ಟಿಪ್ಪು ಕ್ರೂರಿ ಎಂದ ಮೋಹನ್ ದಾಸ್ ಪೈ ಗೆ ನರೇಂದ್ರ ನಾಯಕ್ ಬಹಿರಂಗ ಪತ್ರ
► ಕೊಂಕಣಿ ಹೆಸರಲ್ಲಿ ವಿರೋಧಕ್ಕೆ ನಾಯಕ್ ತಿರುಗೇಟು
► ಟಿಪ್ಪು ಬಗ್ಗೆ ಮಾತಾಡುವ ನೀವು ಇವೆಲ್ಲಾ ವಿಷಯಗಳ ಬಗ್ಗೆ ಯಾಕೆ ಮಾತಾಡುತ್ತಿಲ್ಲ ?
► ಕೊಲೆಯಾದ ಬಾಳಿಗಾ ಬಗ್ಗೆ ನಾಯಕ್ ಕೇಳಿದ್ದಕ್ಕೆ ಪೈ ಉತ್ತರವೇನು ?
► ಗೋವಾದಲ್ಲಿ ಬೀಫ್ ಬ್ಯಾನ್ ಮಾಡಿಸುವ ಸವಾಲು ಮತ್ತು ಅದಕ್ಕೆ ಪೈ ಉತ್ತರ
ಟಿಪ್ಪುವನ್ನು ಕ್ರೂರಿ ಎಂದು ಬಣ್ಣಿಸಿದ ಟಿ.ವಿ.ಮೋಹನ್‌ದಾಸ್ ಪೈ ಅವರಿಗೆ ಮಂಗಳೂರಿನ ವಿಚಾರವಾದಿ ಡಾ.ನರೇಂದ್ರ ನಾಯಕ್ ಬಹಿರಂಗಪತ್ರ ಬರೆದಿದ್ದಾರೆ. ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ನಾಯಕ್, ಗುರುವಾರ ಈ ಪತ್ರವನ್ನು ಬಹಿರಂಗಪಡಿಸಿದ್ದು, ಫೇಸ್‌ಬುಕ್‌ನಲ್ಲೂ ಪೋಸ್ಟ್ ಮಾಡಿದ್ದಾರೆ. ಸಾರ್ವಜನಿಕ ಹಣದಲ್ಲಿ ಟಿಪ್ಪು ಜಯಂತಿ ಆಚರಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಲು ಕೊಂಕಣಿ ಹೆಸರನ್ನು ಬಳಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಇಡೀ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಸರಕಾರ, ಕೊಡವರು, ಮಂಗಳೂರಿಗರು, ಕ್ರಿಶ್ಚಿಯನ್ನರು ಎಂದು ವಿಭಜಿಸಲು ಮುಂದಾಗಿರುವುದು ಸರಿಯಲ್ಲ. ನಾನೊಬ್ಬ ಕೊಂಕಣಿ. ಎರಡೂ ಸಮುದಾಯಗಳಿಗೆ ಅನ್ಯಾಯ ಮಾಡಿರುವ ಟಿಪ್ಪುವಿನ ಜಯಂತಿಯನ್ನು ಸರಕಾರ ಆಚರಿಸುವುದನ್ನು ವಿರೋಧಿಸುತ್ತೇನೆ" ಎಂದು ಮೋಹನದಾಸ್ ಪೈ ಆರ್‌ಎಸ್‌ಎಸ್ ಕಾರ್ಯಕ್ರಮದ ವೇಳೆ ಹೇಳಿದ್ದರು.
ಪೈ ಹಾಗೂ ನಾಯಕ್ ಇಬ್ಬರೂ ಗೌಡಸಾರಸ್ವಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಈ ಸಮುದಾಯ ಗೋವಾ, ಮಹಾರಾಷ್ಟ್ರ ಹಾಗೂ ಕರಾವಳಿ ಕರ್ನಾಟಕದಲ್ಲಿದೆ. ಇದು ಮಾಂಸ ಸೇವಿಸುವ ಬ್ರಾಹ್ಮಣ ಸಮುದಾಯ.
ಮೋಹನ್‌ದಾಸ್ ಅವರು ಕೊಂಕಣಿ ಐಡೆಂಟಿಟಿ ಬಳಸಿಕೊಂಡಿರುವ ಔಚಿತ್ಯವನ್ನು ಪ್ರಶ್ನಿಸಿರುವ ನಾಯಕ್, "2016ರ ಮಾರ್ಚ್‌ನ ಘಟನಾವಳಿಯನ್ನು ಗಮನಿಸಿ. ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯಕ್ಕೆ ಸೇರಿದ, ವೆಂಕಟರಮಣನ ಭಕ್ತ, ಕಾಶಿಮಠದ ಶಿಷ್ಯರು ಅಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪ್ರಶ್ನಿಸಿದ್ದಾರೆ. ಆದರೆ ಆ ವಿಷಯದ ಬಗ್ಗೆ ನೀವು ಪ್ರತಿಕ್ರಿಯೆ ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಮೌನ ಮುರಿಯಲು ಇನ್ನೂ ಕಾಲ ಮಿಂಚಿಲ್ಲ. ನನ್ನ ಊಹೆಯಂತೆ ನಿಮ್ಮ ಈ ಮೌನಕ್ಕೆ ಕಾರಣ, ತಪ್ಪಿತಸ್ಥರು ಟಿಪ್ಪುವಿಗೆ ಯಾವ ಸಮುದಾಯದ ಜತೆ ಸಂಬಂಧ ಕಲ್ಪಿಸುತ್ತಿದ್ದೀರೋ ಆ ಸಮುದಾಯಕ್ಕೆ ಸೇರಿದವರು" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಟಿಪ್ಪು ಜಯಂತಿ ವಿರೋಧಿಸಲು ಮುಖ್ಯ ಕಾರಣವೆಂದರೆ, ನೀವು ಬಿಜೆಪಿ ಪಕ್ಷಪಾತಿಯಾಗಿರುವುದು ಎಂದು ಚುಚ್ಚಿದ್ದಾರೆ. ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗಿ. ಕೊಂಕಣಿ ಸಮುದಾಯವನ್ನು ಗೋವಾದಿಂದ ಓಡಿಸಿದವರು ಪೋರ್ಚ್‌ಗೀಸರು. ಅವರು ಹಲವು ಪ್ರಾಚೀನ ವಸ್ತುಗಳನ್ನು ಲಿಸ್ಬನ್‌ಗೆ ಒಯ್ದಿದ್ದಾರೆ ಎನ್ನಲಾಗಿದೆ. ಗೋವಾದ ಬಿಜೆಪಿ ಸರಕಾರ, ವಿಭಿನ್ನ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವರ ನೆರವಿನೊಂದಿಗೆ ಅವೆಲ್ಲವನ್ನೂ ವಾಪಸು ತರಲಿ ಎಂದು ಸವಾಲು ಹಾಕಿದ್ದಾರೆ.
ಮತ್ತೊಬ್ಬ ಜಿಎಸ್‌ಬಿ ವ್ಯಕ್ತಿ ಹಾಗೂ ಉದ್ದೇಶಪೂರ್ವಕ ಸುಸ್ತಿದಾರ ವಿಜಯ ಮಲ್ಯ, ಟಿಪ್ಪು ಖಡ್ಗವನ್ನು ಖರೀದಿ ಮಾಡಿದ್ದನ್ನೂ ನರೇಂದ್ರ ನಾಯಕ್ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ’ನ್ಯೂಸ್ ಮಿನಿಟ್’ ವೆಬ್ ಸೈಟ್ ಮೋಹನದಾಸ್ ಪೈ ಅವರ ಪ್ರತಿಕ್ರಿಯೆ ಕೇಳಿದಾಗ, "ಇವು ಅಸಂಬದ್ಧ ಆರೋಪಗಳು. ವಾಸ್ತವ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಟಿಪ್ಪು ನಿಜವಾಗಿ ಕ್ರೂರಿ. ಈ ವಿಚಾರದಲ್ಲಿ ಸಿದ್ದರಾಮಯ್ಯ ಕೋಮು ರಾಜಕೀಯ ಮಾಡುತ್ತಿದ್ದು, ಜನರನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಅವರು ಮಾಡಿರುವ ಆರೋಪಕ್ಕೆ ಮೋಹನದಾಸ್ ಪೈ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
ಜಿಎಸ್‌ಬಿ/ಕೊಂಕಣಿ ವಿಚಾರವಾಗಿ:
"ನಾನು ಜಿಎಸ್‌ಬಿ ಬಗ್ಗೆ ಮಾತನಾಡುತ್ತಿಲ್ಲ. ನಾನು ಯಾವ ಸಮುದಾಯದ ಪರವಾಗಿಯೂ ಮಾತನಾಡುತ್ತಿಲ್ಲ.
ವಿನಾಯಕ ಬಾಳಿಗ ವಿಚಾರ:
"ಅಂಥ ವ್ಯಕ್ತಿಗಳ ಬಗ್ಗೆ ನನಗೆ ಆಸಕ್ತಿ ಇಲ್ಲ"
ಜಿಎಸ್‌ಬಿಗಳು ನಡೆಸುತ್ತಿರುವ ನಕಲಿ ಕಂಪೆನಿಗಳ ಬಗ್ಗೆ:
"ನನಗೆ ಸಂಬಂಧ ಇಲ್ಲದ ಕಂಪೆನಿ ಬಗ್ಗೆ ಅವರು ಉಲ್ಲೇಖಿಸಿರುವುದು..."
"ನಿಜ ವಿಷಯಕ್ಕೆ ಬಾರದೇ ಮಾತನಾಡುತ್ತಿದ್ದಾರೆ. ಒಂದು ಕಾನೂನುಬದ್ಧ ಪ್ರಜಾಸತ್ತಾತ್ಮಕ ಸರಕಾರ ಕೋಮು ರಾಜಕೀಯಕ್ಕೆ ಮುಂದಾಗಿದೆ. ಸಿದ್ದರಾಮಯ್ಯ ಜನರನ್ನು ವಿಭಜಿಸುತ್ತಿದ್ದಾರೆ. ಟಿಪ್ಪು ಕೊಡವರು, ಕೊಂಕಣಿಗಳು ಹಾಗೂ ಮಂಗಳೂರಿನ ಕ್ಯಾಥೊಲಿಕ್ ಸಮುದಾಯದವರನ್ನು ಹತ್ಯೆ ಮಾಡಿದ್ದಾನೆ. ಇವರೆಲ್ಲರೂ ಸಿಟ್ಟಾಗಿದ್ದಾರೆ ಮತ್ತು ಹತಾಶರಾಗಿದ್ದಾರೆ"
ಬಿಜೆಪಿ ಪಕ್ಷಪಾತಿ ಎಂದ ಬಗ್ಗೆ:
"ಆತ ಶುದ್ಧ ಸುಳ್ಳು ಹೇಳಿ ನನ್ನನ್ನು ಲಿಸ್ಬನ್‌ಗೆ ಹೋಗಿ ಎನ್ನುತ್ತಿದ್ದಾರೆ. ಅವರು ಗೊಂದಲಕಾರಿ ಹೇಳಿಕೆ ಮೂಲಕ ಟಿಪ್ಪು ಕ್ರೂರಿ ಎಂಬ ವಿಚಾರಕ್ಕೆ ಸಂಬಂಧಪಡದ ವಿಚಾರ ಎತ್ತುತ್ತಿದ್ದಾರೆ"
ವಿಜಯ ಮಲ್ಯ ಬಗ್ಗೆ:
"ಈ ವಿಚಾರ ಏಕೆ ತಂದರು ಗೊತ್ತಿಲ್ಲ. ತೀರಾ ಕ್ಷುಲ್ಲಕ"
ನರೇಂದ್ರ ನಾಯಕ್ ಅವರ ಪತ್ರದ ಪೂರ್ಣಪಾಠ ಇಲ್ಲಿದೆ.
ಆತ್ಮೀಯ ಪೈ ಮಾಮ್,
ನಮಸ್ಕಾರ. ನಾನು ಸಮಾಜ ಬಾಂಧವ ಎಂದು ಕರೆದುಕೊಳ್ಳದಿದ್ದರೂ, ಜಿಎಸ್‌ಬಿ ಕುಟುಂಬದಲ್ಲಿ ಹುಟ್ಟಿದವ. ಏಕೆಂದರೆ ಸಮುದಾಯದ ಯಾವುದೇ ಧಾರ್ಮಿಕ ಚಟುವಟಿಕೆಯಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ನಾನೊಬ್ಬ ನಾಸ್ತಿಕ. ಅದಾಗ್ಯೂ, ಕೊಂಕಣಿ ಸಮುದಾಯ ಅದರಲ್ಲೂ ಮುಖ್ಯವಾಗಿ ಜಿಎಸ್‌ಬಿ ಸಮುದಾಯ ಮಾಡಿರುವ ತಪ್ಪುಗಳನ್ನು ಸರಿಪಡಿಸಲು ದೊಣ್ಣೆ ತೆಗೆದುಕೊಂಡಿರುವುದು ನನಗೆ ಖುಷಿ ಕೊಟ್ಟಿದೆ. ಟಿಪ್ಪು ಜಯಂತಿ ಆಚರಣೆ ಬಗ್ಗೆ ನೀವು ನೀಡಿರುವ ಹೇಳಿಕೆಗಳನ್ನೂ ನಾನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಸಾವಿರಾರು ಮಂದಿ ಕೊಂಕಣಿ ಭಾಷಿಗರನ್ನು ಟಿಪ್ಪು ಕೊಂದಿದ್ಧಾನೆ ಎಂಬ ಕಾರಣಕ್ಕೆ ನೀವು ವಿರೋಧಿಸುತ್ತಿದ್ದೀರಿ. ಅಂದರೆ ಜಿಎಸ್‌ಬಿಗಳು ಹಾಗೂ ರೋಮನ್ ಕ್ಯಾಥೊಲಿಕ್ ಸಮುದಾಯವನ್ನೂ ಸೇರಿಸಿದ್ದೀರಿ ಅಂದುಕೊಳ್ಳುತ್ತೇನೆ. ಇತಿಹಾಸದಲ್ಲಿ ತೀರಾ ಹಿಂದಕ್ಕೆ ಬೇಡ. 2016ರ ಮಾರ್ಚ್‌ನ ಘಟನಾವಳಿಯನ್ನು ಗಮನಿಸಿ. ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯಕ್ಕೆ ಸೇರಿದ, ವೆಂಕಟರಮಣನ ಭಕ್ತ, ಕಾಶಿಮಠದ ಶಿಷ್ಯರು ಅಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪ್ರಶ್ನಿಸಿದ್ದಾರೆ. ಆದರೆ ಆ ವಿಷಯದ ಬಗ್ಗೆ ನೀವು ಪ್ರತಿಕ್ರಿಯೆ ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಮೌನ ಮುರಿಯಲು ಇನ್ನೂ ಕಾಲ ಮಿಂಚಿಲ್ಲ. ನನ್ನ ಊಹೆಯಂತೆ ನಿಮ್ಮ ಈ ಮೌನಕ್ಕೆ ಕಾರಣ, ತಪ್ಪಿತಸ್ಥರು ಟಿಪ್ಪುವಿಗೆ ಯಾವ ಸಮುದಾಯದ ಜತೆ ಸಂಬಂಧ ಕಲ್ಪಿಸುತ್ತಿದ್ದೀರೋ ಆ ಸಮುದಾಯಕ್ಕೆ ಸೇರಿದವರು. ಮತ್ತೆ ಒಂದು ದಶಕದಷ್ಟು ಹಿಂದಕ್ಕೆ ಹೋಗಿ. ಇಂದು ನೀವು ಸಂಬಂಧ ಹೊಂದಿರುವ, ಜಿಎಸ್‌ಬಿಗಳಿಗೆ ಸೇರಿದ ಹಣಕಾಸು ಸಂಸ್ಥೆಗಳ ಒಂದು ಗುಂಪು ಮುಚ್ಚಿಹೋದವು. ಸಾವಿರಾರು ಮಂದಿಯ ಕೋಟ್ಯಂತರ ರೂಪಾಯಿ ಠೇವಣಿಯನ್ನು ವಂಚಿಸಿದವು. ಆ ಪೈಕಿ ಬಹುತೇಕ ಅಮ್ಚಿಗೆಲೆ (ಕೊಂಕಣಿ ಜನ). ಅಮ್ಚಿಗೆಲೆ ಜನರ ಮೇಲೆ ವಿಶ್ವಾಸದಿಂದ ಠೇವಣಿ ಇಟ್ಟವರು. ಕೊಂಕಣಿ ಮಾತನಾಡುವ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ತಲೆಕೆಡಿಸಿಕೊಳ್ಳದೇ, ಅಂಥವರ ಜತೆ ನೀವು ಸಂಭ್ರಮಿಸುವುದನ್ನು ನಾನು ಕಂಡಿದ್ದೇನೆ!
ನಿಮ್ಮ ಹೃದಯ ಕೊಂಕಣಿ ಭಾಷಿಗರಿಗಾಗಿ ಮಿಡಿಯುತ್ತಿದೆ. ಆದ್ದರಿಂದ ನೀವು ಸಾರ್ವಜನಿಕ ಹಣದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುವುದಾಗಿ ಹೇಳುತ್ತಿದ್ದೀರಿ. ಖಂಡಿತಾ ಇದು ಸಮರ್ಥನೀಯ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡುವುದನ್ನು ನೀವು ವಿರೋಧಿಸುವುದಾದರೆ, ಮೈಸೂರು ದಸರಾ ಆಚರಣೆ, ಅಣೆಕಟ್ಟುಗಳು ಭರ್ತಿಯಾದಾಗ ನಡೆಸುವ ಪೂಜೆಗಳನ್ನು ಕೂಡಾ ಸಾರ್ವಜನಿಕ ಹಣದಲ್ಲೇ ನೆರವೇರಿಸಲಾಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿರಬೇಕು. ನಾನೂ ಟಿಪ್ಪು ಅಭಿಮಾನಿಯೇನಲ್ಲ. ಜಾತ್ಯತೀತ ದೇಶದಲ್ಲಿ ಸರಕಾರ ಧರ್ಮದಲ್ಲಿ ಪಾಲ್ಗೊಳ್ಳುವುದನ್ನು ನಾನೂ ವಿರೋಧಿಸುತ್ತೇನೆ. ಮತ್ತೆ ಟಿಪ್ಪುವಿನಿಂದ ಹತ್ಯೆಗೊಳಗಾದ ಕೊಂಕಣಿ ಭಾಷಿಗರ ವಿಚಾರಕ್ಕೆ ಬರುತ್ತೇನೆ. ನೀವು ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋದರೆ, ಈ ಸಮುದಾಯದವರು ಗೋವಾದಿಂದ ವಲಸೆ ಬಂದವರು. ಪೋರ್ಚ್‌ಗೀಸರ ದಾಳಿ ಹಾಗೂ ರೋಮನ್ ಕ್ಯಾಥೊಲಿಕ್ ಸಮುದಾಯದ ಕಡ್ಡಾಯ ಮತಾಂತರದಿಂದ ಸಂತ್ರಸ್ತರಾದವರು. ನಮ್ಮ ಪೂರ್ವಜರು ಎಷ್ಟು ಕ್ರೌರ್ಯಕ್ಕೆ ತುತ್ತಾದರು, ದೇವಾಲಯಗಳು ಹೇಗೆ ನಾಶವಾದವು, ಮೂರ್ತಿಗಳನ್ನು ಹೇಗೆ ಬಳಸಲಾಯಿತು ಎನ್ನುವುದನ್ನು ಬಹುಶಃ ನೀವು ಕೇಳಿರಬೇಕು. ಅವರು ಗೋಮಾಂಸ ತಿನ್ನುವಂತೆ ಮಾಡಿ, ಸಮಾಜದಿಂದ ಬಹಿಷ್ಕರಿಸಲ್ಪಟ್ಟರು.
ಆದ್ದರಿಂದ ನನ್ನ ಸಲಹೆಯೆಂದರೆ, ಬಿಜೆಪಿ ಪರ ಮೆದು ಧೋರಣೆ ಹೊಂದಿರುವ ನೀವು, ಗೋವಾದ ಬಿಜೆಪಿ ಸರಕಾರ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ.
* ಧ್ವಂಸವಾದ ಎಲ್ಲ ದೇವಸ್ಥಾನಗಳ ಪುನರುತ್ಥಾನ ಮಾಡಿ.
* ಎಲ್ಲ ಮತಾಂತರಗೊಂಡಿರುವವರ ಘರ್‌ವಾಪಸಿಗೆ ಕ್ರಮ ಕೈಗೊಳ್ಳಿ
* ಗೋವಾದಲ್ಲಿ ಗೋಹತ್ಯೆ ನಿಷೇಧಿಸಿ ಹಾಗೂ ಗೋಮಾಂಸ ಮಾರಾಟ ತಡೆಯಿರಿ. ಏಕೆಂದರೆ ಇದು ಕಡ್ಡಾಯದ ಮತಾಂತರಕ್ಕೆ ಜಿಎಸ್‌ಬಿ ಸಮುದಾಯವನ್ನು ಮಲಿನಗೊಳಿಸಿ, ಸಮಾಜದಿಂದ ಬಹಿಷ್ಕೃತರಾಗುವಂತೆ ಮಾಡಲು ಪೋರ್ಚ್‌ಗೀಸರು ಬಳಸಿದ ಅಸ್ತ್ರ.
* ಇವೆಲ್ಲದರ ಸಂಕೇತವಾಗಿ ಕಾಣುತ್ತಿರುವುದು ಸಂತ ಪದವಿ ಪಡೆದ ಫ್ರಾನ್ಸಿಸ್ ಕ್ಸೇವಿಯರ್. ಪ್ರತಿ ವರ್ಷ ಅವರ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ 10 ವರ್ಷಗಳಿಗೊಮ್ಮೆ ಪ್ರದರ್ಶನ ಏರ್ಪಡಿಸಿ, ಅವರ ಅವಶೇಷಗಳನ್ನೆಲ್ಲ ಪ್ರದರ್ಶಿಸಲಾಗುತ್ತದೆ. ಇವೆಲ್ಲವನ್ನೂ ಸ್ಥಗಿತಗೊಳಿಸುವಂತೆ ಗೋವಾ ಸರಕಾರವನ್ನು ಆಗ್ರಹಿಸಬಹುದು. ಇದು ಡಿಸೆಂಬರ್ 3ರಂದು ಇರುವ ಕಾರಣ ಇನ್ನೂ ವಿಳಂಬವಾಗಿಲ್ಲ.
* ಖ್ಯಾತ ಗೋವಾ ಕಾರ್ನಿವಲ್ ಧಾರ್ಮಿಕ ಹಬ್ಬವಾಗಿದ್ದು, ಅದನ್ನೂ ನಿಲ್ಲಿಸುವಂತೆ ಮಾಡಿ.
ನಮ್ಮ ಪೂರ್ವಜನರಿಂದ ಅವರು ಲೂಟಿ ಮಾಡಿ ಕೊಂಡೊಯ್ದ ಎಲ್ಲ ವಸ್ತುಗಳನ್ನು ಮರಳಿ ಪಡೆಯುವ ಸಲುವಾಗಿ ಲಿಸ್ಬನ್‌ಗೆ ದಂಡಯಾತ್ರೆ ಕೈಗೊಳ್ಳಲು ನಾವೆಲ್ಲರೂ ನಿಮಗೆ ಅಧಿಕಾರ ನೀಡುತ್ತಿದ್ದೇವೆ. ಅದಕ್ಕಾಗಿ ಬಹುಶಃ ನಾವು ಸಹಿ ಅಭಿಯಾನವನ್ನೂ ಆರಂಭಿಸಬಹುದು. ಪ್ರಸ್ತುತ ರಕ್ಷಣಾ ಸಚಿವರು ಕೂಡಾ ಅಮ್ಚಿಗೆಲೆ ಆಗಿರುವುದರಿಂದ ಅದು ದೊಡ್ಡ ಸಮಸ್ಯೆಯಾಗಲಾರದು. ಮತ್ತೆ ನಮ್ಮ ರೈಲ್ವೆ ಸಚಿವ ಕೂಡಾ ಜಿಎಸ್‌ಬಿ ಸಮುದಾಯದವರು. ಜನ ಹಾಗೂ ವಸ್ತುಗಳ ಸಾಗಾಟಕ್ಕೆ ಸಹಕರಿಸುವ ಮೂಲಕ ಅವರೂ ಇದಕ್ಕೆ ಸಹಕರಿಸಬಹುದು. ಇದೇ ವೇಳೆ ಮತ್ತೊಬ್ಬ ಜಿಎಸ್‌ಬಿ ದೇಶಪಾಂಡೆ, ಕರ್ನಾಟಕದ ಸಚಿವರು. ಅವರು ಟಿಪ್ಪು ಜಯಂತಿ ಬೆಂಬಲಿಸುತ್ತಿದ್ದಾರೆ. ಅವರನ್ನು ಜಾತಿ ಪಡ್ಕೊ ಎಂದು ಘೋಷಿಸಿ ಬಹಿಷ್ಕರಿಸಿ.
ಮತ್ತೊಬ್ಬ ಖ್ಯಾತ ಜಿಎಸ್‌ಬಿ ಕೊಂಕಣಿಯನ್ನು ಇಲ್ಲಿ ಉಲ್ಲೇಖಿಸದಿದ್ದರೆ ಈ ಎಲ್ಲ ಬಣ್ಣನೆ ಅಪೂರ್ಣವಾಗುತ್ತದೆ. ಅವರೆಂದರೆ ನಿಮ್ಮ ಸ್ನೇಹಿತ ವಿಜಯ್ ಮಲ್ಯ-ಮಾಮ್. ಅವರು ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ಸುಸ್ತಿಬಾಕಿ ಪಾವತಿಸದೇ ಇಂಗ್ಲೆಂಡಿಗೆ ಹೋದದ್ದೇಕೆ? ಅವರನ್ನು ಸಮರ್ಥಿಸಲು ಬಹುಶಃ ನೀವು ಉತ್ಸುಕರಾಗಿರಬಹುದು. ಆ ಪೈಕಿ ಸ್ವಲ್ಪ ಹಣ ಸದ್ಬಳಕೆಯೂ ಆಗಿರಬಹುದು. ಅವರು ಟಿಪ್ಪು ಖಡ್ಗವನ್ನು ಖರೀದಿಸಿದ್ದರು. ಆ ಖಡ್ಗವನ್ನು ಅಡುಗೆಮನೆಯಲ್ಲಿ ತರಕಾರಿ ಹೆಚ್ಚಲು ಬಳಸುವ ಮೂಲಕ ಅವರು ಟಿಪ್ಪು ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರಬಹುದು. ಬಹುಶಃ ಸಾವಿರಾರು ಮಂದಿ ಸಮಾಜಬಾಂಧವರನ್ನು ಹತ್ಯೆ ಮಾಡಲು ಬಳಸಿದ ಟಿಪ್ಪುಖಡ್ಗವನ್ನು ಈ ರೀತಿ ಬಳಕೆ ಮಾಡಿಕೊಳ್ಳುವುದು ಆತನಿಗೆ ಮಾಡಬಹುದಾದ ದೊಡ್ಡ ಅವಮಾನ!.
ಕೃಪೆ: ನ್ಯೂಸ್ ಮಿನಿಟ್