×
Ad

ಫಿಲಿಪ್ಪೀನ್ಸ್ ಮೇಯರ್ ಜೈಲಿನಲ್ಲೇ ಎನ್‌ಕೌಂಟರ್‌ಗೆ ಬಲಿ

Update: 2016-11-06 00:09 IST

  ಡ್ರಗ್ಸ್ ಜಾಲದ ಜೊತೆ ನಂಟು

ಬೇಬೇ ( ಫಿಲಿಪ್ಪೀನ್),ನ.5: ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ ಮಾದಕದ್ರವ್ಯ ಜಾಲದ ವಿರುದ್ಧ ನಿರ್ದಯ ಸಮರ ಸಾರಿರುವಂತೆಯೇ, ಬೇಬೇ ನಗರದ ಜೈಲೊಂದರಲ್ಲಿ ನಡೆದ ಗುಂಡಿನ ಕಾಳಗವೊಂದರಲ್ಲಿ, ಡ್ರಗ್ಸ್ ಜಾಲದ ಜೊತೆ ನಂಟು ಹೊಂದಿದ್ದ ರಾಜಕಾರಣಿಯೊಬ್ಬನನ್ನು ಪೊಲೀಸರು ಹತ್ಯೆಗೈದಿದ್ದಾರೆ. ಮಧ್ಯ ಫಿಲಿಪ್ಪೀನ್ಸ್‌ನಲ್ಲಿರುವ ಅಲ್ಬುರಿಯಾ ನಗರದ ಮೇಯರ್ ರೊಲಾಂಡೊ ಎಸ್ಪಿನೊಸಾ ಸೀನಿಯರ್ ಹಾಗೂ ಅವರ ಜೊತೆಗಿದ್ದ ಸಹಕೈದಿ, ಇಂದು ಮುಂಜಾನೆ ಅವರ ಸೆಲ್‌ನಲ್ಲಿ ತಪಾಸಣೆಗೆ ಆಗಮಿಸಿದ ಪೊಲೀಸರ ಮೇಲೆ ಗುಂಡೆಸೆದಿದ್ದರು. ಕೂಡಲೇ ಪೊಲೀಸರು ಪ್ರತಿದಾಳಿ ನಡೆಸಿ ಇಬ್ಬರನ್ನೂ ಗುಂಡಿಕ್ಕಿ ಕೊಂದರೆಂದು ಮೂಲಗಳು ತಿಳಿಸಿವೆ.ಡ್ರಗ್ಸ್‌ಜಾಲದ ಜೊತೆ ನಂಟು ಹೊಂದಿದ ಆರೋಪದಲ್ಲಿ ಮೇಯರ್ ರೊಲಾಂಡೊ ಬಂಧಿಸಲ್ಪಟ್ಟಿದ್ದರು.

 ಜೈಲಿನಲ್ಲಿ ಶಸ್ತ್ರಾಸ್ತ್ರಗಳನ್ನು ಹಾಗೂ ಮಾದಕದ್ರವ್ಯಗಳನ್ನು ಬಚ್ಚಿಡಲಾಗಿದೆಯೆಂಬ ಮಾಹಿತಿ ಪಡೆದ ಪೊಲೀಸರು ಜೈಲಿನ ಸೆಲ್‌ಗಳಿಗೆ ದಾಳಿ ನಡೆಸಿದ್ದರು.

ಆದರೆ ಅಪರಾಧ ವಿರೋಧಿ ಕಣ್ಗಾವಲು ಸಮಿತಿಯು ಈ ಎನ್‌ಕೌಂಟರ್‌ನ ಸಾಚಾತನದ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಜೈಲಿನಲ್ಲಿಯೇ ಬಂಧಿತ ಮೇಯರ್ ಹಾಗೂ ಸಹಕೈದಿಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ಹೇಗೆ ಸಾಧ್ಯವೆಂದು ಅದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News