ಒಳಗಿನವರ ’ಭರ್ಜರಿ ಸಹಕಾರ’ದಿಂದಲೇ ಪರಾರಿ: ಸಾಕ್ಷ್ಯ

Update: 2016-11-07 03:14 GMT

ಭೋಪಾಲ್, ನ.7: ಇಲ್ಲಿನ ಕೇಂದ್ರ ಕಾರಾಗೃಹದಿಂದ ಎಂಟು ಮಂದಿ ಸಿಮಿ ಕಾರ್ಯಕರ್ತರು ತಪ್ಪಿಸಿಕೊಳ್ಳಲು ಒಳಗಿನವರೇ ಸಹಕಾರ ನೀಡಿರುವುದಕ್ಕೆ ಇದೀಗ ಸ್ಪಷ್ಟ ಪುರಾವೆಗಳು ಸಿಕ್ಕಿವೆ.

ಬೀಗಕ್ಕೆ ಸರಿಹೊಂದುವ ಮೌಲ್ಡ್ ಮಾಡಲಾದ ನಕಲಿ ಕೀಲಿ, ಚರಂಡಿ ಬದಿಯಲ್ಲಿ ಸಿಕ್ಕಿರುವ ಚೂರಿ ಹಾಗೂ ಜೈಲಿನ ಬಿ ಬ್ಲಾಕ್‌ನ ಸಿಸಿಟಿವಿ ಕ್ಯಾಮರಾ ನಿಷ್ಕ್ರಿಯವಾಗಿರುವುದು ಒಳಗಿನವರ ಭರ್ಜರಿ ಸಹಕಾರಕ್ಕೆ ಪುರಾವೆಗಳಾಗಿವೆ. ಇದರಿಂದ ಕೇವಲ ಕಾವಲು ವೈಫಲ್ಯ ಮಾತ್ರವಲ್ಲದೇ ಒಳಗಿನವರು ಸಹಕಾರ ನೀಡಿರುವುದು ಖಚಿತ ಎನ್ನುವುದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇದೀಗ ಮನವರಿಕೆಯಾಗಿದೆ.

ಇದರ ಜೊತೆಗೆ ಆಚಾರಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸ್ ಅಧಿಕಾರಿಗಳು, "ಅವರನ್ನು ಮುಗಿಸಿಬಿಡಿ" ಎಂದು ಸೂಚನೆ ನೀಡಿರುವುದಕ್ಕೆ ಧ್ವನಿಮುದ್ರಿತ ಪುರಾವೆಯೂ ಸಿಕ್ಕಿದೆ. ನೆಲದ ಮೇಲೆ ಬಿದ್ದಿದ್ದ ದೇಹಗಳ ಮೇಲೆ ಪೊಲೀಸರು ಗುಂಡು ಹಾರಿಸುತ್ತಿರುವ ದೃಶ್ಯ ಕೂಡಾ ವೀಡಿಯೊ ತುಣುಕುಗಳಲ್ಲಿ ಸೆರೆಯಾಗಿದೆ.

ಮಧ್ಯಪ್ರದೇಶದ ಗೃಹಸಚಿವ ಭೂಪೇಂದ್ರ ಸಿಂಗ್, "ಒಳಗಿನವರ ಭರ್ಜರಿ ಸಹಕಾರ ಇಲ್ಲದೇ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಈ ಕೃತ್ಯಕ್ಕೆ ಹೊರಗಿನವರು ಹಣಕಾಸು ನೆರವು ನೀಡಿದ್ದಾರೆ" ಎಂದು ಹೇಳಿದ್ದಾರೆ.

"ಇದಕ್ಕೆ ವಿಸ್ತೃತವಾಗಿ ಎರಡು- ಮೂರು ತಿಂಗಳಿನಿಂದ ಸಿದ್ಧತೆ ನಡೆದಿರುವ ಸಾಧ್ಯತೆ ಇದೆ. ಏಕೆಂದರೆ ಅಷ್ಟು ಬೇಗ ಹಾಗೂ ಒಳಗಿನವರ ಸಹಕಾರ ಇಲ್ಲದೇ ನಕಲಿ ಕೀಲಿಗಳನ್ನು ಮಾಡಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಜೈಲಿನಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿದ್ದು, ಬಿ ಬ್ಲಾಕ್‌ನ ಕ್ಯಾಮೆರಾ ಮಾತ್ರ ನಿಷ್ಕ್ರಿಯವಾಗಿರುವುದು ಮತ್ತು ದೀರ್ಘಕಾಲದಿಂದ ಇದು ಸ್ವಿಚ್ ಆಫ್ ಆಗಿ ಇದ್ದುದು ಕೂಡಾ ಈ ವಾದಕ್ಕೆ ಪುಷ್ಟಿ ನೀಡುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News