×
Ad

ಹಣ ಬಿಡುಗಡೆ ಅಡ್ಡಿ ನಿವಾರಿಸಲು ಕೋರಿ ಸುಪ್ರೀಂಗೆ ಬಿಸಿಸಿಐ ಮೊರೆ

Update: 2016-11-08 12:33 IST

ಹೊಸದಿಲ್ಲಿ, ನ.8: ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ ಬುಧವಾರ ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಪ್ರಥಮ ಟೆಸ್ಟ್‌ಗೆ ಹಣ ಬಿಡುಗಡೆಗೆ ಸಂಬಂಧಿಸಿ ಉಂಟಾಗಿರುವ ಅಡೆ-ತಡೆ ನಿವಾರಿಸುವಂತೆ ಕೋರಿ ಬಿಸಿಸಿಐ ಮಂಗಳವಾರ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.

‘‘ಪ್ರಥಮ ಟೆಸ್ಟ್ ನಡೆಯಬೇಕಾದರೆ ಹಣ ಬಿಡುಗಡೆ ಮಾಡಬೇಕಾದ ಅಗತ್ಯವಿದೆ. ನಮ್ಮ ಹಣಕಾಸು ವ್ಯವಹಾರದಲ್ಲಿ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿರುವ ಲೋಧಾ ಸಮಿತಿ ತೊಂದರೆ ನೀಡಿದರೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ರದ್ದು ಪಡಿಸಬೇಕಾಗಬಹುದು’’ ಎಂದು ಬಿಸಿಸಿಐನ ಹಿರಿಯ ವಕೀಲ ಕಪಿಲ್ ಸಿಬಾಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

 ಲೋಧಾ ಸಮಿತಿಯ ಅನುಮಿತಿಯಿಲ್ಲದೆ ಯಾವುದೇ ಹೊಸ ಒಪ್ಪಂದಕ್ಕೆ ಸಹಿ ಹಾಕುವಂತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಮಧ್ಯಂತರ ತೀರ್ಪಿನಲ್ಲಿ ಬಿಸಿಸಿಐಗೆ ತಾಕೀತು ಮಾಡಿತ್ತು. ಲೋಧಾ ಸಮಿತಿ ಲೆಕ್ಕ ಪರೀಕ್ಷಕರನ್ನು ನೇಮಕ ಮಾಡಿದ್ದು, ಬಿಸಿಸಿಐಗೆ ಖರ್ಚು-ವೆಚ್ಚದ ಮೇಲೆ ಮಿತಿ ಹೇರಿದೆ.

 ಸುಪ್ರೀಂಕೋರ್ಟ್‌ನ ಈ ಆದೇಶ ಬಿಸಿಸಿಐಗೆ ಸರಣಿ ಆಯೋಜಿಸಲು ಅಡ್ಡಿಯಾಗದು. ಕ್ರಿಕೆಟ್ ಮಂಡಳಿಯು ತನ್ನ ಸಮೃದ್ಧ ಭಂಡಾರದಿಂದ ಪ್ರವಾಸಿ ತಂಡಕ್ಕೆ ವೇತನ ನೀಡಬಹುದಾಗಿದೆ ಎಂದು ಕೋರ್ಟ್ ತಿಳಿಸಿತ್ತು.

 ‘‘ಇದೀಗ ನಮ್ಮ ಕೈ ಕಟ್ಟಿಹಾಕಲಾಗಿದೆ. ಹೊಸ ಒಪ್ಪಂದಕ್ಕೆ ಸಹಿ ಹಾಕದಂತೆ ನಿರ್ಬಂಧ, ನಿಧಿ ಬಳಕೆಯ ಮೇಲೆ ಮಿತಿ ಹೇರಿಕೆ, ಸ್ವತಂತ್ರ ಲೆಕ್ಕ ಪರೀಕ್ಷಕರನ್ನು ನೇಮಕ ಮಾಡದಂತೆ ಅ.21 ರಂದು ಸುಪ್ರೀಂಕೋರ್ಟ್ ನೀಡಿರುವ ತನ್ನ ಮಧ್ಯಂತರ ತೀರ್ಪಿನಲ್ಲಿ ಆದೇಶಿಸಿದೆ. ನಾನು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ಲೋಧಾ ಸಮಿತಿ ಮಿತಿ ಹೇರಿರುವ ಕಾರಣ ಯಾವ ನಿರ್ದಿಷ್ಟ ಮಾರಾಟಗಾರರೊಂದಿಗೆ ಒಪ್ಪಂದಕ್ಕೆ ಸಹಿ ಹಾಕದಂತಹ ಪರಿಸ್ಥಿತಿಯಿದೆ’’ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News