ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕೈಕೊಟ್ಟ ಮೈತ್ರಿ ಪಕ್ಷ
ಲಕ್ನೋ, ನ.7: ಪಂಜಾಬ್ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ್ದ ಶಿರೋಮಣಿ ಅಕಾಲಿ ದಳ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕೈಕೊಟ್ಟಿದ್ದು ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಸಜ್ಜಾಗಿದೆ.
ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಹರನಪುರದಲ್ಲಿ ಪರಿವರ್ತನ್ ಯಾತ್ರೆಗೆ ಹಸಿರು ನಿಶಾನೆ ತೋರಿಸಿದ ಸಮಾರಂಭವನ್ನು ಅಕಾಲಿ ದಳ ಬಹಿಷ್ಕರಿಸಿತ್ತು. ಬಿಜೆಪಿ ಸಿಖ್ ಸಮುದಾಯದ ಏಳಿಗೆಗಾಗಿ ಏನ್ನೂಮಾಡಿಲ್ಲವೆಂಬ ಆರೋಪ ಅಕಾಲಿ ದಳದ್ದು. ಕಾರ್ಯಕ್ರಮವನ್ನು ಬಹಿಷ್ಕರಿಸುವ ಪಕ್ಷದ ನಿರ್ಧಾರವನ್ನು ಹಾಗೂ ಅದರ ಹಿಂದಿನ ಕಾರಣವನ್ನುಅಮಿತ್ ಶಾಗೆ ಮೊದಲೇ ತಿಳಿಸಲಾಗಿತ್ತು ಎಂದು ಅಕಾಲಿ ದಳ ಹೇಳಿಕೊಂಡಿದೆ.
ತರುವಾಯ ಪರಿವರ್ತನ್ ರ್ಯಾಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅಮಿತ್ ಶಾ, ತನ್ನ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶವನ್ನು ದೇಶದ ಅತ್ಯಂತ ಸಮೃದ್ಧಿಯುತ ರಾಜ್ಯವನ್ನಾಗಿ ಮಾಡಲು ಬಯಸಿದ್ದಾರೆಂದು ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಾಗೂ ಅಪರಾಧಿಗಳನ್ನು ಸಂರಕ್ಷಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿ ಆರೋಪಿಸಿದ ಅವರು, ಮಾಯಾವತಿ ಭ್ರಷ್ಟಾಷಾರ ನಿರತರಾಗಿದ್ದಾರೆ ಎಂದೂ ದೂರಿದರು.
ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಹಲವಾರು ಹಗರಣಗಳು ನಡೆದಿದ್ದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಹಗರಣ ವರದಿಯಾಗಿಲ್ಲ ಎಂದೂ ಅವರು ಹೇಳಿದರು. ಬಿಜೆಪಿ ಸರಕಾರ ಪ್ರತಿ 15 ದಿನಕ್ಕೊಂದು ಹೊಸ ಯೋಜನೆ ಜಾರಿಗೆ ತರುತ್ತಿದೆ ಎಂದೂ ಅವರು ಹೇಳಿಕೊಂಡರು.