ಶರ್ಬತ್ ಗುಲಾ ಗಡಿಪಾರಿಗೆ ಪಾಕ್ ಕೋರ್ಟ್ ಆದೇಶ
ಇಸ್ಲಾಮಾಬಾದ್,ನ.5: ನಕಲಿ ಗುರುತುಪತ್ರವನ್ನು ಹೊಂದಿದ ಆರೋಪದಲ್ಲಿ ಬಂಧಿತಳಾಗಿರುವ ಅಫ್ಘಾನ್ ನಿರಾಶ್ರಿತೆ ಶರ್ಬತ್ ಗುಲಾಳನ್ನು ಗಡಿಪಾರು ಮಾಡುವಂತೆ ಪೇಶಾವರ ನ್ಯಾಯಾಲಯ ತಿಳಿಸಿದೆ. ಅಕ್ಟೋಬರ್ 26ರಂದು ನಕಲಿ ಗುರುತುಪತ್ರದೊಂದಿಗೆ ಅನಧಿಕೃತವಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾಳೆಂಬ ಆರೋಪದಲ್ಲಿ ಶರ್ಬತ್ ಗುಲಾಳನ್ನು ಪಾಕ್‌ನ ಕೇಂದ್ರೀಯ ತನಿಖಾ ಸಂಸ್ಥೆಯು ಬಂಧಿಸಿತ್ತು. ಶರ್ಬತ್ ಗುಲಾ ಕೂಡಾ ನ್ಯಾಯಾಲಯದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.
ವಿಧವೆಯಾದ ಶರ್ಬತ್ ಗುಲಾ ರೋಗಪೀಡಿತೆಯಾಗಿದ್ದು, ಆಕೆಗೆ ತನ್ನ್ನ ಕುಟುಂಬದೊಂದಿಗೆ ಪಾಕಿಸ್ತಾನದಲ್ಲಿ ನೆಲೆಸಲು ಅವಕಾಶ ನೀಡುವಂತೆ ಆಕೆಯ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಶರ್ಬತ್ ಗುಲಾ ಈಗಾಗಲೇ 10 ದಿವಸ ಜೈಲಿನಲ್ಲಿ ಕಳೆದಿದ್ದಾಳೆ. ಆಕೆಯ ರಿಮಾಂಡ್ ಅವಧಿ ಪೂರ್ತಿಗೊಳ್ಳಲು ಇನ್ನೂ 5 ದಿನಗಳು ಬಾಕಿಯಿದೆ. ಅದು ಮುಗಿದ ಕೂಡಲೇ ಶರ್ಬತ್‌ಳನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
ಶರ್ಬತ್ ಗುಲಾ, ಬಾಲಕಿಯಾಗಿದ್ದಾಗ ‘ನ್ಯಾಶನಲ್ ಜಿಯೋಗ್ರಾಫಿಕ್’ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡು ವಿಶ್ವದಾದ್ಯಂತ ಗಮನಸೆಳೆದಿದ್ದಳು.