×
Ad

ಶತ್ರುವಿನ ಹೆಬ್ಬಾಗಿಲಿನಲ್ಲಿ ಹೋರಾಟಕ್ಕೆ ಬಿಎಸ್‌ಎಫ್‌ನ ಮಹಿಳಾ ಯೋಧರು ಸಜ್ಜು

Update: 2016-11-05 14:54 IST

ಅಬ್ದುಲ್ಲಿಯಾಂ(ಆರ್‌ಎಸ್ ಪುರ),ನ.5: ಪ್ರತಿದಿನ ಸೂಕ್ಷ್ಮಮುಳುಗಿದ ಬೆನ್ನಿಗೇ ಬಿಎಸ್‌ಎಫ್‌ನ ಮಹಿಳಾ ಕಾನ್‌ಸ್ಟೇಬಲ್‌ಗಳಾದ ರಬೀಂದರ್ ಕೌರ್ ಮತ್ತು ಅನುಬಾಲಾ ತಮ್ಮ 5.56 ಎಂಎಂ ಇನ್ಸಾಸ್ ರೈಫಲ್‌ಗಳನ್ನು ಹೆಗಲಿಗೇರಿಸಿಕೊಂಡು ಜಮ್ಮುವಿನ ಗಡಿಠಾಣೆಗಳಲ್ಲೊಂದರತ್ತ ಹೆಜ್ಜೆಗಳನ್ನು ಹಾಕುತ್ತಾರೆ.

ತಮ್ಮ ಗುರಿ ಮುಟ್ಟಿದ ತಕ್ಷಣ ಈ ಮಹಿಳಾ ಯೋಧರು ಪಾಕಿಸ್ತಾನಿ ರೇಂಜರ್ಸ್‌ನ ಸಿಬ್ಬಂದಿಗಳ ಮೇಲೆ ನಿಗಾ ಇರಿಸಲು ಸೂಕ್ತ ಜಾಗದಲ್ಲಿ ಕರ್ತವ್ಯಕ್ಕೆ ಸಜ್ಜಾಗುತ್ತಾರೆ. ಮೀಡಿಯಂ ಮಷಿನ್‌ಗನ್ ಮತ್ತು 51ಎಂಎಂ ಮಾರ್ಟ್‌ರ್ ಶೆಲ್‌ಗಳನ್ನು ಬಳಸುವಲ್ಲಿ ತರಬೇತುಗೊಂಡಿರುವ ಈ ಯೋಧೆಯರು ಗಡಿಯಾಚೆಯ ಗುಂಡಿನ ದಾಳಿಯಿಂದ ಸ್ಥಳೀಯರು ಅಥವಾ ತಮ್ಮ ಸಹೋದ್ಯೋಗಿಗಳು ಗಾಯಗೊಂಡರೆ ಪ್ರತಿದಾಳಿ ನಡೆಸುವ ಸಂದರ್ಭದಲ್ಲಿ ಅತ್ಯಂತ ನಿಷ್ಕರುಣಿಗಳಾಗಿರುತ್ತಾರೆ.

 ಬಿಎಸ್‌ಎಫ್ ರಬೀಂದರ್ ಮತ್ತು ಅನುಬಾಲಾ ಸೇರಿದಂತೆ ತನ್ನ 90ಕ್ಕೂ ಅಧಿಕ ಮಹಿಳಾ ಸಿಬ್ಬಂದಿಗಳನ್ನು ಜಮ್ಮುವಿನಲ್ಲಿ ಅಂತಾರಾಷ್ಟ್ರೀಯ ಗಡಿಯ 192 ಕಿ.ಮೀ. ಗಳುದ್ದಕ್ಕೂ ನಿಯೋಜಿಸಿದೆ.

ನಾವು ನೂತನ ಮಹಿಳಾ ಶಕ್ತಿಯಾಗಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು ರಬೀಂದರ್. ಜಮ್ಮು ನಿವಾಸಿಯಾಗಿರುವ ಅವರ ಪತಿ ಆಸ್ಟ್ರೇಲಿಯಾದಲ್ಲಿ ಉದ್ಯೋಗ ದಲ್ಲಿದ್ದಾರೆ.

‘ಹಮ್ ಲೋಗ್ ಭೀ ಜವಾಬ್ ದೇಂಗೆ, ಔರ್ ಐಸಾ ಜವಾಬ್ ದೇಂಗೆ ಕೀ ಸೌ ಸಾಲ್ ತಕ್ ಯಾದ್ ರಖೇಂಗೆ ಕಿ ಮಹಿಳಾ ಕಾನ್‌ಸ್ಟೇಬಲ್ಸ್ ಕೀ ತಾಕತ್ ಕ್ಯಾ ಹೋತಿ ಹೈ(ನಾವೂ ಪ್ರತಿದಾಳಿ ನಡೆಸುತ್ತೇವೆ,ಮಹಿಳಾ ಕಾನಸ್ಟೇಬಲ್‌ಗಳ ಶಕ್ತಿ ಅವರಿಗೆ ನೂರು ವರ್ಷಗಳ ಕಾಲ ನೆನಪಿರುವಂತೆ)’ ಎಂದು ರಬೀಂದರ್ ಹೇಳಿದರು.

ಹೆಚ್ಚಿನ ಬಿಎಸ್‌ಎಫ್ ಮಹಿಳಾ ಯೋಧರು 23-30 ವರ್ಷಗಳ ವಯೋಮಾನ ದವರಾಗಿದ್ದಾರೆ. ಕೆಲವರು ತಮ್ಮ ಕುಟುಂಬಗಳೊಂದಿಗೆ ಬಟಾಲಿಯನ್ ಹೆಡ್ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರೆ, ಇತರರು ತಮ್ಮ ಮಕ್ಕಳನ್ನು ಗಂಡಂದಿರ ಕುಟುಂಬಗಳಲ್ಲಿ ಬಿಟ್ಟು ಹೋರಾಡಲು ಇಲ್ಲಿಗೆ ಬಂದಿದ್ದಾರೆ.

ತಾವು ಈ ವೃತ್ತಿಯನ್ನು ಆಯ್ದುಕೊಂಡಿದ್ದಕ್ಕೆ ತಮ್ಮನ್ನು ಯಾರೂ ಅಪಹಾಸ್ಯ ಮಾಡುತ್ತಿಲ್ಲ.ಬದಲು ಹೆಮ್ಮೆ ವ್ಯಕ್ತಪಡಿಸುತ್ತಾರೆ ಎಂದು ಹೆಚ್ಚಿನವರು ಹೇಳುತ್ತಾರೆ.

ಪಠಾಣಕೋಟ್‌ನ ನನ್ನ ಸ್ವಗ್ರಾಮದ ಹಿರಿಯ ಪುರುಷರು ಮತ್ತು ಮಹಿಳೆಯರು ನಮ್ಮನ್ನು ಆಶೀರ್ವದಿಸುತ್ತ,‘ಹಮಾರಿ ಬಹು ಔರ್ ಬೇಟಿಯೋ ಹಮಾರಾ ನಾಮ್ ರೋಷನ್ ಕಿಯಾ ಹೈ(ನಮ್ಮ ಸೊಸೆಯಂದಿರು ಮತ್ತು ಪುತ್ರಿಯರು ನಮಗೆ ಕೀರ್ತಿ ತಂದಿದ್ದಾರೆ)’ ಎಂದು ತುಂಬುಹೃದಯದಿಂದ ಕೊಂಡಾಡುತ್ತಾರೆ ಎಂದು 2008ರಿಂದಲೂ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಅನುಬಾಲಾ ಹೇಳಿದರು.ಈ ಮಹಿಳಾ ಯೋಧರ ಪೈಕಿ ಕೆಲವರು ಕಳೆದ ವರ್ಷ ಪಾಕಿಸ್ತಾನಿಗಳ ಶೆಲ್ ದಾಳಿಗಳಿಗೆ ಗುರಿಯಾಗಿದ್ದ ಸೂಕ್ಷ್ಮ ಮುಂಚೂಣಿ ಪ್ರದೇಶಗಳಾದ ಅಖ್ನೂರ್,ಅರ್ನಿಯಾ ಮತ್ತು ಆರ್‌ಎಸ್ ಪುರಗಳಲ್ಲಿ ನಿಯೋಜಿತರಾಗಿದ್ದಾರೆ.

ತಮ್ಮ ಭಾರದ ರೈಫಲ್‌ಗಳೊಂದಿಗೆ ಕಾವಲು ಗೋಪುರದಲ್ಲಿ 6ರಿಂದ 8 ಗಂಟೆಗಳ ಕಾಲ ನಿಂತುಕೊಂಡು ಶತ್ರುಗಳ ಮೇಲೆ ನಿಗಾ ಇಡುವದರಿಂದ ಹಿಡಿದು ಗ್ರಾಮಸ್ಥರಿಂದ ಕಳ್ಳ ಸಾಗಾಣಿಕೆಯನ್ನು ತಡೆಯುವವರೆಗೆ ಹಲವಾರು ಕರ್ತವ್ಯಗಳನ್ನು ನಿರ್ವಹಿಸುವ ಈ ಕೆಚ್ಚೆದೆಯ ಮಹಿಳೆಯರು ಯುದ್ಧರಂಗದಲ್ಲಿ ತಮ್ಮ ಸಹೋದ್ಯೋಗಿ ಪುರುಷ ಯೋಧರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶತ್ರುಗಳ ವಿರುದ್ಧ ಕಾದಾಡುತ್ತಾರೆ. ನಾವು ಯಾವುದೇ ಕ್ರಮಕ್ಕೂ ಸನ್ನದ್ಧರಿದ್ದೇವೆ ಎನ್ನುತ್ತಾರೆ ಸಾಂಬಾದಲ್ಲಿ ನಿಯೋಜಿತ ರಾಗಿರುವ ಕಾನ್‌ಸ್ಟೇಬಲ್ ಲಕ್ಷ್ಮೀ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News