ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಇನ್ನೊಂದು ಆಘಾತ

Update: 2016-11-07 03:30 GMT

ಹೊಸದಿಲ್ಲಿ, ನ.7: ಉತ್ತರ ಪ್ರದೇಶದಲ್ಲಿ ಚುನಾವಣೆ ಸನಿಹವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗುತ್ತಿದೆ. ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಮೂರು ತಿಂಗಳು ಪ್ರಚಾರ ಕೈಗೊಳ್ಳುವ ಹಾಗೂ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರ 20 ದಿನಗಳ ಸಮುದಾಯ ಸಂಪರ್ಕ ಯೋಜನೆಯ ಪ್ರಸ್ತಾವವನ್ನು ತಿರಸ್ಕರಿಸಿರುವುದು ಪಕ್ಷದ ಗೊಂದಲಕ್ಕೆ ಸಾಕ್ಷಿಯಾಗಿದೆ.

ರಾಹುಲ್‌ಗಾಂಧಿ ಕೈಗೊಂಡಿರುವ 26 ದಿನಗಳ ದಿಲ್ಲಿ ಟು ದೆವೊರಿಯಾ ಯಾತ್ರೆಯಿಂದ ಗರಿಗೆದರಿರುವ ಪಕ್ಷದ ಚಟುವಟಿಕೆಗಳಿಗೆ ಈ ಪ್ರಸ್ತಾವ ತಿರಸ್ಕೃತಗೊಂಡಿರುವುದರಿಂದ ತಣ್ಣೀರು ಎರಚಿದಂತಾಗಿದೆ. ಈ ಯಾತ್ರೆ ಮುಗಿದ ತಕ್ಷಣ ಪ್ರಿಯಾಂಕಾ ಹಾಗೂ ಸೋನಿಯಾ ಅವರು ಪ್ರಚಾರ ಕಾರ್ಯವನ್ನು ಉತ್ತುಂಗಕ್ಕೆ ಒಯ್ಯುವುದು ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಭೂಷಣ್ ಅವರ ಪ್ರಸ್ತಾವವಾಗಿತ್ತು.

ಆದರೆ, ಈ ಯೋಜನೆ ಕಾಂಗ್ರೆಸ್‌ನಂಥ ಸಂಪ್ರದಾಯವಾದಿ ಪಕ್ಷಕ್ಕೆ ತೀರಾ ಸಾಹಸದಾಯಕ ಎನಿಸಿದೆ. ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ಚುನಾವಣಾ ಪ್ರಚಾರ ಸಿದ್ಧತೆಗಳ ಪರಿಶೀಲನಾ ಸಭೆಗೆ ಹಾಜರಾಗಿದ್ದರು. ಕಾಂಗ್ರೆಸ್‌ನ ಸಾಂಪ್ರದಾಯಿಕ ಭದ್ರಕೋಟೆ ಎನಿಸಿದ ರಾಯಬರೇಲಿ- ಅಮೇಥಿ ಹೊರಗೆ ಈ ಬಾರಿ ಪ್ರಚಾರ ಕೈಗೊಳ್ಳಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಆಕೆಯನ್ನು ರಾಜ್ಯದಲ್ಲಿ ಪಕ್ಷದ ಧ್ವಜಧಾರಿಣಿಯಾಗಿ ಮಾಡುವ ಬಗ್ಗೆ ರಾಜ್ಯ ಘಟಕಕ್ಕೆ ಆಸಕ್ತಿ ಇಲ್ಲ ಎನ್ನಲಾಗಿದೆ. ಇದರಿಂದ ಪಕ್ಷದಲ್ಲಿ ಗೊಂದಲ ನಿರ್ಮಾಣವಾಗಿದೆ. ಇದರಿಂದ ಪ್ರಶಾಂತ್ ಭೂಷಣ್ ಕೂಡಾ ಮುಂದಿನ ತಂತ್ರಗಾರಿಕೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News