ಸನಾತನ ಸಂಸ್ಥೆಯಿಂದ 10 ಕೋಟಿ ರೂ. ಪರಿಹಾರ ಕೋರಿ 'ವಾರ್ತಾಭಾರತಿ'ಗೆ ನೋಟಿಸ್

Update: 2016-11-08 12:42 GMT

        ಮಂಗಳೂರು, ನ. 8 : ಹಲವು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಆರೋಪ ಹೊತ್ತಿರುವ ಗೋವಾದ ಸನಾತನ ಸಂಸ್ಥೆ 'ವಾರ್ತಾಭಾರತಿ'ಯ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ಕೋರಿ ನೋಟಿಸ್ ಕಳಿಸಿದೆ. ಮಹಾರಾಷ್ಟ್ರದ ಥಾಣೆಯ ವಕೀಲ ಆರ್.ಡಿ. ಕೇಸರ್ಕರ್ ಎಂಬವರು ಸಂಸ್ಥೆಯ ಪರವಾಗಿ 'ವಾರ್ತಾಭಾರತಿ'ಯ ಸಂಪಾದಕರಿಗೆ ಹಾಗೂ ಸಂಸ್ಥೆಗೆ ಈ ನೋಟಿಸ್ ಕಳುಹಿಸಿದ್ದಾರೆ. 15 ದಿನಗಳೊಳಗೆ ಈ ಪರಿಹಾರ ಮೊತ್ತವನ್ನು ನೀಡದಿದ್ದಲ್ಲಿ ಪತ್ರಿಕೆ ಹಾಗು ಸಂಪಾದಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಈ ನೋಟಿಸ್ ನಲ್ಲಿ ಹೇಳಲಾಗಿದೆ.

   ಅಕ್ಟೋಬರ್ 28 ರಂದು 'ವಾರ್ತಾಭಾರತಿ'ಯಲ್ಲಿ ಪ್ರಕಟವಾದ 'ಸನಾತನ ಸಂಸ್ಥೆ ನಿಷೇಧಕ್ಕೆ ಇರುವ ಅಡ್ಡಿ ಯಾವುದು ?' ಎಂಬ ಸಂಪಾದಕೀಯವನ್ನು ಉಲ್ಲೇಖಿಸಿ ಈ ನೋಟಿಸ್ ಕಳುಹಿಸಲಾಗಿದೆ. ಸನಾತನ ಸಂಸ್ಥೆ ದೇಶದಲ್ಲಿ ನಡೆಸುತ್ತಿರುವ ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ಮುಂದಿಟ್ಟು ವಿಜಯ ರೋಖಡೆ ಎಂಬವರು ಆ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಕೇಂದ್ರ ಸರಕಾರದ ಅಭಿಪ್ರಾಯವನ್ನು ಹೈ ಕೋರ್ಟ್ ಕೇಳಿದಾಗ, ಸನಾತನ ಸಂಸ್ಥೆಯ ನಿಷೇಧಕ್ಕೆ ಕಾರಣಗಳೇ ಸಿಕ್ಕಿಲ್ಲ ಎಂದು ಕೇಂದ್ರ ಸರಕಾರ ಮುಂಬೈ ಹೈಕೋರ್ಟಿಗೆ ಹೇಳಿತ್ತು. ಇದನ್ನು ಉಲ್ಲೇಖಿಸಿ 'ವಾರ್ತಾಭಾರತಿ'ಯಲ್ಲಿ ಸಂಪಾದಕೀಯ ಬರೆಯಲಾಗಿತ್ತು.

 ಸನಾತನ ಸಂಸ್ಥೆ ಒಂದು ಸಾರ್ವಜನಿಕ ದತ್ತಿ ಸಂಸ್ಥೆ ಎಂದು ಹೇಳಿರುವ ಈ ನೋಟಿಸ್ ನಲ್ಲಿ ಸಂಸ್ಥೆಯು ಜಾತಿ, ಮತ ಭೇದವಿಲ್ಲದೆ ಸಾವಿರಾರು ಜನರಿಗೆ ಸೆಮಿನಾರ್, ಕಾರ್ಯಾಗಾರಗಳ ಮೂಲಕ ಅಧ್ಯಾತ್ಮಿಕ ಜ್ಞಾನ , ಮಾರ್ಗದರ್ಶನ ನೀಡುವ ಸಂಸ್ಥೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯ ಸತ್ಯಕ್ಕೆ ದೂರವಾಗಿದ್ದು ಇದರಿಂದ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆಯುಂಟಾಗಿದೆ ಹಾಗೂ ತುಂಬಲಾರದ ನಷ್ಟವುಂಟಾಗಿದೆ. ಆದ್ದರಿಂದ ಹತ್ತು ಕೋಟಿ ರೂಪಾಯಿ ನಷ್ಟ ಪರಿಹಾರವನ್ನು ಗೋವಾದ ಪೊಂಡದ  ರಾಮನಾಥಿ ಎಂಬಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ತಲುಪಿಸಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

ಬಾಂಬ್ ಸ್ಫೋಟ, ಕೊಲೆಗಳ ಆರೋಪ ಹೊತ್ತ ಸಂಸ್ಥೆ

     ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಸಂಸ್ಥೆ ನಮ್ಮದು ಎಂದು ಹೇಳಿಕೊಳ್ಳುವ ಸನಾತನ ಸಂಸ್ಥೆ ಇತ್ತೀಚೆಗೆ ಸುದ್ದಿಯಲ್ಲಿರುವುದು ಅದರ ಮೇಲಿರುವ ಬಾಂಬ್ ಸ್ಫೋಟ ಹಾಗೂ ಕೊಲೆ ಆರೋಪಗಳಿಂದ. ಹಿರಿಯ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಅವರ ಕೊಲೆ ಪ್ರಕರಣದಲ್ಲಿ ಈ ಸಂಸ್ಥೆಯ ಡಾ. ವೀರೇಂದ್ರ ತಾವ್ಡೆ ಪ್ರಧಾನ ಸೂತ್ರಧಾರ ಎಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಹೇಳಿದೆ. ಈತನನ್ನು ಬಂಧಿಸಲಾಗಿದೆ. 2008 ರ ಜೂನ್ 4 ರಂದು ಥಾಣೆಯ ಸಭಾಂಗಣವೊಂದರಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಈ ಸಂಸ್ಥೆಯ ವಿಕ್ರಮ್ ಭಾವೆ ಹಾಗೂ ರಮೇಶ್ ಗಡ್ಕರಿ ಎಂಬಿಬ್ಬರ ಅಪರಾಧ ಸಾಬೀತಾಗಿ ಹತ್ತು ವರ್ಷಗಳ ಶಿಕ್ಷೆಯಾಗಿದೆ. 2009 ರ ಅಕ್ಟೋಬರ್ ನಲ್ಲಿ ಗೋವಾದ ಮಡಗಾಂವ್‌ನಲ್ಲಿ ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸುತ್ತಿದ್ದಾಗ ನಡೆದ ಸ್ಫೋಟದಲ್ಲಿ ಸನಾತನ ಸಂಸ್ಥೆಯ ಇಬ್ಬರು ಕಾರ್ಯಕರ್ತರಾದ ಮಲ್ಗೊಂಡ ಪಾಟೀಲ್ ಹಾಗೂ ಯೋಗೀಶ್ ನಾಯ್ಕೊ ಮೃತಪಟ್ಟಿದ್ದು , ಬಳಿಕ ಸಂಸ್ಥೆಯ ಇತರ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ದಾಖಲೆಗಳಲ್ಲಿದೆ. ಪನ್ವೇಲ್ , ಥಾಣೆ, ವಾಶಿಗಳಲ್ಲಿ ನಡೆದ ಬಾಂಬ್ ಸ್ಫೋಟಗಳ ಆರೋಪ ಈ ಸಂಸ್ಥೆಯ ಮೇಲಿದೆ. ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್ ಹಾಗೂ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಗಳಲ್ಲೂ ಈ ಸಂಸ್ಥೆಯ ಪಾತ್ರವಿದೆ ಎಂದು ಆರೋಪಿಸಲಾಗಿದ್ದು ಸಂಸ್ಥೆಗೆ ಸೇರಿದ ಕೆಲವರು ಬಂಧನಕ್ಕೂ ಒಳಗಾಗಿದ್ದಾರೆ.

ಈ ಉಗ್ರ ವಿಚಾರಗಳ ಸಂಸ್ಥೆ ಕೆಲವೊಮ್ಮೆ ಬಿಜೆಪಿ, ಆರೆಸ್ಸೆಸ್ ಹಾಗು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ' ಹಿಂದೂ ವಿರೋಧಿಗಳು' ಎಂದು ಟೀಕಿಸುತ್ತದೆ. 

'ವಾರ್ತಾಭಾರತಿ'ಯಲ್ಲಿ ಅಕ್ಟೋಬರ್ 28 ರಂದು ಪ್ರಕಟವಾದ ಸಂಪಾದಕೀಯ ಇಲ್ಲಿದೆ :

ಸನಾತನ ಸಂಸ್ಥೆ ನಿಷೇಧಕ್ಕೆ

ಇರುವ ಅಡ್ಡಿ ಯಾವುದು ?

ಈ ದೇಶದಲ್ಲಿ ಜನಸಾಮಾನ್ಯರ ಹಕ್ಕುಗಳಿಗಾಗಿ, ಪರಿಸರಕ್ಕಾಗಿ ಹೋರಾಡುವ

ಸರಕಾರೇತರ ಸಂಸ್ಥೆಗಳ ನಿಷೇಧಗಳಿಗಾಗಿ ಕಾರಣಗಳನ್ನು ಭೂತಗನ್ನಡಿಯಿಟ್ಟು

ಹುಡುಕುವ ಕೇಂದ್ರ ಸರಕಾರಕ್ಕೆ ಈಗಾಗಲೇ ಹಲವು ಕುಖ್ಯಾತಿಗಳಿಗಾಗಿ

ಗುರುತಿಸಲ್ಪಟ್ಟಿರುವ ಸನಾತನ ಸಂಸ್ಥೆಯ ನಿಷೇಧಕ್ಕೆ ಕಾರಣಗಳೇ ಸಿಕ್ಕಿಲ್ಲವಂತೆ.

ಹಾಗೆಂದು ಅದು ಮುಂಬೈ ಹೈಕೋರ್ಟಿಗೆ ಅರಿಕೆ ಮಾಡಿಕೊಂಡಿದೆ. ‘ಖ್ಯಾತ

ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ

ಸಂಚು ನಡೆಸಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಗೋವಾದ ಸನಾತನ ಸಂಸ್ಥೆಯ

ಮೇಲೆ ನಿಷೇಧ ಹೇರುವ ಬಗ್ಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಹೀಗಾಗಿ

ಸಂಸ್ಥೆಯ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅನ್ವಯ

ನಿಷೇಧ ಹೇರಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರಕಾರ ಬಾಂಬೆ ಹೈಕೋರ್ಟಿಗೆ

ತಿಳಿಸಿದೆ. ಸನಾತನ ಸಂಸ್ಥೆ ದೇಶದಲ್ಲಿ ನಡೆಸುತ್ತಿರುವ ವಿಚ್ಛಿದ್ರಕಾರಿ ಚಟುವಟಿಕೆಗಳನ್ನು

ಮುಂದಿಟ್ಟು ವಿಜಯ ರೋಖಡೆ ಎಂಬವರು ಆ ಸಂಸ್ಥೆಯನ್ನು ನಿಷೇಧಿಸಬೇಕು

ಎಂದು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಕೇಂದ್ರ ಸರಕಾರದ

ಅಭಿಪ್ರಾಯವನ್ನು ಹೈ ಕೋರ್ಟ್ ಕೇಳಿದಾಗ, ಸನಾತನ ಸಂಸ್ಥೆ ಅದಾವುದೋ

ಸಾಮಾಜಿಕ ಸಂಘಟನೆಯೆಂಬಂತೆ ತನ್ನ ಪ್ರೀತಿಯನ್ನು ಅದರ ಮೇಲೆ ಸುರಿಸಿದೆ.

ನಡು ಸಭೆಯಲ್ಲಿ ತನ್ನ ಮಕ್ಕಳು ದ್ರೌಪದಿಯ ಸೀರೆಯನ್ನು ಎಳೆಯುತ್ತಿದ್ದರೂ, ಏನೂ

ತಿಳಿಯದವನಂತೆ ವರ್ತಿಸಿದ ದೃತರಾಷ್ಟ್ರನಂತೆ ಕೇಂದ್ರ ಸರಕಾರ ತನ್ನ ಅಭಿಪ್ರಾಯವನ್ನು

ಮಂಡಿಸಿದೆ. ಧೃತರಾಷ್ಟ್ರನ ಕುರುಡು ಅಂತಿಮವಾಗಿ ಅವನ ನಾಡಿಗೂ, ಅವನ

ಮಕ್ಕಳಿಗೂ ಯಾವುದೇ ಒಳಿತನ್ನು ಮಾಡಲಿಲ್ಲ. ಸನಾತನ ಸಂಸ್ಥೆಯ ಕುರಿತಂತೆ

ಸರಕಾರ ನಟಿಸಿರುವ ಕುರುಡುತನದ ಫಲವೂ ಅಂತಿಮವಾಗಿ ಇದೇ ಆಗಿದೆ.

ಸನಾತನ ಸಂಸ್ಥೆ ದೇಶದಲ್ಲಿ ನಡೆಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು

ಮೊದಲು ಬಹಿರಂಗಪಡಿಸಿರುವುದು ಹೇಮಂತ್ ಕರ್ಕರೆ ಮತ್ತು ಅವರ

ಸಹಚರರು. ಆದರೆ ಅಂತಿಮವಾಗಿ ಅವರ ತನಿಖೆಯೇ ಅವರನ್ನು ನಿಗೂಢವಾಗಿ

ಬಲಿತೆಗೆದುಕೊಂಡಿತು. ಅವರ ತನಿಖೆಯನ್ನೇ ಆಧಾರವಾಗಿಟ್ಟುಕೊಂಡು ನಡೆದ

ತನಿಖೆಗಳು ಅಂತಿಮವಾಗಿ ಈ ದೇಶದಲ್ಲಿ ಮಾಲೆಗಾಂವ್, ಅಜ್ಮೀರ್, ಸಂಜೋತಾ

ಸ್ಫೋಟಗಳನ್ನು ನಡೆಸಿದ ಸ್ವದೇಶಿ ಉಗ್ರರ ಹೆಸರುಗಳನ್ನು ಬಹಿರಂಗಗೊಳಿಸಿತು.

ಅವರು ಯಾವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನೂ ತನಿಖಾ ಸಂಸ್ಥೆ

ಬಹಿರಂಗ ಪಡಿಸಿತು. ಅವರು ನಡೆಸಿದ ಅನಾಹುತಗಳು ಭಾರತ-ಪಾಕಿಸ್ತಾನ ದೇಶಗಳ

ಮೇಲೆ ಮಾತ್ರವಲ್ಲ, ಭಾರತ ಉಪಖಂಡದ ಮೇಲೆಯೇ ಆತಂಕದ ನೆರಳುಗಳನ್ನು

ಹರಡಿತ್ತು. ಆ ಸಂಸ್ಥೆಯ ಹೆಸರು ಬಹಿರಂಗವಾದ ಬೆನ್ನಿಗೇ ಅದರ ಮೇಲೆ ನಿಷೇಧ

ಹೇರುವುದು ಸರಕಾರದ ಕರ್ತವ್ಯವಾಗಿತ್ತು. ಆ ಮೂಲಕ, ಯಾವುದೇ ರೀತಿಯ

ಉಗ್ರವಾದವನ್ನೂ ನಾನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಸರಕಾರ ವಿಶ್ವಕ್ಕೆ

ನೀಡಬೇಕಾಗಿತ್ತು. ತನ್ನ ದೇಶದ ವಿರುದ್ಧವೇ ಸ್ಫೋಟ ನಡೆಸುವ ಸನಾತನ ಸಂಸ್ಥೆಯ

ಉದ್ದೇಶ ನಿಗೂಢವಾದುದೇನೂ ಅಲ್ಲ. ಅಜ್ಮೀರ್, ಮಕ್ಕಾ ಮಸೀದಿ ಮೊದಲಾದೆಡೆ

ಸ್ಫೋಟ ನಡೆಸಿ ಅದನ್ನು ಈ ದೇಶದ ಅಮಾಯಕ ಮುಸ್ಲಿಮರ ತಲೆಗೆ ಕಟ್ಟಿ

ಅವರು ಜೈಲು ಸೇರುವಂತೆ ಮಾಡಿದ್ದು ಸನಾತನ ಸಂಸ್ಥೆ. ಈ ದೇಶದ ವ್ಯವಸ್ಥೆಯ

ಕುರಿತಂತೆ ದೇಶಾದ್ಯಂತ ಮುಸ್ಲಿಮರಲ್ಲಿ ಅಸಹನೆಯನ್ನು ಬಿತ್ತುವಲ್ಲಿ ಸನಾತನಸಂಸ್ಥೆಯ

ಪಾತ್ರ ಬಹುದೊಡ್ಡದಿದೆ. ಪರಸ್ಪರ ಅಪನಂಬಿಕೆಗಳನ್ನು ಹುಟ್ಟಿಸಿ ಧರ್ಮಗಳ

ಆಧಾರದಲ್ಲಿ ದೇಶವನ್ನು ವಿಭಜಿಸುವುದು, ದೇಶವನ್ನು ವಿಚ್ಛಿದ್ರಗೊಳಿಸುವುದು

ಅವರ ದುರುದ್ದೇಶ. ಅವರು ಮಾಡಿರುವ ಸ್ಫೋಟಗಳ ಪರಿಣಾಮಗಳಿಗಿಂತಲೂ

ಬಹುದೊಡ್ಡ ದುರುದ್ದೇಶ, ಈ ದೇಶವನ್ನು ಅಪನಂಬಿಕೆಗಳ ಮೂಲಕ ಚೂರು

ಚೂರು ಮಾಡುವುದಾಗಿದೆ. ಯಾವುದೋ ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ

ಐಸಿಸ್‌ನಂತಹ ಸಂಘಟನೆಗಳು ಇಂತಹ ಕೃತ್ಯಗಳನ್ನು ಮಾಡಿದರೆ ಅವರನ್ನು ವಿದೇಶಿ

ಉಗ್ರರು ಎಂದು ಎದುರಿಸಬಹುದು. ಆದರೆ ಇವರೋ, ನಮ್ಮದೇ ದೇಶವಾಸಿಗಳ

ವೇಷಹಾಕಿಕೊಂಡು, ಭಾಷೆ, ಸಂಸ್ಕೃತಿಯನ್ನು ಬಳಸಿಕೊಂಡು ನಮ್ಮದೇ ದೇಶದ

ವಿರುದ್ಧ ಯುದ್ಧ ಹೂಡಿದ್ದಾರೆ. ಈ ದೇಶದ ಜನಪರ ಹೋರಾಟಗಾರರಲ್ಲಿ

ದೇಶದ್ರೋಹಗಳನ್ನು ಗುರುತಿಸಲು ಸಾಧ್ಯವಾಗುವ ಕೇಂದ್ರ ಸರಕಾರಕ್ಕೆ ಈ ಉಗ್ರ

ಸಂಘಟನೆಗಳಲ್ಲಿ ದೇಶದ್ರೋಹದ ಅಂಶಗಳನ್ನು ಕಂಡುಕೊಳ್ಳಲು ಸಾಧ್ಯವಾಗದೇ

ಇರುವುದು ದೇಶದ ವರ್ತಮಾನದ ಬಹುದೊಡ್ಡ ದುರಂತವಾಗಿದೆ.

ವಿಪರ್ಯಾಸದ ಸಂಗತಿಯೆಂದರೆ, ತನ್ನದೇ ಕಾಲ ಬುಡದಲ್ಲಿ, ತನ್ನದೇ ದೇಶದ

ವಿರುದ್ಧ ತನ್ನವರ ವೇಷದಲ್ಲೇ ಇರುವ ಉಗ್ರರನ್ನು ಉಗ್ರರೆಂದು ಒಪ್ಪಿಕೊಳ್ಳಲು

ಸಿದ್ಧವಿಲ್ಲದ, ಉಗ್ರ ಸಂಘಟನೆಗಳನ್ನು ನಿಷೇಧಿಸಲು ಸಿದ್ಧವಿಲ್ಲದ ಮೋದಿ ಸರಕಾರ;

ಪಾಕಿಸ್ತಾನಕ್ಕೆ, ಚೀನಾಕ್ಕೆ ಅಲ್ಲಿರುವ ಉಗ್ರವಾದಿಗಳನ್ನು ನಿಯಂತ್ರಿಸಲು ಆಗ್ರಹಿಸುತ್ತಿದೆ.

ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರುತಿಸಿ ಅವರನ್ನು ಮಟ್ಟ ಹಾಕಬೇಕು,

ಭಾರತಕ್ಕೆ ಒಪ್ಪಿಸಬೇಕು ಎಂದು ಹೇಳುತ್ತಿದೆ. ಪಾಕಿಸ್ತಾನದ ಉಗ್ರವಾದಿಗಳಿಗೆ ಚೀನಾ

ಬೆಂಬಲ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಆರೋಪಿಸುತ್ತಿದೆ. ಆರೋಪಗಳಲ್ಲಿ

ನಿಜವೇನೋ ಇದೆ. ಆದರೆ ಇದೇ ಸಂದರ್ಭದಲ್ಲಿ ತನ್ನ ದೇಶದೊಳಗಿರುವ

ಭಯೋತ್ಪಾದಕರನ್ನುಮಟ್ಟ ಹಾಕಲು ಮೋದಿ ಸರಕಾರ ಯಾಕೆ ಹಿಂದೇಟು

ಹಾಕುತ್ತಿದೆ? ತನ್ನ ದೇಶದೊಳಗಿರುವ ಭಯೋತ್ಪಾದಕರನ್ನು ಹಾಲೂಡಿ ಸಾಕುತ್ತಿರುವ

ನಮ್ಮ ಸರಕಾರಕ್ಕೆ ವಿದೇಶಿ ಉಗ್ರರ ಬಗ್ಗೆ ಮಾತನಾಡುವ ನೈತಿಕ ಹಕ್ಕಾದರೂ

ಹೇಗೆ ಬರುತ್ತದೆ? ಉಗ್ರವಾದಿಗಳ ಕುರಿತಂತೆ ಕೇಂದ್ರ ಸರಕಾರ ಹೊಂದಿರುವ

ಇಂತಹ ದ್ವಂದ್ವ ನಿಲುವುಗಳೇ, ಅದರ ದೌರ್ಬಲ್ಯಗಳಾಗಿವೆ. ಆದುದರಿಂದಲೇ,

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಿ ಉಗ್ರರ ವಿರುದ್ಧ ಅಭಿಪ್ರಾಯವನ್ನು

ರೂಪಿಸಲು ಭಾರತ ವಿಫಲವಾಗುತ್ತಿದೆ. ಮೊದಲು ಆತ್ಮವಿಮರ್ಶೆ ನಡೆದ ಬಳಿಕವಷ್ಟೇ

ಪರರ ವಿಮರ್ಶೆ ನಡೆಯಬೇಕು. ಭಾರತ ಉಗ್ರವಾದಿಗಳ ವಿರುದ್ಧ, ಭಯೋತ್ಪಾದಕರ

ವಿರುದ್ಧ ನಿಜಕ್ಕೂ ಸ್ಪಷ್ಟ ನಿಲುವನ್ನು ಹೊಂದಿದೆ ಎಂದಾದರೆ ಭಾರತದೊಳಗಿರುವ

ಉಗ್ರವಾದಿಗಳನ್ನು, ಅವರು ಯಾವ ಧರ್ಮದ ಹೆಸರಲ್ಲೇ ಸಂಘಟಿತವಾಗಿರಲಿ

ಬಗ್ಗು ಬಡಿಯಬೇಕು. ಇದು ವಿಶ್ವಕ್ಕೂ ಭಯೋತ್ಪಾದನೆಯ ಕುರಿತಂತೆ ತನ್ನ

ನಿಲುವನ್ನು ಸಾಬೀತು ಪಡಿಸುವುದಕ್ಕೆ ಸರಕಾರಕ್ಕಿರುವ ಅವಕಾಶವಾಗಿದೆ. ಈ

ನಿಟ್ಟಿನಲ್ಲಿ, ಸನಾತನಸಂಸ್ಥೆಯನ್ನು ನಿಷೇಧಿಸಲು ಮತ್ತು ಅದರ ಕಾರ್ಯಕರ್ತರನ್ನು

ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿಯಲ್ಲಿ ಬಂಧಿಸಲು ಸರಕಾರ ಹಿಂದೇಟು

ಹಾಕಲೇಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News