ಸುಂದರಿ ಅಕ್ಕನ ಸ್ಟಾಲ್‌ನಲ್ಲಿ ಭರ್ಜರಿ ಫಿಶ್ ಫ್ರೈ, ಮಟನ್ ಊಟ- ಅದೂ ಫ್ರೀ!

Update: 2016-11-05 08:00 GMT

ಚೆನ್ನೈನ ಮರೀನಾ ಸ್ವಿಮ್ಮಿಂಗ್ ಪೂಲ್ ಬಳಿ ಸುಮಾರು 500 ಹಸಿದ ಹೊಟ್ಟೆಯ ಗ್ರಾಹಕರು ಮೀನು, ಸಿಗಡಿ ಮತ್ತು ಮಟನ್ ಆಹಾರವನ್ನು ಎಸ್ ಸುಂದರಿಯ ಮಳಿಗೆಯಿಂದ ಸೇವಿಸಿದ್ದಾರೆ. ಆದರೆ ಇವರು ಯಾರೂ ಒಂದು ರೂಪಾಯಿ ಕೂಡ ಖರ್ಚು ಮಾಡಲಿಲ್ಲ ಎನ್ನುವುದು ವಿಶೇಷ. 2005ರಲ್ಲಿ ಹೃದಯ ರೋಗದಿಂದ ಪ್ರಾಣ ಕಳೆದುಕೊಂಡ ತಮ್ಮ ಪತಿ ಶೇಖರ್ ಅವರ ವರ್ಷಾಂತಿಕದ ದಿನ ಸ್ಮರಣೆಗಾಗಿ ಸುಂದರಿ ಉಚಿತ ಆಹಾರ ವಿತರಿಸುತ್ತಾರೆ.

ಅವರು ಮಾಡಿರುವ ಸಣ್ಣ ಮಳಿಗೆಯ ಮೇಲೆ ಹೆಸರೇನೂ ಇಲ್ಲದಿದ್ದರೂ, ಇದಕ್ಕೆ ಸುಂದರಿ ಅಕ್ಕನ ಕಡಾಯಿ ಎಂದೇ ಜನರು ಹೆಸರಿಟ್ಟಿದ್ದಾರೆ. ಇದು ಅವರಿಗೆ ಉದ್ಯಮ ಮಾತ್ರವಲ್ಲ, ಪ್ರೀತಿಯ ಸೂಚಕ. ರುಚಿಯಾದ ಆಹಾರವನ್ನು ಜನರಿಗೆ ಉಣ ಬಡಿಸುವುದು ಆದರ್ಶ ಕೆಲಸ ಎನ್ನುವುದು ಸುಂದರಿ ನಂಬಿಕೆ. ಹೀಗಾಗಿ ಬೆಳಗಿನ ಜಾವ 4 ಗಂಟೆಗೇ ಎದ್ದು ಕಾಸಿಮೆಡುಗೆ ಹೋಗಿ ತಾಜಾ ಮೀನು ಖರೀದಿಸಿ ಆಹಾರ ಸಿದ್ಧಮಾಡುತ್ತಾರೆ.

 ಆಹಾರದ ಮಳಿಗೆ ತೆರೆಯುವ ಕಲ್ಪನೆ ಅವರಿಗೆ 16 ವರ್ಷಗಳ ಹಿಂದೆ ಚೆನ್ನೈ ರೆಸ್ಟೊರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಮೂಡಿತ್ತು. “ರೆಸ್ಟೊರೆಂಟ್‌ನಲ್ಲಿ ಕೊಟ್ಟ ಆಹಾರ ಕೆಟ್ಟದಾಗಿತ್ತು. ನಾನೇ ಅಡುಗೆ ಮಾಡಿದರೆ ಜನರಿಗೆ ಇದಕ್ಕಿಂತ ಉತ್ತಮ ಗುಣಮಟ್ಟದ ಆಹಾರ ಕೊಡಬಹುದು ಎಂದುಕೊಂಡೆ. ಮೊದಲಿಗೆ ನನ್ನದೇ ಟಿಫಿನ್ ಸ್ಟಾಲ್ ಮಾಡಿದೆ. ನಂತರ ಮಧ್ಯಾಹ್ನದ ಊಟದಲ್ಲಿ ಮೀನು ಮತ್ತು ಮಟನ್ ಸಾಂಬಾರ್ ಕೊಡಲು ಆರಂಭಿಸಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು” ಎನ್ನುತ್ತಾರೆ. ಬಹಳಷ್ಟು ಮಂದಿ ಮೀನು ಆಹಾರವನ್ನು ಮರೀನಾ ಕಡಲತೀರದಲ್ಲಿ ಮಾರುತ್ತಾರೆ. ಆದರೆ ಸುಂದರಿ ತಯಾರಿಸಿದ ಸಿಗಡಿ ಸಾಂಬಾರ್, ಮಟನ್ ಮಸಾಲ ಮತ್ತು ಕರಿದ ಮೀನು ಬಹಳ ರುಚಿಕರ. “ನಾನು ಪ್ರತೀ ತಿಂಗಳ ಅಂತ್ಯದಲ್ಲಿ ತಯಾರಿಸುವ ವಿಶೇಷ ಮಸಾಲೆಯಲ್ಲಿ ಮೀನು ಮತ್ತು ಮಟನ್ ತಯಾರಿಸುತ್ತೇನೆ. ಮೀನನ್ನು ವ್ಯವಸ್ಥಿತವಾಗಿ ಬೇಯಿಸುತ್ತೇನೆ. ಬೇರೆಯವರಂತೆ ಮೊದಲೇ ಕರಿದು ಇಟ್ಟುಕೊಳ್ಳುವುದಿಲ್ಲ” ಎಂದು ಸುಂದರಿ ಹೇಳುತ್ತಾರೆ.

ಕೇವಲ 30 ರೂಪಾಯಿಗೆ ಜನರು ಸಾಕಷ್ಟು ಅನ್ನ ಮತ್ತು ಮೀನು ಸಾಂಬಾರ್ ಪಡೆಯಬಹುದು. ಮೀನಿನ ಜತೆಗೆ ಸುಂದರಿ ತಯಾರಿಸಿದ ಮಟನ್ ಸಾಂಬಾರ್ ಕೂಡ ಪ್ರಸಿದ್ಧ. “ನನಗೆ ಕೋಳಿ ಇಷ್ಟವಿಲ್ಲ. ಅದು ಆರೋಗ್ಯಕರವಲ್ಲ” ಎನ್ನುತ್ತಾರೆ. ಸುಂದರಿಯ ಹಿರಿಯ ಮಗ ಹೊಟೇಲ್ ಮ್ಯಾನೇಜ್ಮೆಂಟ್ ಕಲಿತಿದ್ದಾರೆ. ಅವರು ಈ ಮಳಿಗೆಯಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಸಣ್ಣ ಮಗ ಹಡಗಿನಲ್ಲಿ ಇಲೆಕ್ಟ್ರಿಶಿಯನ್ ಆಗಿದ್ದಾನೆ. “ನನ್ನ ಮಕ್ಕಳು ಈ ಉದ್ಯಮದಲ್ಲಿ ಆಸಕ್ತಿ ಹೊಂದಿಲ್ಲ. ನನಗೆ ಮಾತ್ರ ಇಷ್ಟವಿದೆ” ಎನ್ನುತ್ತಾರೆ. ಸುಂದರಿ ದೊಡ್ಡ ಕರಿದ ಮೀನನ್ನು ಕೇವಲ ರೂ. 100ಕ್ಕೆ ಮಾರುತ್ತಾರೆ ಎಂದು ಅವರ ಪ್ರತಿಸ್ಪರ್ಧಿಗಳು ಸಿಟ್ಟಾಗುತ್ತಾರೆ. ಆದರೆ ಗ್ರಾಹಕರ ತೃಪ್ತಿಯೇ ಮುಖ್ಯ ಎನ್ನುವುದು ಸುಂದರಿ ಅಭಿಪ್ರಾಯ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News