ಹಿಲರಿ ಅಧ್ಯಕ್ಷೆಯಾದರೆ, ಬಿಲ್ ಕ್ಲಿಂಟನ್ ಏನು?
ವಾಶಿಂಗ್ಟನ್, ನ. 7: ಪ್ರತಿಭಾ ಪಾಟೀಲ್ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಒಂದು ವಿಷಯದಲ್ಲಿ ಎಲ್ಲರಲ್ಲೂ ಕುತೂಹಲವಿತ್ತು! ಅವರನ್ನು ಏನೆಂದು ಕರೆಯುವುದು? ರಾಷ್ಟ್ರಪತಿಯ, ರಾಷ್ಟ್ರಪತ್ನಿಯ? ಆದರೆ, ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆದರು.ಇಂಥದೇ ಒಂದು ಜಿಜ್ಞಾಸೆ ಈಗ ಅಮೆರಿಕದಲ್ಲಿ ನಡೆಯುತ್ತಿದೆ.
ಒಂದು ವೇಳೆ ಮಂಗಳವಾರ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿಜಯಿಯಾದರೆ, ಅವರ ಗಂಡ ಬಿಲ್ ಕ್ಲಿಂಟನ್‌ರನ್ನು ಏನೆಂದು ಕರೆಯುವುದು?
ಈವರೆಗೆ ಅಮೆರಿಕದಲ್ಲಿ ಆಯ್ಕೆಯಾಗಿದ್ದು ಪುರುಷ ಅಧ್ಯಕ್ಷರೇ. ಅವರ ಪತ್ನಿಯರನ್ನು ಪ್ರಥಮ ಮಹಿಳೆ (ಫಸ್ಟ್ ಲೇಡಿ)ಯರೆಂದು ಕರೆಯಲಾಗುತ್ತಿತ್ತು. ಓರ್ವ ಅಧ್ಯಕ್ಷ ಜೇಮ್ಸ್ ಬುಕನನ್ ಜೀವನಪೂರ್ತಿ ಬ್ರಹ್ಮಾಚಾರಿಯಾಗಿಯೇ ಉಳಿದರು.
ಅದೂ ಅಲ್ಲದೆ, ಬಿಲ್ ಕ್ಲಿಂಟನ್ ವಿಚಾರದಲ್ಲಿ ಇನ್ನೊಂದು ಸಮಸ್ಯೆಯೂ ಇದೆ. ಅವರು 1992 ಮತ್ತು 1996ರಲ್ಲಿ ಎರಡು ಬಾರಿ ಆಯ್ಕೆಯಾಗಿ ಎಂಟು ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿದ್ದವರು.
ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರಾಗಿದ್ದವರನ್ನು ಅವರು ಅಧಿಕಾರದಿಂದ ಕೆಳಗಿಳಿದ ಮೇಲೂ ‘ಅಧ್ಯಕ್ಷ’ ಎಂಬುದಾಗಿ ಸಂಭೋಧಿಸಲಾಗುತ್ತಿದೆ. ಆದರೆ, ಹಿಲರಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಬಿಲ್‌ರನ್ನು ‘ಅಧ್ಯಕ್ಷ’ ಎಂಬುದಾಗಿ ಕರೆಯುವಂತಿಲ್ಲ. ಯಾಕೆಂದರೆ, ಅದು ಭಾರಿ ಗೊಂದಲಕ್ಕೆ ಕಾರಣವಾಗಲಿದೆ.
ಪುರುಷ ಸಂಗಾತಿಯನ್ನು ಹೇಗೆ ಕರೆಯಬೇಕು ಎಂಬ ವಿಷಯ ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿದೆ, ಆದರೆ, ಇದು ಬಿಲ್ ಕ್ಲಿಂಟನ್‌ಗೆ ಅನ್ವಯಿಸುವುದೇ ಎನ್ನುವುದು ಬೇರೆ ವಿಚಾರ ಎಂದು ಶಿಷ್ಟಾಚಾರ ಪರಿಣತೆ ಲೀಸಾ ಗ್ರಾಟ್ಸ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
‘‘ಅಮೆರಿಕದ ಆರು ರಾಜ್ಯಗಳಲ್ಲಿ ಮಹಿಳಾ ಗವರ್ನರ್‌ಗಳಿದ್ದಾರೆ. ಅವರ ಗಂಡಂದಿರನ್ನು ಅನಧಿಕೃತವಾಗಿ ‘ಫಸ್ಟ್ ಜಂಟಲ್‌ಮನ್’ ಎಂದೇ ಸಂಬೋಧಿಸಲಾಗುತ್ತಿದೆ. ಆದರೆ, ಅಧ್ಯಕ್ಷರ ಸಂಗಾತಿಗಳ ವಿಷಯದಲ್ಲಿ ಇಂಥ ನಿಯಮಗಳಿಲ್ಲ’’ ಎಂದು ಅವರು ಹೇಳುತ್ತಾರೆ.
‘‘ಒಮ್ಮೆ ಅಧ್ಯಕ್ಷರಾದರೆ ಅವರು ಯಾವತ್ತೂ ಅಧ್ಯಕ್ಷರೇ. ಜೀವನಪರ್ಯಂತ ಅವರ ಉಪಾಧಿ ಅದೇ ಆಗಿರುತ್ತದೆ’’ ಎಂದೂ ಅವರು ಅಭಿಪ್ರಾಯಪಡುತ್ತಾರೆ.
‘‘ದಂಪತಿ ಭಾಗವಹಿಸುವ ಅಧಿಕೃತ ಸಮಾರಂಭಗಳಲ್ಲಿ ಬಿಲ್‌ರನ್ನು ಪ್ರೆಸಿಡೆಂಟ್ ಬಿಲ್ ಕ್ಲಿಂಟನ್ ಅಥವಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಎಂಬುದಾಗಿ ಸಂಭೋಧಿಸಬಹುದಾಗಿದೆ’’ ಎಂದು ಇನ್ನೋರ್ವ ಪರಿಣತರು ಅಭಿಪ್ರಾಯಪಡುತ್ತಾರೆ.