ಈಗ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಪ್ರಮಾದದ ಅರಿವು ಅವರಿಗಾಗಿದೆ. ಅದರಲ್ಲೂ ಈಗಲೂ ಚರಂಡಿಗೆ ಬಿದ್ದರೂ ಮೂಗು ಮೇಲೆ ಎಂದು ಸಮರ್ಥಿಸಿಕೊಳ್ಳುವವರು ಇದ್ದಾರೆ. ಅವರನ್ನು ಬಿಡಿ. ಅವರು ನಿದ್ರೆಯಲ್ಲಿರುವವರಲ್ಲ. ಹಾಗೆ ನಟಿಸುತ್ತಿರುವವರು. ದೇಶ ಹಾಳಾಗಿ ಹೋಗಲಿ, ಹಿಂದುತ್ವ ರಾರಾಜಿಸಲಿ ಎಂದೇ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿ, ಅವರು ಆಯ್ಕೆ ಮಾಡಿದ ಈ ಜನವಿರೋಧಿ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಆದರೆ ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಯೊಂದು ಮಾತ್ರ ತೀರಾ ಅನಿರೀಕ್ಷಿತ ಮಾತ್ರವಲ್ಲ, ಅತ್ಯಂತ ಆಘಾತಕಾರಿಯಾಗಿದೆ. ಇದು ಪ್ರತಿಯೊಬ್ಬ ಪ್ರಜ್ಞಾವಂತನೂ ತನ್ನನ್ನು ತಾನೇ ಚಿವುಟಿ ನೋಡಿಕೊಳ್ಳಬೇಕಾದ, ಖಾತರಿ ಮಾಡಿಕೊಳ್ಳಬೇಕಾದ ಬೆಳವಣಿಗೆ. ಹಾಗಂತ ರಾಜಕೀಯದಲ್ಲಿ ಇವೆಲ್ಲಾ ಮಾಮೂಲು. ಇಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂದೆಲ್ಲಾ ಹೇಳಿ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಈ ವಿಷಯದಲ್ಲಿ ಅದು ಅಷ್ಟು ಸುಲಭ ಅಲ್ಲ. ಏಕೆಂದರೆ , ಇದರಲ್ಲಿ ಇರುವವರು ಕೇವಲ ರಾಜಕಾರಣಿ ಅಲ್ಲ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೆವು, ಅಂದರೆ ತಪ್ಪು ತಿಳಿದುಕೊಂಡಿದ್ದೆವು. ಅವರನ್ನು ಒಬ್ಬ ರಾಜಕೀಯ ಮುತ್ಸದ್ದಿ, ಒಬ್ಬ ಪ್ರಜ್ಞಾವಂತ ಜನನಾಯಕ, ಪ್ರಾಮಾಣಿಕವಾಗಿ ಜಾತ್ಯತೀತ ಎಂದು ನಾವು ಅಂದುಕೊಂಡಿದ್ದೆವು, ಅಂದರೆ ತಪ್ಪಾಗಿ ಅಂದುಕೊಂಡಿದ್ದೆವು. ಒಬ್ಬ ಇಷ್ಟೆಲ್ಲಾ ದಶಕಗಳ ಕಾಲ ಹೀಗೆ ಮುಖವಾಡ ಹಾಕಿ ಕೊಂಡಿರಲು ಸಾಧ್ಯವೇ ? ಎಂದು ಬೆಚ್ಚಿ ಬೀಳುವಂತಹ ಪರಿಸ್ಥಿತಿ ಇದು. ಕಾಂಗ್ರೆಸ್ ನಲ್ಲಿರುವವರೆಲ್ಲರೂ ಜಾತ್ಯತೀತರಲ್ಲ ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಇವರೂ ... ! ಏಕೆಂದರೆ ಇವರು ಜಯಪ್ರಕಾಶ್ ಹೆಗ್ಡೆ . ಹಾಗಾಗಿ ಈ ಪ್ರಶ್ನೆ ! 

ಹೆಗ್ಡೆಯವರೇ, ಅದಕ್ಕೆ ಜಾರ್ಜ್ ಬರ್ನಾರ್ಡ್ ಷಾ ಆಗಲೇ ಹೇಳಿದ್ದು ,  "Politics is the last resort for the scoundrels" ಅಂತ . ಆದರೆ ನಾವು ಮೂರ್ಖರು ನೋಡಿ. ನಿಮ್ಮನ್ನು ನಂಬಿ ಬಿಟ್ಟೆವು. ಅಥವಾ ನೀವು ನಮ್ಮನ್ನು ನಂಬಿಸಿಬಿಟ್ಟಿರಿ. ಈಗ ತಪ್ಪು ಯಾರದ್ದು ಎಂದೇ ದೊಡ್ಡ ಗೊಂದಲ. 

ಒಪ್ಪೋಣ. ಕಾಂಗ್ರೆಸ್ , ಜೆಡಿಎಸ್ ನಲ್ಲಿ ಈಗ ಮಿಂಚುತ್ತಿರುವ ಹೆಚ್ಚಿನವರಿಗೆ ಹೋಲಿಸಿದರೆ ನಿಮಗೆ ಹೆಚ್ಚು ಸಾಮರ್ಥ್ಯ ಇದೆ, ಅರ್ಹತೆ ಇದೆ. ಒಪ್ಪೋಣ. ಅವರಿಗೆ ಹೋಲಿಸಿದರೆ ನಿಮಗೆ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಈ ಎರಡೂ ಪಕ್ಷಗಳು ನಿಮ್ಮನ್ನು ಬಳಸಿ, ಬಿಸಾಡಿದವು ಎಂದು ನೀವು ಹೇಳಿದರೂ ವಾದಕ್ಕೆ ಒಪ್ಪೋಣ ಹೆಗ್ಡೆಯವರೇ. ಆದರೂ, ನಮ್ಮವರು ಅನ್ನ ನೀಡಲಿಲ್ಲ ಎಂದು ಬೇರೆಯವರ ಹೇಸಿಗೆಗೆ ಕೈ ಹಾಕುವುದೇ ? ಛೀ.. ಛೀ... 

ಕಳೆದ ವಿಧಾನ ಪರಿಷತ ಚುನಾವಣೆಗೆ ನೀವು ಬಂಡಾಯ ಅಭ್ಯರ್ಥಿಯಾಗಿ ನಿಂತಾಗ ನಾವೆಲ್ಲಾ ನಿಮ್ಮ ಜೊತೆ ನಿಂತು ಬಿಟ್ಟೆವು. ಯಾಕೆ ? ನಾವೇನೂ ಈಗ ನೀವು ಯಾರ ಹೆಸರಲ್ಲಿ ಬಿಜೆಪಿ ಸೇರಲು ಹೊರಟಿದ್ದೀರೋ ಆ ಬೆಂಬಲಿಗರಲ್ಲ. ನಿಮ್ಮನ್ನು ಒಮ್ಮೆಯೂ ನಾವು ಭೇಟಿಯೇ ಆಗಿಲ್ಲ. ಇನ್ನು ನಿಮ್ಮಿಂದ ಏನಾದರೂ ಕೆಲಸ ನಮಗೆ ವೈಯಕ್ತಿಕವಾಗಿ ಮಾಡಿಸಿಕೊಂಡವರೂ ಅಲ್ಲ. ಆದರೂ ನಿಮ್ಮ ಜೊತೆ ನಾವು ನಿಂತೆವು. ಯಾಕೆ ? ನಾವು ನಿಮ್ಮ ಅಭಿಮಾನಿಗಳಾಗಿದ್ದೆವು ಹೆಗ್ಡೆಯವರೇ ! ಒಬ್ಬ ಜನಪರ ರಾಜಕಾರಣಿ ಎಂದರೆ ಹೆಗ್ಡೆಯವರ ಹಾಗೆ ಇರಬೇಕು ಎಂದು ಹೇಳಿ ತಿರುಗಿದೆವು, ಜಗಳ ಮಾಡಿಕೊಂಡೆವು. ಕಾಂಗ್ರೆಸ್ ಅಭ್ಯರ್ಥಿ ಯಾವುದೇ ತಪ್ಪು ಮಾಡಿರದಿದ್ದರೂ ಅವರು ಸಮರ್ಥರಲ್ಲ, ಸೋಲಿಸಿ ಎಂದು ಕರೆಕೊಟ್ಟೆವು. ಕೊನೆಗೂ ನೀವು ಸೋತಾಗ ನಾವೇ ಸೋತಂತೆ ಮನಸ್ಸು ಭಾರ ಮಾಡಿಕೊಂಡೆವು. ಆಸ್ಕರ್ ಫೆರ್ನಾಂಡಿಸ್ ಅವರು ಅದೇನೇ ಮಾಡಿರಲಿ. ಆದರೆ ಆ    ಸಂದರ್ಭದಲ್ಲಿ  ಅವರು ಹೇಳಿದ ಮಾತನ್ನು ಈಗ ನೀವು ನಿಜ ಮಾಡಿಬಿಟ್ಟಿರಿ. ಅದೇ ನಮ್ಮ ಪಾಲಿಗೆ ಅತ್ಯಂತ ನಾಚಿಕೆಗೇಡಿನ ವಿಷಯ. 

ಬೆಂಬಲಿಗರನ್ನು ಕೈ ಬಿಡಲು ಆಗುವುದಿಲ್ಲ ಎಂದು ಬಿಜೆಪಿ ಸೇರಲು ನೀವು ಕಾರಣ ಕೊಟ್ಟಿದ್ದೀರಿ. ನಿಮಗೆ ಹೀಗೆ ಹೇಳಲು ನಾಚಿಕೆ ಆಗಲಿಲ್ಲವೇ ? ನಿಮ್ಮ ಬೆಂಬಲಿಗರು ಹೊಟ್ಟೆಪಾಡಿಗೆ ರಾಜಕೀಯ ಮಾಡಿಕೊಂಡಿದ್ದಾರ ? ಅವರಿಗೆ ಕೆಲಸ, ಉದ್ಯೋಗ, ಉದ್ಯಮ ಯಾವುದೂ ಇಲ್ಲವೇ ? ಅವರೆಲ್ಲಾ ನಿಮ್ಮ ರಾಜಕೀಯದಲ್ಲಿ ಬೆಳೆದ ಬೆಳೆಯಿಂದಲೇ ಹಸಿವು ನೀಗಿಸಿಕೊಳ್ಳುತ್ತಾರಾ ? ಅಂತಹವರೇ ನಿಮ್ಮ ಬೆಂಬಲಿಗರೇ ? ಛೀ.. ನೀವು ಹೀಗೆ ಹೇಳಿ... 

ಹೋಗಲಿ, ಬಿಜೆಪಿ ಸೇರಿ ನೀವು ಈ ಯಡಿಯೂರಪ್ಪ, ಈಶ್ವರಪ್ಪ, ಶೋಭಾ , ಸಿಟಿ ರವಿ ಪಕ್ಕ ಅದೇಗೆ ಕೂರುತ್ತೀರಿ ? ಮೋದಿ, ಅಮಿತ್ ಷಾ ರನ್ನು ಹೇಗೆ ಹೊಗಳುತ್ತೀರಿ ? ಅವರನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ? ಭೋಪಾಲ್ ನಲ್ಲಿ ನಡೆದ 'ಎನ್‌ಕೌಂಟರ್' ಬಗ್ಗೆ ನೀವು ಏನು ಹೇಳುತ್ತೀರಿ ? ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ? ಎನ್ ಡಿ ಟಿ ವಿ ಮೇಲೆ ಮೋದಿ ಸರಕಾರ ಹಾಕಿರುವ ನಿಷೇಧವನ್ನು ಹೇಗೆ ಸರಿ ಎಂದು ಹೇಳುತ್ತೀರಿ ? ದಾದ್ರಿಯಲ್ಲಿ ಮಾಂಸದ ಹೆಸರಲ್ಲಿ ಅಮಾಯಕ ಅಖ್ಲ್ಯಾಕ್ ನನ್ನ ಕೊಂದರಲ್ಲ , ಅದರ ಬಗ್ಗೆ ಹೇಗೆ ಮಾತನಾಡುತ್ತೀರಿ ? ಗುಜರಾತ್ ನಲ್ಲಿ ನಾಲ್ವರು ದಲಿತರನ್ನು ಸಂಘ ಪರಿವಾರದವರು ಮೃಗಗಳಂತೆ ಹೊಡೆದರಲ್ಲ, ಅದಕ್ಕೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ? ಅದೆಲ್ಲಾ ಬಿಡಿ, ನಿಮ್ಮ ಉಡುಪಿಯಲ್ಲೇ ತಮ್ಮ ಪಕ್ಷದ ಮುಖಂಡನನ್ನೇ ಅನ್ಯಾಯವಾಗಿ ಕೊಂದು ಬಿಟ್ಟರಲ್ಲಾ ... ಅದನ್ನು ಏನೆಂದು ವ್ಯಾಖ್ಯಾನ ನೀಡುತ್ತೀರಿ ?

ನೀವು ಇನ್ನೂ ಬಿಜೆಪಿ ಸೇರಿಲ್ಲ. ಸೇರುವುದಿಲ್ಲ ಎಂಬ ಆಶಾಭಾವನೆ ನಮಗೆ ಈಗಲೂ ಇದೆ. ಆದರೆ ನೀವು ಸೇರಿಯೇ ಬಿಟ್ಟರೆ ನಾವು ಸುಮ್ಮನಿರುವುದಿಲ್ಲ. ಏಕೆಂದರೆ , ನಾವು ನಿಮ್ಮ ಅಭಿಮಾನಿಗಳು, ಅಂಧಾಭಿಮಾನಿಗಳಲ್ಲ. ನಾವು ನಿಮ್ಮ ಚೇಲಾಗಳಲ್ಲ. ನಾವು ನಿಮ್ಮ ಅನುಯಾಯಿಗಳೂ ಅಲ್ಲ. ಈವರೆಗೆ ನಿಮ್ಮನ್ನು ಗೆಲ್ಲಿಸಲು ನಾವು ತೆರೆಮರೆಯಲ್ಲಿ ದುಡಿದೆವು. ಇನ್ನು ನಿಮ್ಮನ್ನು ಸೋಲಿಸಲು ಎದುರು ಬಂದು ಕೆಲಸ ಮಾಡುತ್ತೇವೆ. ಏಕೆಂದರೆ ಜನರಿಗೆ ಮೋಸ ಮಾಡುವ ರಾಜಕಾರಣಿಗಳನ್ನು ಹಾಗೆ ಬಿಡುವುದು , ಪ್ರಜಾಪ್ರಭುತ್ವದ ಲಕ್ಷಣ ಅಲ್ಲ. ಈವರೆಗೆ ನಿಮ್ಮ ಪರವಾಗಿದ್ದೆವು. ಇನ್ನು ತಟಸ್ಥವಾಗಿರುವುದಿಲ್ಲ. ಇನ್ನು ನಿಮ್ಮ ವಿರುದ್ಧ ನಮ್ಮ ಹೋರಾಟ. 

ಈಗಲೂ ಕಾಲ ಮಿಂಚಿಲ್ಲ . ಬಿಜೆಪಿ ಎಂತೆಂತಹ ರಾಜಕಾರಣಿಗಳನ್ನು ನುಂಗಿ ನೀರು ಕುಡಿದಿದೆ ಎಂದು ನಿಮಗೆ ಗೊತ್ತಿಲ್ಲವೇ ? ನೀವು ಅದಕ್ಕೆ ಯಾವ ಮಹಾ ?  ಬಿಜೆಪಿಯ ಎನ್‌ಕೌಂಟರ್ ಗೆ ಬಲಿಯಾಗುವ ಮೊದಲು ಯೋಚಿಸಿ, ಸರಿಯಾಗಿ ಯೋಚಿಸಿ ಹೆಗ್ಡೆಯವರೇ . 

Writer - ಶಶಿಕಿರಣ್ ಪುತ್ತೂರು

contributor

Editor - ಶಶಿಕಿರಣ್ ಪುತ್ತೂರು

contributor

Similar News