2019ರ ವಿಶ್ವಕಪ್ ತನಕ ಧೋನಿ ಸ್ಥಾನ ಭದ್ರ?

Update: 2016-11-09 09:18 GMT

  ಹೊಸದಿಲ್ಲಿ, ನ.9: ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯಲಿರುವ ವಿಶ್ವಕಪ್ ತನಕ ಭಾರತದ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆಯ್ಕೆಗಾರರು ಧೋನಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಒಲವು ಹೊಂದಿದ್ದಾರೆ ಎಂದು ವರದಿಯಾಗಿದೆ.

 ಆಯ್ಕೆಗಾರರಿಗೆ ಧೋನಿಯನ್ನು ಏಕದಿನ ನಾಯಕತ್ವದಿಂದ ಬದಲಿಸಲು ಇಷ್ಟವಿಲ್ಲ. ಧೋನಿ 2019ರ ವಿಶ್ವಕಪ್ ತನಕ ತಂಡದಲ್ಲಿ ಮುಂದುವರಿದರೆ ಅವರ ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ

ಧೋನಿ 2019ರ ತನಕ ಆಡುವುದನ್ನು ಮುಂದುವರಿಸಿದರೆ ಆಯ್ಕೆಗಾರರ ಕೆಲಸ ಮತ್ತಷ್ಟು ಸರಳವಾಗಲಿದೆ. ಧೋನಿ ಫಿಟ್‌ನೆಸ್ ಮಟ್ಟ ತಂಡದಲ್ಲಿರುವ ಹೊಸಬರಿಗಿಂತ ಶ್ರೇಷ್ಠವಾಗಿದೆ. ಧೋನಿ ವಯಸ್ಸಾದಂತೆ ಮತ್ತಷ್ಟು ಮಾಗುತ್ತಿದ್ದಾರೆ. ಹೀಗಾಗಿ ಆಯ್ಕೆಗಾರರಿಗೆ ಭವಿಷ್ಯದಲ್ಲಿ ಧೋನಿಯನ್ನು ತಂಡದಿಂದ ಹೊರಗಿಡುವ ಬಗ್ಗೆ ಚರ್ಚಿಸುವ ಸಾಧ್ಯತೆಯಿಲ್ಲ. ಧೋನಿ ಏಕದಿನ ತಂಡದ ಅತ್ಯಂತ ಪ್ರಮುಖ ಸದಸ್ಯರಾಗಿದ್ದಾರೆ. ಧೋನಿಯವರಿಂದ ತೆರವಾಗುವ ಜಾಗವನ್ನು ತುಂಬುವ ಆಟಗಾರನೂ ತಂಡದಲ್ಲಿಲ್ಲ ಎಂದು ಆಯ್ಕೆ ಸಮಿತಿಯ ಮೂಲಗಳು ತಿಳಿಸಿವೆ.

 ಒಂದು ವೇಳೆ ಧೋನಿ ಇನ್ನೂ ಮೂರು ವರ್ಷ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ನಿರ್ಧರಿಸಿದರೆ ಅದು ತಂಡಕ್ಕೆ ಲಾಭವಾಗಲಿದೆ. ತನಗೆ ತಂಡದಲ್ಲಿ ಮುಂದುವರಿಯಲು ಸಾಧ್ಯವಿಲ್ಲವೆಂದು ಧೋನಿಗೆ ಯೋಚನೆ ಬಂದರೆ, ಖಂಡಿತವಾಗಿಯೂ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂದುವರಿಯಲಾರರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News