ಅಮೆರಿಕ ವಾಯುದಾಳಿಗೆ ಅಲ್‌ಖಾಯಿದ ನಾಯಕ ಬಲಿ
ವಾಶಿಂಗ್ಟನ್, ನ.5: ಕಳೆದ ತಿಂಗಳು ನಡೆಸಿದ ವಾಯು ದಾಳಿಯೊಂದರಲ್ಲಿ ಈಶಾನ್ಯ ಅಫ್ಘಾನಿಸ್ತಾನದ ಅಲ್‌ಖಾಯ್ದಾ ವರಿಷ್ಠ ಫಾರೂಕ್ ಅಲ್ ಕಹತಾನಿಯವರನ್ನು ತಾನು ಹತ್ಯೆಗೈದಿರುವುದಾಗಿ ಅಮೆರಿಕ ಸೇನೆ ಶುಕ್ರವಾರ ಘೋಷಿಸಿದೆ. ಅಫ್ಘಾನಿಸ್ತಾನದಲ್ಲಿ ತನ್ನ ನೆಲೆಯನ್ನು ಮರುಸ್ಥಾಪಿಸಲು ಶತಪ್ರಯತ್ನ ನಡೆಸುತ್ತಿರುವ ಅಲ್‌ಖಾಯಿದಗೆ ಫಾರೂಕ್ ಅಲ್ ಕಹತಾನಿ ಹತ್ಯೆಯು ಭಾರೀ ಹಿನ್ನಡೆಯೆನ್ನಲಾಗಿದೆ.
ಅಮೆರಿಕದ ನೆಲ, ನಮ್ಮ ಹಿತಾಸಕ್ತಿಗಳು ಹಾಗೂ ನಮ್ಮ ವಿದೇಶಿ ಮಿತ್ರರ ಮೇಲೆ ದಾಳಿ ನಡೆಸಲು ಬಯಸುತ್ತಿರುವ ಭಯೋತ್ಪಾದಕ ನಾಯಕರನ್ನು ಗುರಿಯಿಡಲು ಹಾಗೂ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲಗಳನ್ನು ನಾಶಪಡಿಸಲು ಅಮೆರಿಕ ನಡೆಸುತ್ತಿರುವ ಕಾರ್ಯಾಚರಣೆಗೆ ಇದು ಇನ್ನೊಂದು ಉದಾಹರಣೆಯಾಗಿದೆ’’ ಎಂದು ಪೆಂಟಗಾನ್ ವಕ್ತಾರ ಪೀಟರ್ ಕುಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಕಹತಾನಿಯನ್ನು ಅಕ್ಟೋಬರ್ 23ರಂದು ಈಶಾನ್ಯ ಅಫ್ಘಾನಿಸ್ತಾನ ಕುನೂರ್‌ನಲ್ಲಿ ಹತ್ಯೆಗೈಯಲಾಗಿದೆಯೆಂದು ಅವರು ದೃಢಪಡಿಸಿದರು. ಅಮೆರಿಕ ಸೇನೆ ನಡೆಸಿದ ಇನ್ನೊಂದು ಪ್ರತ್ಯೇಕ ವಾಯುದಾಳಿಯಲ್ಲಿ ಅಫ್ಘಾನಿಸ್ತಾನದ ಇನ್ನೋರ್ವ ಪ್ರಮುಖ ಅಲ್‌ಖಾಯಿದ ನಾಯಕ ಬಿಲಾಲ್ ಅಲ್-ಉತಾಬಿ ಮೇಲೂ ಗುರಿಯಿಡಲಾಗಿತ್ತು. ಆದರೆ ಆ ದಾಳಿಯ ವಿವರಗಳು ಇನ್ನೂ ಲಭ್ಯವಾಗಿಲ್ಲವೆಂದು ಪೀಟರ್ ಕುಕ್ ತಿಳಿಸಿದ್ದಾರೆ.