ಅಮೆರಿಕದ ಸೆನೆಟ್‌ಗೆ ಭಾರತ ಸಂಜಾತೆ ಕಮಲಾ ಹ್ಯಾರಿಸ್ ಆಯ್ಕೆ

Update: 2016-11-09 06:38 GMT

  ವಾಷಿಂಗ್ಟನ್, ನ.9: ಭಾರತ ಸಂಜಾತೆ ಕ್ಯಾಲಿಫೋರ್ನಿಯದ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಸೋಮವಾರ ಯುನೈಟೆಡ್ ಸ್ಟೇಟ್ಸ್‌ನ ಸೆನೆಟರ್ ಆಗಿ ಆಯ್ಕೆಯಾಗುವುದರೊಂದಿಗೆ ಇತಿಹಾಸ ಬರೆದಿದ್ದಾರೆ.
ತವರು ರಾಜ್ಯ ಕ್ಯಾಲಿಫೋರ್ನಿಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಲೊರೆಟ್ಟಾ ಸ್ಯಾಂಚೆಝ್ ವಿರುದ್ಧ 34.8 ಶೇ. ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ 51ರ ಪ್ರಾಯದ ಹ್ಯಾರಿಸ್ 1,904,714 ಮತಗಳನ್ನು ಪಡೆದಿದ್ದರು. ಹ್ಯಾರಿಸ್ ಅಮೆರಿಕದ ಶಾಸಕಾಂಗದ ಮೇಲ್ಮನೆ ಸೆನೆಟ್‌ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹ್ಯಾರಿಸ್‌ಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಉಪಾಧ್ಯಕ್ಷ ಜೋ ಬಿಡೆನ್ ಬೆಂಬಲ ನೀಡಿದ್ದರು. ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಹ್ಯಾರಿಸ್ ಪ್ರತಿಸ್ಪರ್ಧಿಗಿಂತ ಮುನ್ನಡೆಯಲ್ಲಿದ್ದ ಕಾರಣ ಅವರ ಗೆಲುವು ಅಚ್ಚರಿ ಎನಿಸಿಕೊಂಡಿಲ್ಲ.
 ಕ್ಯಾಲಿಫೋರ್ನಿಯದ ಒಕ್ಲಾಂಡ್‌ನಲ್ಲಿ ಜಯಿಸಿರುವ ಹ್ಯಾರಿಸ್‌ರ ತಾಯಿ ಭಾರತೀಯ ಮೂಲದವರು. ಚೆನ್ನೈನಿಂದ ಅಮೆರಿಕಕ್ಕೆ ತೆರಳಿದ್ದ ಹ್ಯಾರಿಸ್‌ರ ತಾಯಿ ಅಮೆರಿಕದಲ್ಲಿ ನೆಲೆಸಿದ್ದ ಜಮೈಕಾ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದರು.
 ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಪ್ರಥಮ ಭಾರತ ಸಂಜಾತೆ ಎನಿಸಿಕೊಂಡಿರುವ ಹ್ಯಾರಿಸ್ ಕ್ಯಾಲಿಫೋರ್ನಿಯವನ್ನು ಪ್ರತಿನಿಧಿಸುತ್ತಿರುವ ಮೊದಲ ಕರಿಯ ಸೆನೆಟ್ ಆಗಿದ್ದಾರೆ ಎಂದು ಲಾಸ್ ಏಂಜಲಿಸ್ ಟೈಮ್ಸ್ ವರದಿ ಮಾಡಿದೆ.
 ಅಮೆರಿಕ ಶಾಸಕಾಂಗದ ಕೆಳ ಮನೆಯಲ್ಲಿ ಭಾರತ ಮೂಲದವರು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಭಾರತ ಮೂಲದ ಆ್ಯಮಿ ಬೆರ್ರಾ ಕೆಳಮನೆಯಲ್ಲಿ ಕ್ಯಾಲಿಫೋರ್ನಿಯವನ್ನು ಪ್ರತಿನಿಧಿಸುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News