ಅಮೇರಿಕಾದಂತಹ ಅಮೆರಿಕವೇ ಇಲೆಕ್ಟ್ರಾನಿಕ್ ಮತ ಯಂತ್ರ ಬಳಸುವುದಿಲ್ಲ. ಏಕೆ ಗೊತ್ತೇ ?
ವಾಷಿಂಗ್ಟನ್, ನ.7: ಮುಂದಿನ ಐದು ದಿನಗಳಲ್ಲಿ ಅಮೆರಿಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಅದು ಹಿಲರಿ ಕ್ಲಿಂಟನ್ ಅಥವಾ ಡೊನಾಲ್ಡ್ ಟ್ರಂಪ್ ಆಗಿರಬಹುದು. ಆದರೆ ಆಶ್ಚರ್ಯದ ವಿಷಯವೆಂದರೆ ವಿಶ್ವದ ಹಲವಾರು ದೇಶಗಳು ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವಂತಹ ಇಂದಿನ ಕಾಲದಲ್ಲಿ ವಿಶ್ವದ ಹಿರಿಯಣ್ಣನಾಗಿರುವ ಅಮೆರಿಕ ಈಗಲೂ ಮತಪತ್ರಗಳನ್ನೇ ಬಳಸುತ್ತಿದೆ.
ವರದಿಗಳ ಪ್ರಕಾರ ಇಲೆಕ್ಟ್ರಾನಿಕ್ ಮತಯಂತ್ರಗಳಿಗೆ ಹೋಲಿಸಿದಾಗ ಅಮೇರಿಕನ್ನರು ಮತಪತ್ರಗಳೇ ಹೆಚ್ಚು ಸುರಕ್ಷಿತವೆಂದು ನಂಬಿದ್ದಾರೆ. ‘ಸುರಕ್ಷತೆ ಹಾಗೂ ಮತದಾರರ ಇಚ್ಛೆಯಂತೆಯೇ ಮತಪತ್ರಗಳನ್ನೇ ಉಪಯೋಗಿಸಲಾಗುತ್ತದೆಯೆಂದು ಅಮೆರಿಕದ ಚುನಾವಣಾ ಸಹಕಾರ ಆಯೋಗದ ಅಧ್ಯಕ್ಷ ಟಾಮ್ ಹಿಕ್ಸ್ ಹೇಳಿದ್ದಾರೆ.
ಇ-ವೋಟಿಂಗ್ ಹಾಗೂ ಹೊಸ ಮತಯಂತ್ರಗಳನ್ನು ಖರೀದಿಸುವುದು ದೇಶದ ಖಜಾನೆಗೆ ಹೊರೆಯಾಗುವುದು ಎಂದು ಹೇಳಲಾಗಿದೆ. ಮೇಲಾಗಿ ಅಮೆರಿಕದಲ್ಲಿ ಕಳೆದ ಹಲವಾರು ದಶಕಗಳಿಂದ ಮತಪತ್ರಗಳೇ ಸುರಕ್ಷಿತವೆಂಬ ನಂಬಿಕೆಯಿದೆ.
ಅಮೆರಿಕನ್ನರು ಬ್ಯಾಂಕಿಂಗ್, ಶಿಕ್ಷಣ ಹಾಗೂ ಭದ್ರತಾ ವಿಚಾರಗಳಿಗೆ ಇಲೆಕ್ಟ್ರಾನಿಕ್ ಸಾಧನಗಳನ್ನೇ ಉಪಯೋಗಿಸುತ್ತಿರುವ ಇಂದಿನ ಸಂದರ್ಭದಲ್ಲಿ ಮತಪತ್ರಗಳನ್ನೇ ಉಪಯೋಗಿಸುತ್ತಿರುವ ಹಿಂದಿನ ತರ್ಕ ಹೆಚ್ಚಿನ ಕಾಲ ಬಾಳದು ಎಂಬುದು ಹಲವರ ಅಭಿಪ್ರಾಯ.
ಮುದ್ರಿತ ಮತಪತ್ರಗಳು ಅಮೆರಿಕದಲ್ಲಿ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿತ್ತು. 1884 ರ ಅಧ್ಯಕ್ಷೀಯ ಚುನಾವಣೆಯ ನಂತರ ರಹಸ್ಯ ಮತದಾನ ಪದ್ಧತಿಯನ್ನು ಆಯ್ದುಕೊಳ್ಳಲಾಗಿತ್ತು. 1982 ರ ಹೊತ್ತಿಗೆ ಮತಪತ್ರಗಳ ಉಪಯೋಗ ಆರಂಭವಾಗಿತ್ತು. ಆದರೆ ಅಮೆರಿಕದ ಏಳು ರಾಜ್ಯಗಳಲ್ಲಿ 20ನೆ ಶತಮಾನದ ತನಕ ಮುದ್ರಿತ ಕರಪತ್ರಗಳು ಬಂದಿರಲಿಲ್ಲ. ಪ್ರಸ್ತುತ ಹಲವಾರು ರಾಜ್ಯಗಳಲ್ಲಿ ರಹಸ್ಯ ಮತದಾನ ಪದ್ಧತಿ ಚಾಲ್ತಿಯಲ್ಲಿದ್ದರೂ ಕೆಲವು ರಾಜ್ಯಗಳು ಅಂಚೆ ಮತಪತ್ರಗಳನ್ನು ಉಪಯೋಗಿಸುತ್ತವೆ. ಈ ಪದ್ಧತಿಯಲ್ಲಿ ಮತಪತ್ರಗಳನ್ನು ಮತದಾರರ ಮನೆಗಳಿಗೆ ಕಳುಹಿಸಲಾಗುತ್ತದೆ. ಒರೆಗಾನ್ ಹಾಗೂ ವಾಷಿಂಗ್ಟನ್ ನಲ್ಲಿ ಎಲ್ಲಾ ಚುನಾವಣೆಗಳನ್ನು ಅಂಚೆ ಮತಪತ್ರಗಳ ಮುಖಾಂತರವೇ ನಡೆಸಲಾಗುತ್ತದೆ.
ಇಮೇಲ್ ಅಥವಾ ಫ್ಯಾಕ್ಸ್ ಮುಖಾಂತರವೂ ಕೆಲವೆಡೆ ಇ-ವೋಟಿಂಗ್ ನಡೆಯುತ್ತದೆ.