ಪೂರ್ವಾನುಮತಿ ಪಟ್ಟಿಯಲ್ಲಿ ಝಾಕಿರ್ ಎನ್‌ಜಿಒ
ಹೊಸದಿಲ್ಲಿ, ನ.5: ಇಸ್ಲಾಮಿಕ್ ವಿದ್ವಾಂಸ ಝಾಕಿರ್ ನಾಯ್ಕ್ ರ ಪ್ರಾಯೋಜಿತ ಐಆರ್‌ಎಫ್ ಪ್ರತಿಷ್ಠಾನವನ್ನು ಪೂರ್ವಾನುಮತಿ ವರ್ಗದಡಿ ಇರಿಸಲಾಗಿದೆ. ಇದರಿಂದಾಗಿ, ಕೇಂದ್ರ ಸರಕಾರದ ಅನುಮತಿಯಿಲ್ಲದೆ ಅದಕ್ಕೆ ನಿಧಿ ಸ್ವೀಕಾರಕ್ಕೆ ತಡೆ ಬಿದ್ದಂತಾಗಿದೆ.
ಗುಪ್ತಚರ ಸಂಸ್ಥೆಗಳಿಂದ ದೊರೆತ ಮಾಹಿತಿ ಹಾಗೂ ಲಭ್ಯ ದಾಖಲೆಗಳ ಆಧಾರದಿಂದ ಐಆರ್‌ಎಫ್ ಶಿಕ್ಷಣ ಪ್ರತಿಷ್ಠಾನವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)-2010ರ ಹಲವು ಪ್ರಸ್ತಾವಗಳನ್ನು ಉಲ್ಲಂಘಿಸಿರುವುದು ತಿಳಿದು ಬಂದಿದೆಯೆಂದು ಗೃಹ ಸಚಿವಾಲಯವು ಗಜೆಟ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಆದುದರಿಂದ ಇನ್ನು ಮುಂದೆ ಐಆರ್‌ಎಫ್ ಶಿಕ್ಷಣ ಪ್ರತಿಷ್ಠಾನವು ಯಾವುದೇ ವಿದೇಶಿ ದೇಣಿಗೆಯನ್ನು ಪಡೆಯುವ ಸಂದರ್ಭದಲ್ಲಿ ಕಾಯ್ದೆಯ 12ನೆ ಪರಿಚ್ಛೇದ ಹಾಗೂ ಅದರನ್ವಯ ಮಾಡಲಾಗಿರುವ ನಿಯಮಗಳಂತೆ ಕೇಂದ್ರ ಸರಕಾರದ ಅನುಮತಿಯನ್ನು ಪಡೆಯುವುದೆಂದು ಅಗತ್ಯವಾಗಿದೆಯೆಂದು ಎಫ್‌ಸಿಆರ್‌ಎ-2010ರ ಸೆಕ್ಷನ್ 11ರ ಸಬ್‌ಸೆಕ್ಷನ್(3) ರನ್ವಯ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ ಕೇ1ಂದ್ರ ಸರಕಾರ ಸ್ಪಷ್ಟಪಡಿಸುತ್ತಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಎನ್‌ಜಿಒಗೆ ದೊರೆಯುವ ನಿಧಿಯನ್ನು ಉಪಯೋಗಿಸಿ ಯುವಕರನ್ನು ಉಗ್ರವಾದದತ್ತ ಹೊರಳಿಸಿ, ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ನಾಯ್ಕಾ ‘ಸ್ಫೂರ್ತಿ ನೀಡುತ್ತಿದ್ದಾನೆ’ ಎಂದು ವಿವಿಧ ತನಿಖೆಗಳಿಂದ ತಿಳಿದು ಬಂದ ಬಳಿಕ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಝಾಕಿರ್ ನಾಯ್ಕನಿಂದ ಪ್ರಾಯೋಜಿತ ಇನ್ನೊಂದು ಎನ್‌ಜಿಒ, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ನೋಂದಣಿಯನ್ನು ರದ್ದುಪಡಿಸುವ ಪ್ರಕ್ರಿಯೆಯನ್ನೂ ಸರಕಾರ ಆರಂಭಿಸಿದ್ದು, ಈ ಸಂಬಂಧ ಈಗಾಗಲೇ ಅದಕ್ಕೆ ಅಂತಿಮ ಶೋಕಾಸ್ ನೋಟಿಸ್ ನೀಡಲಾಗಿದೆ.