ಮುಸ್ಲಿಂ ರಾಜಕೀಯ ಮುಖಂಡರನ್ನು ಗೂಂಡಾಗಳು ಎಂದ ಅಮಿತ್ ಶಾ

Update: 2016-11-06 04:02 GMT

ಶಹಜಹಾನ್‌ಪುರ, ನ.6: ವಿರೋಧ ಪಕ್ಷಗಳಲ್ಲಿರುವ ಮುಸ್ಲಿಂ ನಾಯಕರನ್ನು ಹೆಸರಿಸಿ, ಅವರನ್ನು ಗೂಂಡಾಗಳು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರೆದಿರುವುದು ಇದೀಗ ಉತ್ತರ ಪ್ರದೇಶದಲ್ಲಿ ಆಕ್ರೋಶದ ಬಿರುಗಾಳಿ ಎಬ್ಬಿಸಿದೆ.

50 ದಿನಗಳಲ್ಲಿ ಇಡೀ ರಾಜ್ಯದ ಎಲ್ಲ 403 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಉದ್ದೇಶದ ನಾಲ್ಕು ಪರಿವರ್ತನಾ ಯಾತ್ರೆಗಳ ಪೈಕಿ ಮೊದಲ ಯಾತ್ರೆಗೆ ಚಾಲನೆ ನೀಡಿ ಮಾತನಾಡುವ ವೇಳೆ ಅವರು, ವಿರೋಧ ಪಕ್ಷಗಳ ಮುಸ್ಲಿಂ ರಾಜಕಾರಣಿಗಳನ್ನು ಗೂಂಡಾಗಳು ಎಂದು ಕರೆದರು. ಸರ್ಜಿಕಲ್ ದಾಳಿ, ಕೈರಾನ ಸಾಮೂಹಿಕ ವಲಸೆ, ತ್ರಿವಳಿ ತಲಾಖ್ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಸೇರಿದಂತೆ ವಿವಿಧ ವಿಷಯಗಳನ್ನು ಶಾ ಪ್ರಸ್ತಾಪಿಸಿದರು.

"ಸಮಾಜವಾದಿ ಪಕ್ಷದಲ್ಲಿ ಅತೀಕ್ ಅಹ್ಮದ್, ಮುಖ್ತಾರ್ ಅನ್ಸಾರಿ, ಅಫ್ಞಲ್ ಅನ್ಸಾರಿ ಹಾಗೂ ಅಝಂ ಖಾನ್ ಇದ್ದರೆ, ಬಹುಜನ ಸಮಾಜ ಪಕ್ಷದಲ್ಲಿ ನಝೀಮುದ್ದೀನ್ ಸಿದ್ದಿಕಿ ಇದ್ದಾರೆ. ಆದರೆ ಬಿಜೆಪಿಯಲ್ಲಿ ಯಾವ ಗೂಂಡಾಗಳೂ ಇಲ್ಲ. ಆಡಳಿತಾರೂಢ ಸಮಾಜವಾದಿ ಪಕ್ಷ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದು, ಭ್ರಷ್ಟಾಚಾರ ಎಲ್ಲೆಮೀರಿದೆ" ಎಂದು ಶಾ ಹೇಳಿದರು.

1990ರ ದಶಕದಲ್ಲಿ ಕಲ್ಯಾಣ್‌ಸಿಂಗ್ ಸರಕಾರದ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸಗಳಾಗಿದ್ದು, ಸಂಪೂರ್ಣ ಬಹುಮತ ಹೊಂದಿದ್ದ ಕಾರಣ ಹೇಗೆ ರಾಜ್ಯದಲ್ಲಿ ಗೂಂಡಾಗಳನ್ನು ಮಟ್ಟಹಾಕಲಾಗಿತ್ತು ಎಂದು ವಿವರಿಸಿದರು. ಇದೇ ವೇಳೆ ಗೋರಖ್‌ಪುರದ ವಿವಾದಾತ್ಮಕ ಸಂಸದ ಯೋಗಿ ಆದಿತ್ಯನಾಥ್ ಹಾಗೂ ಫೈಝಾಬಾದ್‌ನ ವಿನಯ್ ಕಟಿಯಾರ್ ಅವರನ್ನು ಯಾತ್ರೆಗೆ ಸ್ಟಾರ್ ಪ್ರಚಾರಕಾಗಿ ಪಕ್ಷ ನೇಮಿಸಿಕೊಂಡಿದೆ. ಎಲ್ಲರೂ ಜೈ ಶ್ರೀರಾಮ್ ಘೋಷಣೆಯೊಂದಿಗೆ ಭಾಷಣ ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News