ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಅಗತ್ಯ: ಅಮೀನ್ ಮಟ್ಟು

Update: 2016-11-07 17:29 GMT

ತೀರ್ಥಹಳ್ಳಿ,ನ.7: ಪ್ರಸ್ತುತ ದಿನಗಳಲ್ಲಿ ದುಂದು ವೆಚ್ಚವಾಗುತ್ತಿರುವ ಅದ್ದೂರಿ ಮದುವೆಗಳಿಗೆ ಕಡಿವಾಣ ಹಾಕಬೇಕಾಗಿದೆ. ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಮಂತ್ರಮಾಂಗಲ್ಯ ಮದುವೆ ಜನಸಾಮಾನ್ಯರನ್ನು ತಲುಪುವ ಅಗತ್ಯವಿದೆ ಎಂದು ಚಿಂತಕ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು ಹೇಳಿದ್ದಾರೆ.
ತಾಲೂಕಿನ ಕುಪ್ಪಳಿಯ ಹೇಮಾಂಗಣದಲ್ಲಿ ಆಯೋಜಿಸಿದ್ದ ಪತ್ರಕರ್ತ ಪ್ರಶಾಂತ್ ಹುಲ್ಕೋಡು ಹಾಗೂ ಮಂಜುಳ ಮಾಸ್ತಿಕಟ್ಟೆಯವರ ಮಂತ್ರ ಮಾಂಗಲ್ಯ ಕಾರ್ಯಕ್ರಮದಲ್ಲಿ ಕುವೆಂಪುರವರ ಮಂತ್ರ ಮಾಂಗಲ್ಯವನ್ನು ಬೋಧಿಸಿ ನಂತರ ಮಾತನಾಡಿದರು.
ಅದ್ದೂರಿ ಮದುವೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಯುವ ಪೀಳಿಗೆ ದುಂದುವೆಚ್ಚದ ಮದುವೆ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಪೋಷಕರು ತಮ್ಮ ಮಕ್ಕಳ ಪ್ರೀತಿ ವಿಚಾರದಲ್ಲಿ ಹೆಚ್ಚು ಗೌರವಿಸುವ ಅಗತ್ಯವಿದೆ. ಪ್ರತಿಯೊಬ್ಬರು ಪ್ರೀತಿಯನ್ನು ಗೌರವಿಸಿ ಮಾನವೀಯ ಮೌಲ್ಯಗಳ ದೃಷ್ಟಿಯಲ್ಲಿ ಚಿಂತಿಸಬೇಕಾಗಿದೆ ಎಂದರು.
ಮನುಷ್ಯಪ್ರೀತಿ ನಶಿಸುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ಬದುಕಿನಲ್ಲಿ ಮೌಲ್ಯದ ಬಗ್ಗೆ ಹೆಚ್ಚು ಯೋಚಿಸುವಂತಾಗಬೇಕು. ಪ್ರೀತಿ ವಿಚಾರ ಬಂದಾಗ ಪೋಷಕರು ಮದುವೆಯನ್ನು ವಿರೋಧಿಸಿ ಆಗುವ ಬಹಳಷ್ಟು ಅನಾಹುತಗಳನ್ನು ನಾವು ಗಮನಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳ ಪ್ರೀತಿಯ ವಿಚಾರ ಬಂದಾಗ ಭವಿಷ್ಯದ ಬಗ್ಗೆ ಯೋಚಿಸಿ ಅವರ ಆಯ್ಕೆ ಮತ್ತು ಸ್ವತಂತ್ರಕ್ಕೆ ದಾರಿ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಕುಪ್ಪಳಿ ಕುವೆಂಪು ಪ್ರತಿಷ್ಠಾನದ ಸಹಕಾರ್ಯದರ್ಶಿ ಕಡಿದಾಳು ಪ್ರಕಾಶ್, ನೂತನ ವಧೂ-ವರರ ಪೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News