ದೋಹಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನ ಸಾವು
ಕರಾಚಿ, ನ.8: ಹೊಸದಿಲ್ಲಿಯಿಂದ ದೋಹಾಕ್ಕೆ ತೆರಳುತ್ತಿದ್ದ ಜೆರ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ವೈದ್ಯಕೀಯ ತುರ್ತು ಅಗತ್ಯದ ಹಿನ್ನೆಲೆಯಲ್ಲಿ ವಿಮಾನದ ದಿಕ್ಕು ಬದಲಿಸಿ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಸಿದರೂ ಪ್ರಯಾಣಿಕ ಬದುಕುಳಿಯಲಿಲ್ಲ.
ಕರಾಚಿ ವಿಮಾನ ನಿಲ್ದಾಣಕ್ಕೆ ತಲುಪುವ ಮೊದಲೇ ವ್ಯಕ್ತಿಗೆ ವೈದ್ಯಕೀಯ ನೆರವನ್ನು ನೀಡಲಾಗಿತ್ತು. ಆದರೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ. ಪ್ರಯಾಣಿಕನೊಬ್ಬ ತೀವ್ರ ಅಸ್ವಸ್ಥಗೊಂಡ ಮಾಹಿತಿ ಲಭಿಸಿದ ತಕ್ಷಣ ಕ್ಯಾಪ್ಟನ್ ಹತ್ತಿರದ ವಿಮಾನ ನಿಲ್ದಾಣವಾದ ಕರಾಚಿಯಲ್ಲಿ ವಿಮಾನವನ್ನು ಇಳಿಸಿದ್ದರು ಎಂದು ಜೆಟ್ ಏರ್‌ವೇಸ್ ತಿಳಿಸಿದೆ.
ಸೋಮವಾರ ತಡರಾತ್ರಿ ಹೊಸದಿಲ್ಲಿಯಿಂದ ನಿರ್ಗಮಿಸಿದ್ದ 9 ಡಬ್ಲು 202 ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಸುಮಾರು 141 ಪ್ರಯಾಣಿಕರಿದ್ದರು. ಈ ದುರದೃಷ್ಟ ಬೆಳವಣಿಗೆಯಿಂದಾಗಿ ಸಂಪರ್ಕದ ವಿಮಾನ ತಪ್ಪಿಸಿಕೊಂಡ ಉಳಿದ ಪ್ರಯಾಣಿಕರಿಗೆ ಪ್ರಯಾಣ ಮುಂದುವರಿಸಲು ಬೇರೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು ಎಂದು ಜೆಟ್ ಏರ್‌ವೇಸ್ ತಿಳಿಸಿದೆ.