500 ವರ್ಷಗಳ ಹಿಂದೆಯೇ ಟಿಪ್ಪು ಶ್ರೇಷ್ಠ ಕನ್ನಡಿಗ: ಗಿರೀಶ್ ಕಾರ್ನಾಡ್

Update: 2016-11-08 18:59 GMT

ನಾನು ಆತನನ್ನು ದೇಶಪ್ರೇಮಿ ಎಂದು ಕರೆಯುತ್ತೇನೆ. ಆತ ರಾಷ್ಟ್ರಪ್ರೇಮಿ ಎಂಬ ಶಬ್ದವನ್ನು ನಾನು ಬಳಸುವುದಿಲ್ಲ. ನನ್ನ ಪ್ರಕಾರ ಆತ ಶ್ರೇಷ್ಠ ರಾಜ. ಅದ್ಭುತ ಚಿಂತಕ. ಶ್ರೇಷ್ಠ ತಂತ್ರಗಾರ. ಕರ್ನಾಟಕಕ್ಕಾಗಿ ಆತ ಸಾಕಷ್ಟು ಶ್ರಮ ವಹಿಸಿದ್ದಾನೆ. ನಾನು ಆತನ ಬಗ್ಗೆ ಹೇಳಿದ್ದನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ. ಬಹುಶಃ ವಿಜಯನಗರ ಪತನದ ಬಳಿಕ ಟಿಪ್ಪುಸುಲ್ತಾನ್ ಕಳೆದ 500 ವರ್ಷಗಳಲ್ಲಿ ಕಂಡುಬಂದ ಶ್ರೇಷ್ಠ ಕನ್ನಡಿಗ. ಆತ ಕರ್ನಾಟಕಕ್ಕೆ ಏನು ಮಾಡಿದ್ದಾನೆ ಎನ್ನುವುದು ಎಲ್ಲರಿಗೂ ಗೊತ್ತು. ಅದನ್ನು ನಾನು ಮತ್ತೆ ವಿವರಿಸಬೇಕಾದ್ದಿಲ್ಲ.

ಟಿಪ್ಪುಜಯಂತಿ ಆಚರಣೆ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ಅನಾಮಧೇಯ ಟ್ವಿಟರ್ ಖಾತೆ ಮೂಲಕ ಕೊಲೆ ಬೆದರಿಕೆ ಬಂದಿದೆ. 18ನೆ ಶತಮಾನದ ರಾಜ ಟಿಪ್ಪುವನ್ನು ಹೊಗಳಿದ ನಿಮಗೂ ಕಲಬುರ್ಗಿಗೆ ಬಂದ ಗತಿಯೇ ಬರುತ್ತದೆ ಎಂದು ಎಚ್ಚರಿಸಲಾಗಿದೆ.

ಟಿಪ್ಪುಜಯಂತಿ ಸುತ್ತ ಉದ್ಭವಿಸಿರುವ ವಿವಾದದ ಹುತ್ತದ ಬಗ್ಗೆ ಇಂಡಿಯಾ ಟುಡೇ ಟೆಲಿವಿಷನ್ ಸಲಹಾ ಸಂಪಾದಕ ರಾಜದೀಪ್ ಸರ್‌ದೇಸಾಯಿ ಕಾರ್ನಾಡ್ ಜತೆ ಸಂವಾದ ನಡೆಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪುಹೆಸರಿಡುವಂತೆ ಆಗ್ರಹಿಸಿದ ನಿಮಗೆ ಟಿಪ್ಪುಬಗೆಗೆ ನಿಮ್ಮ ಹೇಳಿಕೆಯ ಬಗ್ಗೆ ವಿಷಾದ ಇದೆಯೇ?

ಉತ್ತರ: ಈ ಸಂಬಂಧ ವಿವಾದ ಎದ್ದಿರುವುದು ಬೇಸರ ತಂದಿದೆ. ಏಕೆಂದರೆ ನನ್ನ ಉದ್ದೇಶ ಅದಾಗಿರಲಿಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗುವ ಮುನ್ನ, ಆತ ದೇವನಹಳ್ಳಿ ಯಲ್ಲಿ ಹುಟ್ಟಿದ ಕಾರಣದಿಂದ ಅದಕ್ಕೆ ಟಿಪ್ಪುವಿಮಾನ ನಿಲ್ದಾಣ ಎಂದು ಹೆಸರಿಸಬಹುದಿತ್ತು ಎಂದು ಸಲಹೆ ಮಾಡಿದ್ದೆ. ಅದರಲ್ಲಿ ವಿವಾದ ಏನಿದೆ? ಇದೀಗ ವಿಮಾನ ನಿಲ್ದಾಣದ ಹೆಸರು ಬದಲಿಸ ಬೇಕು ಎಂದು ನಾನು ಹೇಳಿಲ್ಲ. ಟಿವಿ ವಾಹಿನಿ ವರದಿಗಳು ಇದನ್ನು ತಪ್ಪಾಗಿ ಅರ್ಥೈಸಿವೆ. ನಿನ್ನೆ ನನ್ನನ್ನು ಸಂದರ್ಶಿಸುವಾಗ, ‘‘ನೀವು ಇದನ್ನು ಹೇಳಿದ್ದೀರಿ’’ ಎಂದು ಹೇಳಿದರು. ಆದರೆ ನಾನು ‘‘ನಾನು ಹಾಗೆ ಹೇಳಿಲ್ಲ’’ ಎಂದೆ. ಇದರಲ್ಲಿ ವಿಷಾದಿಸುವಂಥದ್ದು ಏನೂ ಇಲ್ಲ. ನನಗೆ ವಿಷಾದ ಇರುವುದು ಏನೂ ಅಲ್ಲದ ವಿಷಯದ ಬಗ್ಗೆ ವಿವಾದ ಹುಟ್ಟುಹಾಕಿರುವುದಕ್ಕೆ.

ಪ್ರ: ಹಾಗಾದರೆ ನೀವು ಕ್ಷಮೆ ಯಾಚಿಸಿದ್ದು ಏಕೆ? ಕ್ಷಮೆ ಕೋರುವಂಥದ್ದು ಏನೂ ಇಲ್ಲದಿದ್ದರೆ, ನಿರ್ದಿಷ್ಟ ಒತ್ತಡ ಅಥವಾ ಬೆದರಿಕೆ ಹಿನ್ನೆಲೆಯಲ್ಲಿ ಕ್ಷಮೆ ಯಾಚಿಸಿದ್ದೀರಾ?

ಉ: ನೀವು ಅಂಥ ಹೇಳಿಕೆ ನೀಡಿಲ್ಲ ಎಂದು ವಿವರಿಸಿದರೆ, ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಬಹುದು. ಉದ್ವಿಗ್ನ ಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದು ರಾಜ್ಯ ಆಡಳಿತದಲ್ಲಿರುವ ಕೆಲವರು ನನಗೆ ಸಲಹೆ ಮಾಡಿದರು. ಆದ್ದರಿಂದ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದೇನೆಯೇ ವಿನಃ ನನ್ನ ಹೇಳಿಕೆ ಬಗ್ಗೆ ಕ್ಷಮೆ ಕೋರಿಲ್ಲ.
1111111111111111111111111111111

ಪ್ರ: ಟಿಪ್ಪುಬಗ್ಗೆ ನೀಡಿರುವ ಹೇಳಿಕೆ ತೀರಾ ಸಾಂದರ್ಭಿಕ ಎಂದು ಹೇಳಿದ್ದೀರಿ. ಒಂದು ವರ್ಗ ಆತನನ್ನು ದೇಶದ್ರೋಹಿ ಎಂದು ಹಾಗೂ ಮತ್ತೊಂದು ವರ್ಗ ರಾಷ್ಟ್ರಪ್ರೇಮಿ ಎಂದು ವಿರುದ್ಧಾತ್ಮಕವಾಗಿ ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಅದು ಕೂಡಾ ತಪ್ಪುದಾರಿಗೆ ಎಳೆಯುವಂಥದ್ದಲ್ಲವೇ?

ಉ: ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಆತನನ್ನು ದೇಶಪ್ರೇಮಿ ಎಂದು ಕರೆಯುತ್ತೇನೆ. ಆತ ರಾಷ್ಟ್ರಪ್ರೇಮಿ ಎಂಬ ಶಬ್ದವನ್ನು ನಾನು ಬಳಸುವುದಿಲ್ಲ. ನನ್ನ ಪ್ರಕಾರ ಆತ ಶ್ರೇಷ್ಠ ರಾಜ. ಅದ್ಭುತ ಚಿಂತಕ. ಶ್ರೇಷ್ಠ ತಂತ್ರಗಾರ. ಕರ್ನಾಟಕಕ್ಕಾಗಿ ಆತ ಸಾಕಷ್ಟು ಶ್ರಮ ವಹಿಸಿದ್ದಾನೆ. ನಾನು ಆತನ ಬಗ್ಗೆ ಹೇಳಿದ್ದನ್ನು ಈಗಲೂ ಸಮರ್ಥಿಸಿ ಕೊಳ್ಳುತ್ತೇನೆ. ಬಹುಶಃ ವಿಜಯನಗರ ಪತನದ ಬಳಿಕ ಟಿಪ್ಪುಸುಲ್ತಾನ್ ಕಳೆದ 500 ವರ್ಷಗಳಲ್ಲಿ ಕಂಡುಬಂದ ಶ್ರೇಷ್ಠ ಕನ್ನಡಿಗ. ಆತ ಕರ್ನಾಟಕಕ್ಕೆ ಏನು ಮಾಡಿದ್ದಾನೆ ಎನ್ನುವುದು ಎಲ್ಲರಿಗೂ ಗೊತ್ತು. ಅದನ್ನು ನಾನು ಮತ್ತೆ ವಿವರಿಸಬೇಕಾದ್ದಿಲ್ಲ.

ಪ್ರ: ಟಿಪ್ಪುಇತಿಹಾಸಕ್ಕೆ ಇನ್ನೊಂದು ಮುಖವೂ ಇದೆ. ಹಿಂದೂ ಗಳಿಗೆ ಆತ ಹಿಂಸೆ ನೀಡಿದ್ದ ಎಂದು ಕೆಲವರು ವಾದಿಸುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಏಕೆಂದರೆ ಅದು ಕೂಡಾ ಚರ್ಚೆಯ ಪ್ರಮುಖ ವಿಷಯ.

ಉ: ಹೌದು. ಆತ ಮಾಪಿಳ್ಳೆಗಳನ್ನೂ ಹತ್ಯೆ ಮಾಡಿದ್ದಾನೆ. ಮಾಪಿಳ್ಳೆೆಗಳು ಹಿಂದೂಗಳಲ್ಲ. ಮುಸ್ಲಿಮರು. 18ನೆ ಶತಮಾನದ ಯುದ್ಧನಿಯಮಗಳು ಇಂದಿನದ್ದಕ್ಕಿಂತ ತೀರಾ ಭಿನ್ನ, ಕೇರಳ, ಕೊಡಗು, ಮೈಸೂರು ಹಾಗೂ ಮಹಾರಾಷ್ಟ್ರ ಎಲ್ಲವೂ ಪ್ರತ್ಯೇಕ ದೇಶಗಳಾಗಿದ್ದವು. ಜನರು ಇಂದು ಭಾರತೀಯರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದಲೇ ನಾನು ಆತನನ್ನು ಕನ್ನಡಿಗ ಎಂದು ಕರೆದಿದ್ದೇನೆ. ಇದೀಗ ಆತ ದೇಶಾದ್ಯಂತ ಗೌರವಕ್ಕೆ ಪಾತ್ರನಾಗಿದ್ದಾನೆ. ಹಲವು ನಡೆಗಳಲ್ಲಿ ಆತ ನಿಸ್ಸಂದೇಹವಾಗಿ ನಿರ್ದಯಿಯಾಗಿದ್ದ. ಆದರೆ ಆ ಕಾಲದ ಎಲ್ಲರೂ ಹಾಗೆಯೇ ಇದ್ದರು. ಮರಾಠರು ಕೂಡಾ ನಿರ್ದಯಿಗಳು. ಎಲ್ಲ ಸೇನೆಗಳು ಮಾಡಿದ್ದು ಅದನ್ನೇ. ನಾನು ಮರಾಠರು ಅಥವಾ ಟಿಪ್ಪುವನ್ನು ದೂಷಿಸುವುದಿಲ್ಲ. ಟಿಪ್ಪು17ನೆ ಶತಮಾನದಲ್ಲಿ ಮಾಡಿದ್ದಕ್ಕೆ 20ನೆ ಶತಮಾನದಲ್ಲಿ ಆತನನ್ನು ಟೀಕಿಸುವಂತಿಲ್ಲ. ಆದರೆ ದೇಶಕ್ಕಾಗಿ ಆತ ಏನು ಮಾಡಿದ್ದಾನೆ, ರಾಜ್ಯಕ್ಕಾಗಿ ಏನು ಮಾಡಿದ್ದಾನೆ ಎಂಬ ಬಗ್ಗೆ ಹೊಗಳಬಹುದು.

ಪ್ರ: ಆದರೆ ವಾಸ್ತವಾಂಶವೆಂದರೆ ಕರ್ನಾಟಕ ಸರಕಾರ ಆತನ ಜಯಂತಿ ಆಚರಿಸುವ ಮೂಲಕ ಆತನಿಗೆ ಗೌರವ ಸಲ್ಲಿಸಲು ಹೊರಟಿದೆ. ಇದು ಅಪಾಯಕಾರಿ ಅಲ್ಲವೇ? ಅದು ಕೂಡಾ ತಪ್ಪಾದ ದಿನವನ್ನು ಆಯ್ಕೆ ಮಾಡಿದೆ. ಆತನ ಹುಟ್ಟುಹಬ್ಬ ವಾಸ್ತವವಾಗಿ ನವೆಂಬರ್ 20ರಂದು. ಆದರೆ ಸರಕಾರ ಆತನ ಜಯಂತಿಯನ್ನು 10ರಂದು ಆಚರಿಸಲು ನಿರ್ಧರಿಸಿದೆ.

ಉ: ಅದು ರಾಜ್ಯ ಸರಕಾರದ ನಿರ್ಧಾರಕ್ಕೆ ಬಿಟ್ಟದ್ದು. ನನ್ನ ಕಳಕಳಿ ಅಲ್ಲ. ಅದನ್ನು ನಿರ್ಧರಿಸಬೇಕಾದವರು ಮುಖ್ಯಮಂತ್ರಿ. ನಾನು ಮನೆಯಲ್ಲೇ ಹುಟ್ಟುಹಬ್ಬ ಆಚರಿಸುವುದಿಲ್ಲ. ಆಚರಣೆಗಳಲ್ಲಿ ನನಗೆ ನಂಬಿಕೆ ಇಲ್ಲ.

ಪ್ರ: ಇದು ಹಿಂದೂ ಗುಂಪುಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವ ತೀರಾ ನಿಕೃಷ್ಟ ವೋಟ್‌ಬ್ಯಾಂಕ್ ರಾಜಕೀಯ ಎಂದು ನಿಮಗೆ ಅನಿಸುತ್ತದೆಯೇ?

ಉ: ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಜವಾಬ್ದಾರಿಯ ಅರಿವು ಅವರಿಗಿದೆ ಎಂಬ ನಂಬಿಕೆ ನನ್ನದು. ಅವರ ಹೊಣೆಗಾರಿಕೆಯ ಅರಿವು ಅವರಿಗಿದೆ. ಅವರದ್ದೇ ಆದ ತಂತ್ರಗಾರಿಕೆ ಅವರಿಗೆ ಬಿಟ್ಟ ವಿಚಾರ. ನಾವೆಲ್ಲರೂ ನಮ್ಮ ಆಟ ಆಡುತ್ತೇವೆ. ಹಾಗೆಯೇ ಮುಖ್ಯಮಂತ್ರಿಗಳಿಗೆ ಕೂಡಾ ಅವರದ್ದೇ ಆದ ಆಟ, ತಂತ್ರಗಳು ಇರುತ್ತವೆ. ಈ ವಿಚಾರದಲ್ಲಿ ನಾನು ಅವರಿಗೆ ಸಲಹೆ ನೀಡಲಾರೆ.

ಪ್ರ: ಕೃಷಿ ಪ್ರಧಾನ ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿ ರುವ ರಾಜ್ಯದಲ್ಲಿ ಕರ್ನಾಟಕ ಸರಕಾರಕ್ಕೆ ಟಿಪ್ಪು ಜಯಂತಿ ಆಚರಿಸುವುದಕ್ಕಿಂತ ಮಹತ್ವದ ಸಾಧನೆ ಮಾಡುವುದು ಬೇರೆ ಇದೆ ಎಂದು ನಿಮಗೆ ಅನಿಸುತ್ತದೆಯೇ?

ಉ: ಇರಬಹುದು. ಆ ಬಗ್ಗೆ ನನಗೆ ಆಸಕ್ತಿ ಇಲ್ಲ. ಅದು ನಾನು ತಲೆ ಕೆಡಿಸಿಕೊಳ್ಳಬೇಕಾದ ವಿಚಾರವೂ ಅಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡಬಯಸುವುದಿಲ್ಲ.

ಪ್ರ: ಸರಕಾರದ ಟಿಪ್ಪುಜಯಂತಿ ಆಚರಣೆ ಬಗ್ಗೆ ನೀವು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ವಾಸ್ತವಾಂಶವೆಂದರೆ ನಿಮ್ಮ ಅಭಿಪ್ರಾಯಕ್ಕಾಗಿ ನೀವು ಜೀವ ಬೆದರಿಕೆ ಎದುರಿಸುತ್ತಿದ್ದೀರಿ. ಅದು ನಿಮ್ಮ ಕಳವಳಕ್ಕೆ ಕಾರಣವೇ? ಪರ್ಯಾಯ ಅಭಿಪ್ರಾಯವನ್ನು ಯಾರು ವ್ಯಕ್ತಪಡಿಸಿದರೂ, ಹಿಂಸಾತ್ಮಕವಾಗಿ ಅವರ ಮೇಲೆ ದಾಳಿ ಎಸಗಲಾಗುತ್ತಿದೆ.

ಉ: ಖಂಡಿತವಾಗಿಯೂ. ಗಿರೀಶ್ ಕಾರ್ನಾಡ್ ಹಾಗಿರಲಿ. ಬಿಹಾರದಲ್ಲಿ ರಾಜಕೀಯ ಮುಖಂಡರು ಬಳಸಿರುವ ಭಾಷೆ ಇನ್ನೂ ಕೆಟ್ಟದು. ಅಷ್ಟು ಕೆಟ್ಟದಾಗಿ ನನ್ನನ್ನು ನಿಂದಿಸಿಲ್ಲ. ನಾನು ಟ್ವಿಟ್ಟರ್ ಅಥವಾ ಫೇಸ್‌ಬುಕ್ ಖಾತೆ ಹೊಂದಿಲ್ಲ. ಪ್ರತಿಯೊಬ್ಬ ಲೇಖಕನಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದ್ದೇ ಇದೆ. ನಾನು ಭೌತಿಕವಾಗಿ ಯಾರಿಗೂ ಯಾವ ಹಾನಿಯನ್ನೂ ಮಾಡಿಲ್ಲ. ಟಿಪ್ಪುವನ್ನು ಇಷ್ಟಪಡದ ವ್ಯಕ್ತಿಗಳಿಗೆ ಕೂಡಾ ಆತನ ಬಗ್ಗೆ ನಾಟಕ ಬರೆಯುವ ಹಕ್ಕು ಇದೆ. ಆತನ ಜಯಂತಿ ಆಚರಿಸುವ ಅಥವಾ ಆತನ ಮೇಲೆ ದಾಳಿ ಮಾಡುವ ಹಕ್ಕೂ ಇದೆ. ಅದು ಅವರವರ ಭಾವಕ್ಕೆ ಬಿಟ್ಟದ್ದು.

ಪ್ರ: ಹಿಂದೂಗಳಲ್ಲಿ ಒಂದು ವರ್ಗದ ಭಾವನೆಗಳನ್ನು ನೀವು ಉದ್ದೇಶಪೂರ್ವಕವಾಗಿ ನೋಯಿಸಿದ್ದೀರಿ ಎಂದು ಹೇಳುವವರೂ ಇದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?

ಉ: ಕರ್ನಾಟಕದಲ್ಲಿ ಟಿಪ್ಪುಬಗ್ಗೆ ಹಲವು ನಾಟಕಗಳಿವೆ. ಎಲ್ಲವೂ ಆತನನ್ನು ಹೊಗಳುವಂಥದ್ದು. ಅದರಲ್ಲಿ ನಾನೇ ಮೊದಲಿಗನೇನಲ್ಲ. ಆತ ಕರ್ನಾಟಕದ ಜನಮಾನಸದ ರಾಜ. ಬಹುಶಃ ನಾನು ಏಳು- ಎಂಟು ವರ್ಷದವನಿದ್ದಾಗ ಆತನ ಬಗೆಗಿನ ಮೊದಲ ನಾಟಕ ನೋಡಿದ್ದೆ. ಸಣ್ಣ ಪಟ್ಟಣಗಳಲ್ಲೂ ನಾಟಕಕಾರರು ಆತನ ಬಗ್ಗೆ ನಾಟಕ ಬರೆದಿದ್ದಾರೆ. ಆತ ಜನಪ್ರಿಯ ರಾಜ.

ಪ್ರ: ಅದನ್ನು ನಾನು ಒಪ್ಪುತ್ತೇನೆ. ಆದರೆ ಟಿಪ್ಪುಸುಲ್ತಾನ್ ಹಿಂದೂ ರಾಜ ಆಗಿದ್ದರೆ, ಅಷ್ಟೊಂದು ಆಕ್ರೋಶ ಇರುತ್ತಿರಲಿಲ್ಲ ಎಂದು ನೀವು ಹೇಳಿ ಮತ್ತೊಂದು ವಿವಾದ ಸೃಷ್ಟಿಸಿದ್ದೀರಿ. ಆ ನಿಲುವಿಗೇ ನೀವು ಅಂಟಿಕೊಂಡಿದ್ದೀರಾ?

ಉ: ಹೌದು. ಆತ ಹಿಂದೂ ರಾಜನಾಗಿದ್ದರೆ, ಜನ ಶಿವಾಜಿಯನ್ನು ಪೂಜಿಸುವಂತೆ ಆತನನ್ನು ಪೂಜಿಸುತ್ತಿದ್ದರು ಎಂದು ನಾನು ಹೇಳಿದ್ದೆ. ಅಷ್ಟರ ಮಟ್ಟಿಗೆ ಆತ ರಾಜ್ಯಕ್ಕೆ ಕೊಡುಗೆ ನೀಡಿದ್ದಾನೆ. ಟಿಪ್ಪುಕರ್ನಾಟಕಕ್ಕೆ ಏನು ಮಾಡಿದ್ದಾನೋ ಅದನ್ನು ಶಿವಾಜಿ ಮಹಾರಾಷ್ಟ್ರಕ್ಕೆ ಮಾಡಿದ್ದಾನೆ. ಆತ ಇಡೀ ದೇಶವನ್ನು ಒಗ್ಗೂಡಿಸಿದ. ಇಡೀ ಮಹಾರಾಷ್ಟ್ರವೇ ಪುಟಿಯಿತು. ಇದನ್ನೇ ಕರ್ನಾಟಕದಲ್ಲಿ ಟಿಪ್ಪುಮಾಡಿದ.

ಪ್ರ: ಮಹಾರಾಷ್ಟ್ರದಲ್ಲಿ ಶಿವಾಜಿ ಜಯಂತಿ ಇದೆ. ಹಾಗೆ ಕರ್ನಾಟಕದಲ್ಲಿ ಟಿಪ್ಪುಜಯಂತಿ ಇರಬೇಕೇ? ಅಥವಾ ನೀವು ಶಿವಾಜಿ ಜಯಂತಿಗೆ ವಿರೋಧವೇ?

ಉ: ಅವರು ಶಿವಾಜಿ ಜಯಂತಿ ಆಚರಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅದು ಅವರಿಗೆ ಬಿಟ್ಟದ್ದು.

ಪ್ರ: ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೂ ಟಿಪ್ಪುಜಯಂತಿ ಸಂಬಂಧ ಮುಸ್ಲಿಂ ಸಂಘಟನೆಯೊಂದರಿಂದ ಜೀವಬೆದರಿಕೆ ಇದೆ ಎನ್ನಲಾಗಿದೆ. ಅಂದರೆ ಇದು ಎರಡೂ ರೀತಿಯಲ್ಲಿ ವಿಭಜನೆಯಾಗಿದೆ ಎಂಬ ಅರ್ಥವೇ?

ಉ: ಹೌದು. ಅದು ಕೂಡಾ ತಪ್ಪು. ಅದನ್ನು ಯಾರು ಸಮರ್ಥಿಸುತ್ತಾರೆ? ನಾನು ನಿರ್ದಿಷ್ಟವಾಗಿ ಹೇಳಬಯಸುವುದೆಂದರೆ ಪ್ರತಾಪ್ ಸಿಂಹ ಚತುರ ಪತ್ರಕರ್ತ. ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಅವರಿಗೆ ಇದೆ. ಚರ್ಚೆ ಮುಂದುವರಿಯಲು ಅವಕಾಶ ಮಾಡಿಕೊಡಬೇಕು.

ಪ್ರ: 20 ವರ್ಷಗಳ ಹಿಂದೆ, ಟಿಪ್ಪುಬಗ್ಗೆ ನೀವು ಹೀಗೆ ಮಾತನಾಡಿದ್ದರೆ, ಪ್ರತಿಕ್ರಿಯೆ ಹೀಗೇ ಇರುತ್ತಿತ್ತು ಎನಿಸುತ್ತದೆಯೇ?

ಉ: ಇದೀಗ ಟ್ವಿಟರ್ ಹಾಗೂ ಫೇಸ್‌ಬುಕ್‌ನಿಂದಾಗಿ ಇಂಥ ಪ್ರತಿಕ್ರಿಯೆ ಬಂದಿದೆ. 20 ವರ್ಷಗಳ ಹಿಂದೆಯೂ ದ್ವೇಷಭಾವನೆ ಮಾತ್ರ ಜನರಲ್ಲಿ ಇದ್ದೇ ಇತ್ತು. ಆತನ ಬಗ್ಗೆ ಪೂರ್ವಾಗ್ರಹ ಅಂದೂ ಇತ್ತು. ಆದರೆ ಅದನ್ನು ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಪಡಿಸುತ್ತಿರಲಿಲ್ಲ. ಇದೀಗ ಟಿವಿ ಚಾನೆಲ್‌ಗಳು ಕೂಡಾ ಸಾಕಷ್ಟು ಸರಕು ಇಲ್ಲದ ಕಾರಣ ಅಸಂಬದ್ಧವಾದುದನ್ನು ಪ್ರಸಾರ ಮಾಡುತ್ತಿವೆ.

ಪ್ರ: ಸಮಾಜವನ್ನು ಧ್ರುವೀಕರಣಗೊಳಿಸುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎಂದು ನಿಮಗೆ ಅನಿಸುತ್ತಿದೆಯೇ? ಟಿಪ್ಪುವಿನಂಥ ವಿವಾದವನ್ನು ಹಿಂದೂ ಹಾಗೂ ಮುಸ್ಲಿಮರ ನಡುವಿನ ವಿಭಜನೆಯ ಅಸ್ತ್ರವಾಗಿ ಬಳಸಲಾಗುತ್ತಿದೆಯೇ?

ಉ: ಹೌದು. ಕೋಮುಗಲಭೆಗಳನ್ನು ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತ ಚುನಾವಣೆಗಳನ್ನು ಗೆಲ್ಲುವ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಆಡಳಿತದಲ್ಲಿರುವವರು ಗಲಭೆ ಹುಟ್ಟುಹಾಕುತ್ತಾರೆ. ಅದನ್ನು ನಾನು ಹೇಳಬೇಕಾಗಿಲ್ಲ. ಒಂದು ಕೋಮುಗಲಭೆಯನ್ನು ಸಂಘಟಿಸಿದರೆ, ಎರಡು ವಿಭಿನ್ನ ಧರ್ಮದ ಮಂದಿ ವಿಭಜನೆಯಾಗಿ ನೀವು ಚುನಾವಣೆಯನ್ನು ಗೆಲ್ಲಬಹುದು. ಇದು 20-30 ವರ್ಷಗಳಿಂದ ಅನುಸರಿಸುತ್ತಾ ಬರುತ್ತಿರುವ ತಂತ್ರ.

ಪ್ರ: ಈ ವಿವಾದ ನೀವು ಏನು ಹೇಳಬಹುದು? ಏನು ಹೇಳಬಾರದು ಎಂಬ ಬಗ್ಗೆ ಭಯಪಡುವಂತೆ ಮಾಡಿದೆಯೇ? ಗಿರೀಶ್ ಕಾರ್ನಾಡ್ ಅವರ ಮುಂದಿನ ಹಾದಿ?

ಉ: ಈಗ ಏನು ಮಾಡುತ್ತೀರಿ ಎನ್ನುವುದನ್ನು ಏಕೆ ಹೇಳುತ್ತಿಲ್ಲ ಎಂದು ನಿಮ್ಮ ಪ್ರತಿನಿಧಿ ಕೇಳುತ್ತಿದ್ದಾರೆ. ನಾನು ಈಗ ಏನು ಮಾಡುತ್ತೇನೆ ಎಂದು ಹೇಳುತ್ತೇನೆ. ಸ್ವಲ್ಪಜಿನ್, ನಿಂಬೆ ಹಾಗೂ ಟಾನಿಕ್ ನೀರು ಸೇರಿಸಿ ಹದವಾದ ಪಾನೀಯ ಸೇವಿಸಿ ಹಾಯಾಗಿದ್ದೇನೆ.

ಕರ್ನಾಟಕದಲ್ಲಿ ಟಿಪ್ಪುಬಗ್ಗೆ ಹಲವು ನಾಟಕಗಳಿವೆ. ಎಲ್ಲವೂ ಆತನನ್ನು ಹೊಗಳುವಂಥದ್ದು. ಅದರಲ್ಲಿ ನಾನೇ ಮೊದಲಿಗನೇನಲ್ಲ. ಆತ ಕರ್ನಾಟಕದ ಜನಮಾನಸದ ರಾಜ. ಬಹುಶಃ ನಾನು ಏಳು-ಎಂಟು ವರ್ಷದವನಿದ್ದಾಗ ಆತನ ಬಗೆಗಿನ ಮೊದಲ ನಾಟಕ ನೋಡಿದ್ದೆ. ಸಣ್ಣ ಪಟ್ಟಣಗಳಲ್ಲೂ ನಾಟಕಕಾರರು ಆತನ ಬಗ್ಗೆ ನಾಟಕ ಬರೆದಿದ್ದಾರೆ. ಆತ ಜನಪ್ರಿಯ ರಾಜ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News