×
Ad

ನವಜಾತ ಶಿಶುವಿಗೆ ಹಾಲುಣಿಸಲು ತಡೆ ಇಬ್ಬರ ಬಂಧನ

Update: 2016-11-05 19:53 IST

ಕೊಯಿಕ್ಕೋಡ್, ನ.5: ಮತೀಯ ಬೋಧಕನ ಸಲಹೆಯನ್ನು ನಂಬಿ ತನ್ನ ನವಜಾತ ಶಿಶುವಿಗೆ ಒಂದು ದಿನ ಮೊಲೆಹಾಲೂಡಿಸಲು ಅವಕಾಶ ನೀಡದ ವ್ಯಕ್ತಿಯೊಬ್ಬನನ್ನು ಹಾಗೂ ಬೋಧಕನನ್ನು ಮುಕ್ಕಂನಿಂದ ಬಂಧಿಸಲಾಗಿದೆ.

ಒಮಸ್ಸೇರಿಯ ಅಬೂಬಕರ್ ಸಿದ್ದೀಕಿ ಎಂಬಾತನ ಪತ್ನಿ ಬುಧವಾರ ರಾತ್ರಿ 2ರ ವೇಳೆ ಮುಕ್ಕಂನ ಇಎಂಎಸ್ ಸಹಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ಹಾಲೂಡಿಸುವಂತೆ ಆಸ್ಪತ್ರೆಯ ಅಧಿಕಾರಿಗಳು ತಾಯಿಗೆ ಸೂಚಿಸಿದಾಗ, ಅದು ಹುಟ್ಟಿದ ಬಳಿಕ 5 ಬಾರಿ ಪ್ರಾರ್ಥನಾ ಕರೆಗಳು ಆಗದೆ ಮಗುವಿಗೆ ಮೊಲೆಯುಣಿಸಬಾರದೆಂದು ತಂದೆ ಅಬೂಬಕ್ಕರ್ ತಡೆದನು.

ವೈದ್ಯರ ಬೇಡಿಕೆಗೂ ಅತ ಜಗ್ಗದಿದ್ದುದರಿಂದ ಕೇವಲ ಮರುದಿನ ಮಧ್ಯಾಹ್ನವಷ್ಟೇ ಶಿಶುವಿಗೆ ಮೊಲೆಯುಣಿಸಲಾಯಿತು.

ಆಸ್ಪತ್ರೆಯ ನಸ್‌ೊಬ್ಬಳು ನಿನ್ನೆ ದಾಖಲಿಸಿದ ದೂರಿನ ಆಧಾರದಲ್ಲಿ ಅಬೂಬಕರ್(31) ಹಾಗೂ ಬೋಧಕ ಹೈದ್ರೋಸ್ ತಂಗಳ್(75) ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಾಲನ್ಯಾಯ ಕಾಯ್ದೆಯ ಸೆ.75 (ಶಿಶುವು ಅನಗತ್ಯವಾಗಿ ಮಾನಸಿಕ ಹಾಗೂ ಭೌತಿಕವಾಗಿ ನರಳುವಂತೆ ಮಾಡುವುದು) ಹಾಗೂ ಸೆ.87ರನ್ವಯ (ಅಪರಾಧಕ್ಕೆ ಪ್ರಚೋದನೆ) ಅವರಿಬ್ಬರನ್ನೂ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಮಕ್ಕಳ ಹಕ್ಕು ರಕ್ಷಣಾ ಆಯೋಗವು, ಮಗುವಿಗೆ ಮೊಲೆಹಾಲು ನೀಡದಂತೆ ತಡೆದ ತಂದೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠ ಹಾಗೂ ಮುಕ್ಕಂ ಪೊಲೀಸರಿಗೆ ಆದೇಶ ನೀಡಿದೆ.

ಈ ಘಟನೆಯನ್ನು ಫೇಸ್‌ಬುಕ್‌ನಲ್ಲಿ ಖಂಡಿಸಿರುವ ಕೊಯಿಕ್ಕೋಡ್ ಜಿಲ್ಲಾ ಕಲೆಕ್ಟರ್, ಎನ್.ಪ್ರಶಾಂತ್, ನವಜಾತ ಶಿಶುವನ್ನು ಉಪವಾಸ ಕೆಡಹುವಂತೆ ಯಾವ ಮತವೂ ಬೋಧಿಸುವುದಿಲ್ಲ. ಇಂತಹ ಕ್ರೂರತ್ವ ತೊರಿದ ವ್ಯಕ್ತಿ ಹಾಗೂ ಆತನಿಗೆ ಪ್ರಚೋದನೆ ನೀಡಿದವರಿಗೆ ‘ಸೂಕ್ತ ಚಿಕಿತ್ಸೆ’ ಅಗತ್ಯವೆಂದು ಹೇಳಿದ್ದು, ತಂದೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News