ಮಧ್ಯಪ್ರದೇಶ: ವಿದ್ಯಾರ್ಥಿಯಿಂದ ಶಾಲಾ ನಿರ್ದೇಶಕನಿಗೆ ಗುಂಡು
ರತ್ಲಂ(ಮ.ಪ್ರ.), ನ.5: ಮಧ್ಯಪ್ರದೇಶ ರತ್ಲಂ ಜಿಲ್ಲೆಯ ಜವೋರಾ ಪಟ್ಟಣದಲ್ಲಿ 15ರ ಹರೆಯದ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯ ನಿರ್ದೇಶಕನನ್ನು ಗುಂಡಿಕ್ಕಿ ತೀವ್ರವಾಗಿ ಗಾಯಗೊಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಮೈಲ್‌ಸ್ಟೋನ್ ಅಕಾಡಮಿ ಶಾಲೆಯ 9ನೆ ತರಗತಿಯ ಈ ವಿದ್ಯಾರ್ಥಿ ನಿರ್ದೇಶಕ ಅಮಿತ್ ಜೈನ್ ಎಂಬವರನ್ನು ಗುಂಡಿಕ್ಕಿ ಗಾಯಗೊಳಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಅವರನ್ನು ಇಂದೋರ್‌ಗೆ ಸಾಗಿಸಲಾಗಿದೆಯೆಂದು ಜವೋರಾ ವಲಯದ ನಗರ ಪೊಲೀಸ್ ಅಧೀಕ್ಷಕ ದೀಪಕ್ ಶುಕ್ಲಾ ಹೇಳಿದ್ದಾರೆ.
ಗುಂಡು ಹಾರಿಸಿದ ಬಳಿಕ ಬಾಲಕ ಶಾಲೆಯಿಂದ ಪರಾರಿಯಾಗಿದ್ದಾನೆ. ವಿದ್ಯಾರ್ಥಿಯು ಶಾಲೆಗೆ ಸಾಮಾನ್ಯ ಉಡುಪಿನಲ್ಲೇ ಬಂದಿದ್ದನು. ಆತನಿಗೆ ಮನೆಗೆ ಹೋಗಿ ಸಮವಸ್ತ್ರ ತೊಟ್ಟು ಬರುವಂತೆ ಅಧ್ಯಾಪಕರು ಸೂಚಿಸಿದ್ದರೆಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿ ಸಮವಸ್ತ್ರ ಧರಿಸುತ್ತಿದ್ದ ವೇಳೆ, ಶಾಲೆಯಿಂದ ಆತನ ನಡವಳಿಕೆಯ ಬಗ್ಗೆ ಮಾಹಿತಿ ನೀಡುವ ದೂರವಾಣಿ ಕರೆಯೊಂದು ಅವನ ಹೆತ್ತವರಿಗೆ ಬಂದಿತ್ತು ಈ ಬಗ್ಗೆ ಬಾಲಕನಿಗೆ ಬೈದ ಬಳಿಕ ಆತ ಗುರುವಾರ ಹಾಗೂ ಶುಕ್ರವಾರ ಶಾಲೆಗೆ ಬಂದಿರಲಿಲ್ಲವೆಂದೂ ಅವರಿಗೆ ತಿಳಿಸಲಾಗಿತ್ತೆಂದು ಶುಕ್ಲಾ ವಿವರಿಸಿದ್ದಾರೆ.
ಇದರಿಂದ ಕೋಪಗೊಂಡ ವಿದ್ಯಾರ್ಥಿ ಪಿಸ್ತೂಲು ಹಿಡಿದುಕೊಂಡು ಶಾಲೆಗೆ ಬಂದು, ಜೈನ್‌ರ ಛೇಂಬರ್‌ಗೆ ನುಗ್ಗಿ ಅವರಿಗೆ ಗುಂಡು ಹಾರಿಸಿದನು. ಗಾಯಗೊಂಡ ಜೈನ್‌ರನ್ನು ಮೊದಲು ನಾಗರಿಕ ಆಸ್ಪತ್ರೆಯೊಂದಕ್ಕೆ ಒಯ್ದ ಬಳಿಕ, ಗಂಭೀರಾವಸ್ಥೆಯಲ್ಲಿ ಇಂದೋರ್‌ಗೆ ಸಾಗಿಸಲಾಯಿತೆಂದು ಅವರು ಹೇಳಿದ್ದಾರೆ.