ನಾಯಕತ್ವ ತ್ಯಜಿಸುವ ಸುಳಿವು ನೀಡಿದ ಕುಕ್
ಲಂಡನ್, ನ.8: ‘‘ಮುಂಬರುವ ಭಾರತ ವಿರುದ್ಧ ಟೆಸ್ಟ್ ಸರಣಿಯು ನಾಯಕನಾಗಿ ನನ್ನ ಕೊನೆಯ ಸರಣಿಯಾಗಿದೆ’’ ಎಂದು ಇಂಗ್ಲೆಂಡ್ ನಾಯಕ ಅಲೆಸ್ಟೈರ್ ಕುಕ್ ಸುಳಿವು ನೀಡಿದ್ದಾರೆ.
‘‘ನಾನು ಟೆಸ್ಟ್ ವೃತ್ತಿಜೀವನವನ್ನು ಆರಂಭಿಕ ಬ್ಯಾಟ್ಸ್‌ಮನ್ ಆಗಿಯೇ ಮುಂದುವರಿಯಲು ಬಯಸಿದ್ದೇನೆ. ಇನ್ನೆಷ್ಟು ದಿನ ನಾಯಕನಾಗಿ ಮುಂದುವರಿಯುವೆ ಎನ್ನುವ ಬಗ್ಗೆ ನನಗೆ ಏನೂ ಗೊತ್ತಿಲ್ಲ’’ ಎಂದು ಕುಕ್ ‘ದಿ ಟೈಮ್ಸ್’ ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕುಕ್ ಬುಧವಾರ ಭಾರತ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಮೂಲಕ ಗರಿಷ್ಠ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ನಾಯಕನಾಗಿದ್ದ ಮೈಕಲ್ ಅಥರ್ಟನ್(54 ಟೆಸ್ಟ್ ಪಂದ್ಯ) ದಾಖಲೆಯನ್ನು ಮುರಿಯಲಿದ್ದಾರೆ. 2012ರಲ್ಲಿ ಇಂಗ್ಲೆಂಡ್‌ನ ಟೆಸ್ಟ್ ನಾಯಕತ್ವವನ್ನು ವಹಿಸಿಕೊಂಡಿದ್ದ ಕುಕ್ ಅದೇ ವರ್ಷ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ವಿದೇಶಿ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆಲ್ಲಲು ನೆರವಾಗಿದ್ದರು.
ಕುಕ್ ನಾಯಕನಾಗಿ 24 ಟೆಸ್ಟ್ ಪಂದ್ಯಗಳನ್ನು ಜಯಿಸಿದ್ದು, ಇದರಲ್ಲಿ ಸ್ವದೇಶದಲ್ಲಿ ನಡೆದ ಎರಡು ಆ್ಯಶಸ್ ಸರಣಿಯೂ ಸೇರಿದೆ. 2006ರಲ್ಲಿ ನಾಗ್ಪುರದಲ್ಲಿ ಭಾರತ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಕುಕ್ ಅದೇ ಪಂದ್ಯದಲ್ಲಿ ಶತಕ ಬಾರಿಸಿದ್ದರು. 135 ಟೆಸ್ಟ್‌ಗಳಲ್ಲಿ 10,688 ರನ್ ಗಳಿಸಿರುವ ಕುಕ್ ಗರಿಷ್ಠ ರನ್ ಗಳಿಸಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
‘‘ಭಾರತ ವಿರುದ್ಧ ಸರಣಿ ಅಥವಾ 2017-18ರ ಆ್ಯಶಸ್ ಸರಣಿ ವೇಳೆ ಕುಕ್ ್ಞನಾಯಕತ್ವವನ್ನು ತ್ಯಜಿಸಲೇ ಬೇಕು. ಮಂದಿನ ಆರೇಳು ತಿಂಗಳು ಕುಕ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಅವರಿಗೆ ಹಲವು ದಾಖಲೆ ಮುರಿಯುವ ಅವಕಾಶವಿದೆ. ಅವರು ವೃತ್ತಿಜೀವನ ಮುಂದುವರಿಸಲು ಬಯಸಿದರೆ ಬ್ಯಾಟ್ಸ್‌ಮನ್ ಆಗಿ ಇನ್ನೂ ನಾಲ್ಕೈದು ವರ್ಷ ಆಡಬಹುದು’’ ಎಂದು ಮಾಜಿ ಇಂಗ್ಲೆಂಡ್ ನಾಯಕ ಮೈಕಲ್ ವಾನ್ ಹೇಳಿದ್ದಾರೆ.