"ಭೋಪಾಲ್ ಜೈಲಿನ ಸೆಲ್ ಲಾಕ್ ಒಳಗಿನಿಂದ ತೆರೆಯಲು ಅಸಾಧ್ಯ"
ಇತ್ತೀಚೆಗೆ ಹತ್ಯೆಯಾದ ಎಂಟು ಸಿಮಿ ಕಾರ್ಯಕರ್ತರು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ ಭೋಪಾಲ್ ಜೈಲಿನ ಹಳೇ ಕೈದಿಯೊಬ್ಬರು ಪೊಲೀಸರ ಹೇಳಿಕೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಕೈದಿಗಳು ನಕಲಿ ಕೀಗಳಿಂದ ಜೈಲಿನ ಒಳಗಿನಿಂದ ಕೀ ತೆಗೆದು ತಪ್ಪಿಸಿಕೊಂಡಿದ್ದಾರೆ ಎನ್ನುವ ಪೊಲೀಸರ ಹೇಳಿಕೆ ನಿಜವಾಗಲು ಸಾಧ್ಯವಿಲ್ಲ ಎಂದು ಈ ಮಾಜಿ ಕೈದಿ ಹೇಳಿದ್ದಾರೆ.
40 ವರ್ಷದ ಮೊಹಮ್ಮದ್ ಖಲೀಲ್ ಅವರು ತಪ್ಪಿಸಿಕೊಂಡಿರುವ ಎಂಟು ಸಿಮಿ ಕಾರ್ಯಕರ್ತರಲ್ಲಿ ಒಬ್ಬರಾದ ಮುಹಮ್ಮದ್ ಅಕೀಲ್ ಖಿಲ್ಜಿಯ ಸೋದರ ಸಂಬಂಧಿ. ಖಲೀಲ್ ಅವರೂ ಅದೇ ಬರಾಕ್‌ಗಳಲ್ಲಿ 2013 ಅಕ್ಟೋಬರ್‌ನಿಂದ 2014 ಮಾರ್ಚ್‌ವರೆಗೆ ಐದು ತಿಂಗಳ ಕಾಲ ಬಂಧನದಲ್ಲಿದ್ದರು. "ನಾನು ಬಿ ಬ್ಲಾಕ್, ಎ ಸೆಕ್ಟರ್‌ನಲ್ಲಿದ್ದೆ. ಎಂಟು ಸಿಮಿ ಕಾರ್ಯಕರ್ತರು ತಪ್ಪಿಸಿಕೊಳ್ಳುವ ಮುನ್ನ ಇಲ್ಲೇ ಇದ್ದರು ಎಂದು ಹೇಳಲಾಗಿದೆ. ಆದರೆ ಈ ಜೈಲು ಕೋಣೆಗಳು ಸುಮಾರು ಎರಡು ಅಡಿ ದಪ್ಪದ ಗೋಡೆಗಳನ್ನು ಹೊಂದಿವೆ. ಲಾಕ್ ಹೋಲ್ಡರ್ ಸಾಕೆಟ್ ಒಳಗೆ ಗೋಡೆಗೆ ಒಂದು ಅಡಿ ಒಳಗಿದೆ. ಲಾಕ್ ಮತ್ತು ಹೋಲ್ಡರ್ 2.5 ಅಡಿ ದೂರದಲ್ಲಿರುವಂತೆ ಗೇಟುಗಳನ್ನು ಜೋಡಿಸಲಾಗಿದೆ. ಹೀಗಾಗಿ ಕೀ ಕೊಟ್ಟರೂ ಸಹ ಕೈದಿಯ ಕೈ ಲಾಕ್‌ವರೆಗೆ ತಲುಪದ ಕಾರಣ ಗೇಟ್ ತೆರೆಯಲು ಸಾಧ್ಯವಿಲ್ಲ. ಈ ಬಗ್ಗೆ ಜೈಲಿಗೇ ಹೋಗಿ ನೋಡಬಹುದು" ಎಂದು ಖಲೀಲ್ ಹೇಳಿದ್ದಾರೆ.
ಜೈಲುಗಳ ನಿರ್ದೇಶಕರಾದ ಸಂಜಯ್ ಚೌಧುರಿ ಖಲೀಲ್ ಹೇಳಿಕೆಗೆ ಪ್ರತಿಕ್ರಿಯಿಸಿಲ್ಲ. "ಈ ಬಗ್ಗೆ ನ್ಯಾಯಾಂಗ ತನಿಖೆಯಾಗದೆ ನಾನೇನೂ ಹೇಳಲಾರೆ. ನನ್ನ ಹೇಳಿಕೆಯಿಂದ ತನಿಖೆಯ ಪ್ರಕ್ರಿಯೆಗೆ ಗೊಂದಲವಾಗಲಿದೆ" ಎಂದು ಅವರು ಹೇಳಿದ್ದಾರೆ.
ಈಗಾಗಲೇ ಜೈಲ್ ಬ್ರೇಕ್ ಮತ್ತು ಎನ್‌ಕೌಂಟರ್ ವಿವಾದದ ಸುತ್ತ ಬಹಿರಂಗವಾಗಿರುವ ವೀಡಿಯೊ ಮತ್ತು ಆಡಿಯೋ ಕ್ಲಿಪ್‌ಗಳು ಸತ್ಯಾಸತ್ಯತೆಯ ಬಗ್ಗೆ ಸಂಶಯ ತಂದಿರುವಾಗಲೇ ಖಲೀಲ್ ಹೇಳಿಕೆಯಿಂದಾಗಿ ನಿಗೂಢ ಇನ್ನಷ್ಟು ಆಳವಾಗಿದೆ. ವಿಡಿಯೋಗಳಲ್ಲಿ ಪೊಲೀಸರು ಈಗಾಗಲೇ ನೆಲಕ್ಕೆ ಬಿದ್ದ ಆರೋಪಿಗಳನ್ನು ಗುಂಡಿಕ್ಕುತ್ತಿರುವುದು ಮತ್ತು ಕೆಲವು ಅಧಿಕಾರಿಗಳು "ಎಲ್ಲರನ್ನೂ ಶೂಟ್ ಮಾಡಿ" ಎಂದು ಹೇಳುವುದು ದೃಶ್ಯ ಚಿತ್ರೀಕರಣವಾಗಿದೆ. ಕೈದಿಗಳು ಟೂತ್ ಬ್ರಷ್‌ಗಳಿಂದ ಕೀಗಳನ್ನು ಮಾಡಿ ಜೈಲಿನ ಕೋಣೆಯ ಬಾಗಿಲು ತೆರೆದಿದ್ದಾರೆ. ನಂತರ ಸಿಬ್ಬಂದಿ ಹೊಡೆದು ಜೈಲಿನ ಗೋಡೆಗಳನ್ನು ಹತ್ತಿ ಪರಾರಿಯಾಗಿದ್ದಾರೆ. ಆದರೆ ಹಲವು ಸಿಸಿಟಿವಿ ಕ್ಯಾಮರಾಗಳು ಜೈಲ್ ಬ್ರೇಕ್ ದಿನ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಪೊಲೀಸರ ಪ್ರಕಾರ ನಗರದ ಹೊರವಲಯದಲ್ಲಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು ಗುಂಡಿನ ಕಾಳಗ ನಡೆದು ಹತ್ಯೆಯಾಗಿದ್ದಾರೆ. ಆದರೆ ಸಿಮಿ ಕಾರ್ಯಕರ್ತರ ವಕೀಲರು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ಪೊಲೀಸರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಈ ಟೀಕೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.