ಆಸ್ತಿಗಾಗಿ ತಂದೆಯನ್ನೇ ಕೊಂದ ಸಹೋದರಿಯರು!
ಆಗ್ರಾ, ನ.8: ಹೆಣ್ಣು ಮಕ್ಕಳಿಬ್ಬರು ಕೋಟಿ ವೌಲ್ಯದ ಆಸ್ತಿಗಾಗಿ ಜನ್ಮಕೊಟ್ಟ ತಂದೆಯನ್ನೇ ತಮ್ಮ ಗೆಳೆಯನ ಜೊತೆಗೂಡಿ ಇರಿದು ಸಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
1 ಕೋಟಿ ರೂ.ಗಾಗಿ ತಂದೆಯನ್ನು ಕೊಲೆಗೈದ ಸಹೋದರಿಯರ ಪೈಕಿ ಒಬ್ಬಾಕೆ ವಕೀಲೆ, ಮತ್ತೊಬ್ಬಳು ಶಿಕ್ಷಕಿ. ಈ ಇಬ್ಬರು ತಮ್ಮ ಬಾಯ್‌ಫ್ರೆಂಡ್‌ನ ಸಹಾಯ ಪಡೆದು ತಂದೆಯನ್ನು ಸಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿ ಐಪಿಸಿ ಸೆಕ್ಷನ್ 202(ಹತ್ಯೆ) ಅಡಿ ಪ್ರಕರಣ ದಾಖಲಿಸಿದ್ದಾರೆ.
ಅಕ್ಟೋಬರ್ 30 ರಂದು ಇಬ್ಬರು ಸಹೋದರಿಯರಾದ ಜ್ಯೋತಿ(24 ವರ್ಷ) ಹಾಗೂ ಚಾಂದಿನಿ(26) ಅವರು ಬಾಯ್‌ಫ್ರೆಂಡ್ ಸರ್ವೇಶ್ ಶರ್ಮ(ವೃತ್ತಿಯಲ್ಲಿ ಕಾರ್ಪೆಂಟರ್)ಜೊತೆಗೂಡಿ 65ರ ಪ್ರಾಯದ ಮಥುರಾ ಪ್ರಸಾದ್‌ರನ್ನು ಬೆಡ್‌ರೂಮ್‌ನಲ್ಲಿ ಇರಿದು ಸಾಯಿಸಿದ್ದಾರೆ.
ಮೂವರು ಆರೋಪಿಗಳು ಪ್ರಸಾದ್‌ರನ್ನು ಗುಂಡಿಟ್ಟು ಸಾಯಿಸಲು ನಿರ್ಧರಿಸಿದ್ದರು. ಜ್ಯೋತಿ ದೇಶಿ ನಿರ್ಮಿತ ಪಿಸ್ತೂಲ್‌ನ್ನು ಖರೀದಿಸಿ ಬಾಯ್‌ಫ್ರೆಂಡ್ ಶರ್ಮಗೆ ನೀಡಿದ್ದಳು. ಪ್ರಸಾದ್ ಬೆಡ್‌ರೂಮ್‌ಗೆ ಪ್ರವೇಶಿಸುತ್ತಲೇ ಶರ್ಮ ಎರಡು ಸುತ್ತು ಗುಂಡು ಹಾರಿಸಿದ್ದ. ಆದರೆ, ಅದು ಗುರಿ ತಪ್ಪಿತ್ತು. ಆಗ ಸಹೋದರಿಯರು ಚೂರಿಯಿಂದ ತಂದೆಯನ್ನು ಇರಿದು ಸಾಯಿಸಿದರು ಎಂದು ಪೊಲೀಸ್ ಅಧಿಕಾರಿ ಹರಿಪಾರ್ವತ್ ಸಿಂಗ್ ತಿಳಿಸಿದ್ದಾರೆ.
ಜನವರಿಯಲ್ಲಿ ತಂದೆಯ ಇಚ್ಛೆಯ ವಿರುದ್ಧವಾಗಿ ಮಗಳು ಜ್ಯೋತಿ ಶರ್ಮ ಎಂಬಾತನನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಳು. ಆಸ್ತಿ ಮಾರಾಟದಿಂದ ತಂದೆಯ ಕೈಗೆ 1 ಕೋಟಿ ರೂ. ಬಂದಿದೆ ಎಂಬ ವಿಷಯ ತಿಳಿದ ಸಹೋದರಿಯರು ತಮಗೆ ಪಾಲು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಒಂದೂ ಪೈಸೆ ನೀಡಲಾರೆ ಎಂದು ಹೇಳಿದ ಅಪ್ಪನ ಮುನಿಸಿಕೊಂಡ ಮಕ್ಕಳು ಅವರನ್ನೇ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.