ಮೊಸುಲ್‌ನಲ್ಲಿ ಭೀಕರ ಬೀದಿಕಾಳಗ
ಐಸಿಸ್ ಭದ್ರಕೋಟೆಗೆ ಇರಾಕಿ ಪಡೆಗಳ ಲಗ್ಗೆ
ಮೊಸುಲ್,ನ.5: ಐಸಿಸ್‌ನ ಭದ್ರಕೋಟೆ ಮೊಸುಲ್‌ಗೆ ಲಗ್ಗೆಹಾಕುವಲ್ಲಿ ಯಶಸ್ವಿಯಾಗಿರುವ ಇರಾಕಿ ಪಡೆಗಳು, ಶುಕ್ರವಾರ ನಗರದ ಕೇಂದ್ರದ ಭಾಗದ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸಿವೆ. ಇರಾಕಿ ಪಡೆಗಳು ಹಾಗೂ ಐಸಿಸ್ ಉಗ್ರರ ನಡುವೆ ಮೊಸುಲ್‌ನಲ್ಲಿ ಭೀಕರವಾದ ಬೀದಿಕಾಳಗ ನಡೆಯುತ್ತಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂರು ವಾರಗಳ ಹಿಂದೆ ಇರಾಕಿ ಪಡೆಗಳು ಮೊಸುಲ್ ನಗರದ ಮೇಲೆ ದಾಳಿಯನ್ನು ಆರಂಭಿಸಿದ್ದು, ಈಗ ಅದು ನಿರ್ಣಾಯಕ ಘಟ್ಟವನ್ನು ತಲುಪಿದೆ. ಇರಾಕ್‌ನ ಎರಡನೆ ಅತಿ ದೊಡ್ಡ ನಗರವಾದ ಮೊಸುಲ್‌ನಲ್ಲಿ ಮುಸ್ಸಂಜೆಯ ಬಳಿಕವೂ ಕದನ ಮುಂದುವರಿದಿದ್ದು, ನಗರದೆಲ್ಲೆಡೆ ಮೆಶಿನ್‌ಗನ್ ಹಾಗೂ ಬಾಂಬ್ ಸ್ಫೋಟದ ಸದ್ದು ಕೇಳಿಬರುತ್ತಿದೆ.
ಅಮೆರಿಕ ನೇತೃತ್ವದ ಮಿತ್ರಪಡೆಗಳ ಬೆಂಬಲದೊಂದಿಗೆ 3 ಸಾವಿರಕ್ಕೂ ಅಧಿಕ ಇರಾಕಿ ಪಡೆಗಳು ಮೊಸುಲ್ ಮೇಲೆ ಆಕ್ರಮಣ ನಡೆಸಿವೆ. ಆದರೆ ಇರಾಕಿ ಪಡೆಗಳು ಗ್ರಾಮಾಂತರ ಪ್ರದೇಶಗಳಿಗೂ ತಮ್ಮ ಕದನವನ್ನು ವಿಸ್ತರಿಸಿರುವುದರಿಂದ ಯುದ್ಧದ ವೇಗ ತುಸು ಕಡಿಮೆಯಾಗಿದೆಯೆಂದು ಮೂಲಗಳು ತಿಳಿಸಿವೆ. ಮೊಸುಲ್ ಕದನದಲ್ಲಿ ಶುಕ್ರವಾರ ಇರಾಕಿ ವಿಶೇಷ ಪಡೆಗಳ ಕನಿಷ್ಠ ಏಳು ಯೋಧರು ಹಾಗೂ ಓರ್ವ ಅಧಿಕಾರಿ ಸಾವನ್ನಪ್ಪಿದ್ದಾರೆಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇರಾಕಿ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
‘‘ ಕಾರ್ಯಾಚರಣೆಯು ಚೆನ್ನಾಗಿ’ ಆದರೆ ನಿಧಾನವಾಗಿ ಸಾಗುತ್ತಿದೆ. ಈ ರೀತಿಯ ಮುನ್ನಡೆಯು ಯಾವತ್ತೂ ಮಂದಗತಿಯಲ್ಲಿರುತ್ತದೆ’’ ಎಂದು ಇರಾಕಿ ವಿಶೇಷ ಪಡೆಗಳ ವರಿಷ್ಠ ಕ್ಯಾ.ಮಲಿಕ್ ಹಾಮೀದ್ ತಿಳಿಸಿದ್ದಾರೆ. ಒಂದು ವೇಳೆ ವೇಗವಾಗಿ ಕಾರ್ಯಾಚರಣೆ ನಡೆಸಿದಲ್ಲಿ ಸಾವುನೋವಿನ ಪ್ರಮಾಣವೂ ಅಧಿಕವಾಗಿರುತ್ತದೆಯೆಂದವರು ಹೇಳಿದ್ದಾರೆ.