×
Ad

ಶಕ್ತಿ ಸಿಂಗ್ ಸಿಕ್ಸರ್ ದಾಖಲೆ ಸರಿಗಟ್ಟಿದ ಇಶಾನ್ ಕಿಶನ್

Update: 2016-11-06 23:48 IST

ತಿರುವನಂತಪುರ, ನ.6: ಭಾರತದ ಅಂಡರ್-19 ತಂಡದ ನಾಯಕ ಇಶಾನ್ ಕಿಶನ್ ಬಾರಿಸಿದ ದ್ವಿಶತಕದ ನೆರವಿನಿಂದ ಜಾರ್ಖಂಡ್ ತಂಡ ದಿಲ್ಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 493 ರನ್ ಗಳಿಸಿದೆ. ಕಿಶನ್ ಇನಿಂಗ್ಸ್‌ನಲ್ಲಿ 14 ಸಿಕ್ಸರ್‌ಗಳನ್ನು ಬಾರಿಸಿ 26 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದರು.

1990ರಲ್ಲಿ ಹರ್ಯಾಣದ ವಿರುದ್ಧ ಹಿಮಾಚಲಪ್ರದೇಶದ ಶಕ್ತಿ ಸಿಂಗ್ 14 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ಕಿಶನ್ ಹಳೆಯ ಸಾಧನೆಯನ್ನು ಸರಿಗಟ್ಟಿದ್ದಾರೆ.

ಜಾರ್ಖಂಡ್‌ಗೆ ತಕ್ಕ ಉತ್ತರ ನೀಡಲು ಮುಂದಾಗಿರುವ ದಿಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್(ಔಟಾಗದೆ 109) ಶತಕದ ನೆರವಿನಿಂದ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 225 ರನ್ ಗಳಿಸಿದೆ. ಪಂತ್ ಕೇವಲ 82 ಎಸೆತಗಳಲ್ಲಿ ಶತಕ ಪೂರೈಸಿ ಮಿಂಚಿದ್ದಾರೆ.

ಈ ಪಂದ್ಯ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ನಾಯಕ ಹಾಗೂ ಉಪನಾಯಕರಾಗಿದ್ದ ಇಶಾನ್-ಪಂತ್ ನಡುವಿನ ನೇರ ಸ್ಪರ್ಧೆಯಾಗಿ ಪರಿಣಮಿಸಿದೆ.

ರವಿವಾರ ಔಟಾಗದೆ 162 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಶಾನ್ 7ನೆ ವಿಕೆಟ್‌ಗೆ ಶಹಾಬಾಝ್ ನದೀಮ್(39)ರೊಂದಿಗೆ 88 ರನ್ ಹಾಗೂ ವಿಕಾಸ್ ಸಿಂಗ್‌ರೊಂದಿಗೆ 9ನೆ ವಿಕೆಟ್‌ಗೆ 85 ರನ್ ಜೊತೆಯಾಟ ನಡೆಸಿ ತಂಡ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು.

18ರ ಹರೆಯದ ಪಾಟ್ನಾ ಮೂಲದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ 21 ಬೌಂಡರಿ, 14 ಭರ್ಜರಿ ಸಿಕ್ಸರ್‌ಗಳ ಸಹಿತ 273 ರನ್ ಗಳಿಸಿದರು. ಈ ಮೂಲಕ ಜಾರ್ಖಂಡ್‌ನ ವಿಕೆಟ್‌ಕೀಪರ್-ದಾಂಡಿಗ ಎಂಎಸ್ ಧೋನಿ ದಾಖಲೆಯನ್ನು ಮುರಿದರು. ಭಾರತದ ನಾಯಕ ಧೋನಿ ರಣಜಿಯಲ್ಲಿ 224 ರನ್ ಗಳಿಸಿದ್ದರು.

ದಿಲ್ಲಿಯ ನಾಯಕ ಉನ್ಮುಕ್ತ್ ಚಂದ್(89)ರೊಂದಿಗೆ ಕೈಜೋಡಿಸಿದ ಪಂತ್ 74 ರನ್‌ಗೆ 3 ವಿಕೆಟ್ ಕಳೆದುಕೊಂಡಿರುವ ತಂಡವನ್ನು ಆಧರಿಸಿದರು.

ಅನೂಪ್‌ಗೆ 7 ವಿಕೆಟ್,ಸಂಕಷ್ಟದಲ್ಲಿ ಸೌರಾಷ್ಟ್ರ: ಅಸ್ಸಾಂನ ಮಧ್ಯಮ ವೇಗಿ ಅನೂಪ್ ದಾಸ್ ದಾಳಿಗೆ ಸಿಲುಕಿದ ಸೌರಾಷ್ಟ್ರ 121 ರನ್‌ಗೆ 9 ವಿಕೆಟ್ ಕಳೆದುಕೊಂಡಿದೆ. ಅನೂಪ್ 39 ರನ್‌ಗೆ 7 ವಿಕೆಟ್ ಉರುಳಿಸಿ ಎದುರಾಳಿ ತಂಡಕ್ಕೆ ಸವಾಲಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News