ಕೇರಳ: ಮುಸ್ಲಿಂಲೀಗ್ ಮಾಜಿ ಶಾಸಕ ಸೂಫಿ ನಿಧನ
ಪಾನೂರ್, ನ. 8: ಮಾಜಿ ಪೆರಿಂಙಳಂ ಶಾಸಕ, ಮುಸ್ಲಿಂ ಲೀಗ್ನ ಮಾಜಿ ಕಣ್ಣೂರು ಜಿಲ್ಲಾಧ್ಯಕ್ಷ ಕೆ.ಎಂ.ಸೂಫಿ(86) ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಗ್ಗೆ ಐದು ಗಂಟೆಗೆ ನಿಧನರಾದರು ಎಂದು ವರದಿಯಾಗಿದೆ.
ಪಾರ್ಥಿವ ದೇಹವನ್ನು ಮಧ್ಯಾಹ್ನ ಎರಡುಗಂಟೆಗೆ ಪಾನೂರ್ ಜಜಾತ್ ಹೈಸ್ಕೂಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ನಂತರ ಸಂಜೆ ನಾಲ್ಕು ಗಂಟೆಗೆ ಪಾನೂರ್ ಟೌನ್ ಜಮಾತ್ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ.
1964ರ ಪಂಚಾಯತ್ ಚುನಾವಣೆಯಲ್ಲಿ ಪಾನೂರ್ ಪಂಚಾಯತ್ ಏಳನೆ ವಾರ್ಡ್‌ನಿಂದ ಪಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೂಫಿ ತನ್ನ ರಾಜಕೀಯ ಜೀವನ ಆರಂಭಿಸಿದ್ದರು. ನಂತರ ಪಂಚಾಯತ್ ಅಧ್ಯಕ್ಷರಾದರು.
1970ರಲ್ಲಿ ಕಾಂಗ್ರೆಸ್‌ನ ವಿ.ಅಶೋಕನ್ ಮಾಸ್ಟರ್‌ರನ್ನು ಸೋಲಿಸಿ ಪ್ರಪ್ರಥಮವಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದರು. 1988ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಿ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
1978ರಲ್ಲಿ ಕಾಂಗ್ರೆಸ್‌ಗೂ ನಂತರ ಲೀಗ್‌ಗೂ ಸೇರ್ಪಡೆಯಾದ ಸೂಫಿ 1980,82,84ರಲ್ಲಿ ನಡೆದಿದ್ದ ಚುನಾವಣೆಗಳಲ್ಲಿ ಎ.ಕೆ. ಶಶೀಂದ್ರನ್, ಎನ್.ಎ. ಮಮ್ಮು ಹಾಜಿ, ಇ.ಟಿ. ಮುಹಮ್ಮದ್ ಬಷೀರ್‌ರ ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದ್ದರು.
1991ರ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ರಾಜಕೀಯ ಗುರು ಪಿ.ಆರ್. ಕುರುಪ್‌ರನ್ನು ಸೋಲಿಸಿದ್ದು ಸೂಫಿಯವರ ರಾಜಕೀಯ ಜೀವನದಲ್ಲಿ ಮೈಲುಗಲ್ಲಾಗಿತ್ತು. 2015ರವರೆಗೂ ಕಣ್ಣೂರು ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾಗಿ ಸೂಫಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.