ಅಮೆರಿಕದ ಅಧ್ಯಕ್ಷೀಯ ಚುನಾವಣೆ: ಸ್ಥೂಲ ನೋಟ
ವಾಶಿಂಗ್ಟನ್, ನ. 7: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಈ ವರ್ಷ ನವೆಂಬರ್ 8ರಂದು ನಡೆಯಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪ್ರಕ್ರಿಯೆ ನವೆಂಬರ್ ತಿಂಗಳ ಮೊದಲ ಸೋಮವಾರದ ಮಾರನೆ ದಿನ ಮಂಗಳವಾರ ನಡೆಯುತ್ತದೆ. ಹೀಗೆಂದು ಅಮೆರಿಕದ ಸಂವಿಧಾನದಲ್ಲೇ ಉಲ್ಲೇಖಿಸಲಾಗಿದೆ.
ಅಮೆರಿಕದ ಚುನಾವಣಾ ವ್ಯವಸ್ಥೆಯ ಸ್ಥೂಲ ನೋಟ ಇಲ್ಲಿದೆ:
ಅಮೆರಿಕದಲ್ಲಿ ಮತದಾನವು ಒಂದೇ ದಿನ ಎಲ್ಲ 50 ರಾಜ್ಯಗಳು ಮತ್ತು ಕೊಲಂಬಿಯ ಜಿಲ್ಲೆ (ವಾಶಿಂಗ್ಟನ್ ನಗರ- ಇದು ಯಾವುದೇ ರಾಜ್ಯದ ಭಾಗವಲ್ಲ)ಯಲ್ಲಿ ನಡೆಯುತ್ತದೆ.
ಮತದಾರರು ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪೈಕಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಪ್ರತಿ ರಾಜ್ಯದಲ್ಲಿ ಮತದಾರರು ಬಹುಮತದ ಮೂಲಕ ಮತದಾರ ಕಾಲೇಜ್‌ನ ನಿರ್ದಿಷ್ಟ ಸಂಖ್ಯೆಯ ಸದಸ್ಯರನ್ನು ನಿರ್ಧರಿಸುತ್ತಾರೆ. ಈ ಸದಸ್ಯರು ನಿರ್ದಿಷ್ಟ ಅಭ್ಯರ್ಥಿಗೆ ಬೆಂಬಲ ನೀಡುವವರಾಗಿರುತ್ತಾರೆ.
ಮತದಾರ ಕಾಲೇಜ್‌ನಲ್ಲಿ 538 ಸದಸ್ಯರಿರುತ್ತಾರೆ. ರಾಜ್ಯವೊಂದರ ಜನಸಂಖ್ಯೆಯನ್ನು ಆಧರಿಸಿ ಸದಸ್ಯರ ಸಂಖ್ಯೆ ನಿರ್ಧಾರವಾಗುತ್ತದೆ.
ರಾಜ್ಯವೊಂದರಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಪ್ರತಿ ಸದಸ್ಯರಿಗೆ ಒಬ್ಬರಂತೆ ಮತ್ತು ತಲಾ ಇಬ್ಬರು ಸೆನೆಟರ್‌ಗಳಿಗೆ ಒಬ್ಬರಂತೆ ಆಯ್ಕೆಗಾರ (ಇಲೆಕ್ಟರ್) ಇರುತ್ತಾರೆ.
ಈ ರೀತಿಯಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಕ್ಯಾಲಿಫೋರ್ನಿಯ ರಾಜ್ಯದಲ್ಲಿ 55 ಇಲೆಕ್ಟರ್‌ಗಳು ಇರುತ್ತಾರೆ. ಟೆಕ್ಸಾಸ್‌ನಲ್ಲಿ 38 ಹಾಗೂ ನ್ಯೂಯಾರ್ಕ್ ಮತ್ತು ಫ್ಲೋರಿಡಗಳಲ್ಲಿ ತಲಾ 29 ಇಲೆಕ್ಟರ್‌ಗಳು ಇರುತ್ತಾರೆ.
ಅದೇ ವೇಳೆ, ಕಡಿಮೆ ಜನಸಂಖ್ಯೆಯಿರುವ ಅಲಾಸ್ಕ, ಡೆಲಾವೇರ್, ವರ್ಮಂಟ್ ಮತ್ತು ವ್ಯೋಮಿಂಗ್ ರಾಜ್ಯಗಳು ಮತ್ತು ಕೊಲಂಬಿಯ ಜಿಲ್ಲೆಯಲ್ಲಿ ಕೇವಲ ತಲಾ ಮೂವರು ಇಲೆಕ್ಟರ್‌ಗಳು ಇರುತ್ತಾರೆ.
ಇಲೆಕ್ಟೋರಲ್ ಕಾಲೇಜ್‌ನ ಸದಸ್ಯರು ಅಧಿಕೃತವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಡಿಸೆಂಬರ್ 19ರಂದು ಆಯ್ಕೆ ಮಾಡುತ್ತಾರೆ. ಆದರೆ, ಅದು ಔಪಚಾರಿಕ ಕ್ರಮವಷ್ಟೆ.