×
Ad

ಮೊದಲ ದಿನ ರೂಟ್ ಶತಕ ; ಅಲಿ ಔಟಾಗದೆ 99

Update: 2016-11-09 17:31 IST

ರಾಜ್‌ಕೋಟ್, ನ.9: ಇಲ್ಲಿ ಆರಂಭಗೊಂಡ ಭಾರತ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಅಗ್ರಸರದಿಯ ದಾಂಡಿಗ ಜೋ ರೂಟ್ ಶತಕ ದಾಖಲಿಸಿದ್ದಾರೆ. ಆಲ್‌ರೌಂಡರ್ ಮೊಯಿನ್ ಅಲಿಗೆ ಶತಕ ದಾಖಲಿಸಲು ಇನ್ನೊಂದು ರನ್ ಗಳಿಸಬೇಕಾಗಿದೆ.
ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಆರಂಭಗೊಂಡ ಮೊದಲ ಟೆಸ್ಟ್‌ನ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 93 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟದಲ್ಲಿ 311 ರನ್ ಗಳಿಸಿದೆ. 99 ರನ್ ಗಳಿಸಿರುವ ಆಲ್‌ರೌಂಡರ್ ಮೊಯಿನ್ ಮುನೀರ್ ಅಲಿ ಮತ್ತು 19 ರನ್ ಗಳಿಸಿರುವ ಬೆನ್ ಸ್ಟೋಕ್ಸ್ ಔಟಾಗದೆ ಕ್ರೀಸ್‌ನಲ್ಲಿದ್ದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ಗೆ ಆರಂಭದಲ್ಲಿ ಸವಾಲು ಎದುರಾಗಿತ್ತು. ಆರಂಭಿಕ ದಾಂಡಿಗರಾದ ಹಸೀಬ್ ಹಮೀದ್ ಮತ್ತು ನಾಯಕ ಅಲೆಸ್ಟೈರ್ ಕುಕ್ ಉತ್ತಮ ಆರಂಭ ಒದಗಿಸುವಲ್ಲಿ ಎಡವಿದರು.
 ಮೊದಲ ವಿಕೆಟ್‌ಗೆ 15 ಓವರ್‌ಗಳಲ್ಲಿ 47 ರನ್ ಗಳಿಸಿದರು. 16ನೆ ಓವರ್‌ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜ ಅವರು ಇಂಗ್ಲೆಂಡ್ ನಾಯಕ ಅಲೆಸ್ಟೈರ್ ಕುಕ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಕುಕ್ 21 ರನ್ ಗಳಿಸಿ ಔಟಾದರು. ಇವರು ನಿರ್ಗಮಿಸಿದ ಬಳಿಕ ಹಮೀದ್‌ಗೆ ರೂಟ್ ಜೊತೆಯಾದರು. ಚೊಚ್ಚಲ ಟೆಸ್ಟ್ ಆಡುತ್ತಿರುವ 19ರ ಹರೆಯದ ಯುವ ದಾಂಡಿಗ ಹಮೀದ್ ಮತ್ತು ರೂಟ್ ಎರಡನೆ ವಿಕೆಟ್‌ಗೆ 29 ರನ್ ಸೇರಿಸಿದರು. ಎಚ್ಚರಿಕೆಯಿಂದ ಆಡುತ್ತಿದ್ದ ಹಮೀದ್ ಅವರನ್ನು 26.3ನೆ ಓವರ್‌ನಲ್ಲಿ ರವಿಚಂದ್ರನ್ ಅಶ್ವಿನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಹಮೀದ್ ಅವರು 31 ರನ್ (82ಎ, 6ಬೌ) ಗಳಿಸಿ ನಿರಾಶೆಯಿಂದಲೇ ಪೆವಿಲಿಯನ್ ಸೇರಿದರು. ತಂಡದ ಸ್ಕೋರ್ 102ಕ್ಕೆ ತಲುಪುವಾಗ ಇಂಗ್ಲೆಂಡ್‌ನ ಇನ್ನೊಂದು ವಿಕೆಟ್ ಪತನ. ಬಿಎಂ ಡಕೆಟ್ ಔಟಾದರು. ಅವರು ಅಶ್ವಿನ್ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡಿದರು. ಡಕೆಟ್ 13ರನ್ ಗಳಿಸಿ ಔಟಾದರು.
179 ರನ್‌ಗಳ ಜೊತೆಯಾಟ: ಲಂಚ್ ವಿರಾಮದ ಹೊತ್ತಿಗೆ ಇಂಗ್ಲೆಂಡ್ 32.3 ಓವರ್‌ಗಳಲ್ಲಿ 102 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಬಳಿಕ ರೂಟ್‌ಗೆ ಮೋಯಿನ್ ಅಲಿ ಜೊತೆಯಾದರು. ಇವರು ಭಾರತದ ಬೌಲರ್‌ಗಳ ಬೆವರಿಳಿಸಿದರು.
ರೂಟ್ ಮತ್ತು ಅಲಿ 4ನೆ ವಿಕೆಟ್‌ಗೆ 179 ರನ್‌ಗಳ ಜೊತೆಯಾಟ ನೀಡಿ ದಾಖಲೆ ನಿರ್ಮಿಸಿದರು. ಇದು ಇಂಗ್ಲೆಂಡ್ ಪರ 4ನೆ ವಿಕೆಟ್‌ಗೆ ಗರಿಷ್ಠ ರನ್‌ಗಳ ಜೊತೆಯಾಟ ಆಗಿದೆ.
ರೂಟ್ ಈ ಮೊದಲು ಭಾರತದಲ್ಲಿ 20 ಇನಿಂಗ್ಸ್‌ಗಳಲ್ಲಿ ಒಟ್ಟು 300 ರನ್ ದಾಖಲಿಸಿದ್ದರು. 49ನೆ ಟೆಸ್ಟ್ ಆಡುತ್ತಿರುವ ರೂಟ್ 11ನೆ ಶತಕ ಗಳಿಸಿದರು. 2014ರಲ್ಲಿ ಟೆಸ್ಟ್ ತಂಡಕ್ಕೆ ಮರಳಿದ್ದ ರೂಟ್ ಔಟಾಗದೆ ಬಳಿಕ ಟೆಸ್ಟ್‌ಗಳಲ್ಲಿ ಔಟಾಗದೆ 200, ಔಟಾಗದೆ 154, 83, 98, 134, 85, 24, 0, 48, 40 ಮತ್ತು ಇದೀಗ ಭಾರತದ ವಿರುದ್ಧದ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 124 ರನ್ ಗಳಿಸಿದ್ದಾರೆ.
ರೂಟ್ 154 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ಶತಕ ಗಳಿಸಿದರು.
ಮೊಯಿನ್ ಅಲಿ 33ನೆ ಟೆಸ್ಟ್ ಆಡುತ್ತಿದ್ದಾರೆ. ಅವರು 192 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 99 ರನ್ ಗಳಿಸಿದ್ದಾರೆ. ಇನ್ನೊಂದು ರನ್ ಸೇರಿಸಿದರೆ ಅವರ 4ನೆ ಟೆಸ್ಟ್ ಶತಕ ಪೂರ್ಣಗೊಳ್ಳುತ್ತದೆ.
ಭಾರತದ ಪರ ಆರ್.ಅಶ್ವಿನ್ 108ಕ್ಕೆ 2, ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಉಡಾಯಿಸಿದರು.
,,,,,,,,,,,,,,
ಮೂರು ಕ್ಯಾಚ್ ಡ್ರಾಪ್

 ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ದಿನ ಭಾರತದ ಫೀಲ್ಡರ್‌ಗಳು ಮೊದಲ ಆರು ಓವರ್‌ಗಳಲ್ಲಿ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದರು.
ಮೊದಲ ಓವರ್‌ನಲ್ಲಿ ಮುಹಮ್ಮದ್ ಶಮಿ ಎಸೆತದಲ್ಲಿ ಕುಕ್ ನೀಡಿದ ಕ್ಯಾಚ್‌ನ್ನು ಅಜಿಂಕ್ಯ ರಹಾನೆ ಕೈ ಚೆಲ್ಲಿದರು. ಎರಡನೆ ಓವರ್‌ನಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ಕುಕ್ ಇನ್ನೊಂದು ಕ್ಯಾಚ್ ನೀಡಿದಾಗ ನಾಯಕ ವಿರಾಟ್ ಕೊಹ್ಲಿ ತೆಗೆದುಕೊಳ್ಳುವಲ್ಲಿ ಎಡವಿದರು.ಆರನೆ ಓವರ್‌ನಲ್ಲಿ ಹಮೀದ್ ಅವರು ಯಾದವ್ ಎಸೆತದಲ್ಲಿ ನೀಡಿದ ಕ್ಯಾಚ್‌ನ್ನು ಮುರಳಿ ವಿಜಯ್ ನೆಲಕ್ಕೆ ಕೈಚೆಲ್ಲಿದರು.
  ಬಿಸಿಸಿಐ ಮೊದಲ ಬಾರಿ ವಿವಾದಾತ್ಮಕ ಡಿಆರ್‌ಎಸ್ ವ್ಯವಸ್ಥೆಯನ್ನು ಈ ಸರಣಿಯಲ್ಲಿ ಅಳವಡಿಸಿಕೊಂಡಿದೆ. ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ 60.1ನೆ ಓವರ್‌ನಲ್ಲಿ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆ ಎದುರಿಸಿದರು. 12.1 ಓವರ್‌ಗಳಲ್ಲಿ 31 ರನ್ ನೀಡಿದ್ದ ಅವರು ಬಳಿಕ ಬೌಲಿಂಗ್ ನಡೆಸಲಿಲ್ಲ. ಉಮೇಶ್ ಯಾದವ್ ಓವರನ್ನು ಮುಂದುವರಿಸಿದರು.

ಸ್ಕೋರ್ ವಿವರ

ಇಂಗ್ಲೆಂಡ್ ಪ್ರಥಮ ಇನಿಂಗ್ಸ್

93 ಓವರ್‌ಗಳಲ್ಲಿ 311/4

ಅಲೆಸ್ಟೈರ್ ಕುಕ್ ಎಲ್‌ಬಿಡಬ್ಲು ಜಡೇಜ 21

ಹಮೀದ್ ಎಲ್‌ಬಿಡಬ್ಲು ಬಿ ಅಶ್ವಿನ್ 31

ಜೋ ರೂಟ್ ಸಿ ಮತ್ತು ಬಿ ಯಾದವ್ 124

ಡಕೆಟ್ ಸಿ ರಹಾನೆ ಬಿ ಅಶ್ವಿನ್ 13

ಮೊಯಿನ್ ಅಲಿ ಅಜೇಯ 99

ಸ್ಟೋಕ್ಸ್ ಅಜೇಯ 19

ಇತರ 04

ವಿಕೆಟ್ ಪತನ: 1-47, 2-76, 3-102, 4-281.

ಬೌಲಿಂಗ್ ವಿವರ:

ಮುಹಮ್ಮದ್ ಶಮಿ 12.1-2-31-0

 ಉಮೇಶ್ ಯಾದವ್ 18.5-1-68-1

ಆರ್.ಅಶ್ವಿನ್ 31-3-108-2

ರವೀಂದ್ರ ಜಡೇಜ 21-2-59-1

ಅಮಿತ್ ಮಿಶ್ರಾ 10-1-42-0

ಅಂಕಿ-ಅಂಶ

 1: ಹಸೀಬ್ ಹಮೀದ್(19 ವರ್ಷ, 297 ದಿನಗಳು) ತನ್ನ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್‌ನ ಪರ ಇನಿಂಗ್ಸ್ ಆರಂಭಿಸಿದ ಮೊದಲ ಕ್ರಿಕೆಟಿಗ. ಈ ಹಿಂದೆ 1937ರಲ್ಲಿ ಲಾರ್ಡ್ಸ್‌ನಲ್ಲಿ ನ್ಯೂಝಿಲೆಂಡ್‌ನ ವಿರುದ್ಧ ಲೆನ್ ಹಟ್ಟನ್ 21ರ ಪ್ರಾಯದಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್‌ನ ಇನಿಂಗ್ಸ್ ಆರಂಭಿಸಿದ್ದರು. ಹಮೀದ್ ಇಂಗ್ಲೆಂಡ್‌ನ ಟೆಸ್ಟ್ ತಂಡದಲ್ಲಿ ಆಡಿದ ಐದನೆ ಕಿರಿಯ ಆಟಗಾರ.

88: ರೂಟ್ ಈ ಹಿಂದೆ ಏಷ್ಯಾಖಂಡದಲ್ಲಿ ಬಾರಿಸಿದ ಶ್ರೇಷ್ಠ ಸ್ಕೋರ್ 88 ರನ್. ಕಳೆದ ವರ್ಷ ದುಬೈನಲ್ಲಿ ಈ ಸಾಧನೆ ಮಾಡಿದ್ದರು. ಈ ಮೊದಲು ಏಷ್ಯಾದಲ್ಲಿ ಐದು ಬಾರಿ ಅರ್ಧಶತಕ ಬಾರಿಸಿದ್ದಾರೆ. ಏಷ್ಯಾದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ರೂಟ್ ಬ್ಯಾಟಿಂಗ್ ಸರಾಸರಿ 67.14. ಇದರಲ್ಲಿ ನಾಲ್ಕು ಅರ್ಧಶತಕ ಹಾಗೂ ಒಂದು ಶತಕವಿದೆ.

68: ಮೊಯಿನ್ ಅಲಿ ಇಂಗ್ಲೆಂಡ್‌ನಿಂದ ಹೊರಗೆ ಈ ತನಕ ಬಾರಿಸಿದ ಗರಿಷ್ಠ ಸ್ಕೋರ್ 68. ಕಳೆದ ತಿಂಗಳು ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಅಲಿ 68 ರನ್ ಗಳಿಸಿದ್ದರು. ಈಗ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಅಜೇಯ 99 ರನ್ ಗಳಿಸಿರುವ ಅಲಿ ವಿದೇಶಿ ನೆಲದಲ್ಲಿ ಗರಿಷ್ಠ ಟೆಸ್ಟ್ ಸ್ಕೋರ್ ದಾಖಲಿಸಿದರು. ಇಂಗ್ಲೆಂಡ್‌ನ ಹೊರಗೆ ಅಲಿ ಬಾರಿಸಿದ ನಾಲ್ಕನೆ ಅರ್ಧಶತಕ ಇದಾಗಿದೆ.

13: ಮೊಯಿನ್ ಅಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದಿನದಾಟದಂತ್ಯಕ್ಕೆ ಅಜೇಯ 99 ರನ್ ಗಳಿಸಿದ ವಿಶ್ವದ 13ನೆ, ಇಂಗ್ಲೆಂಡ್‌ನ 5ನೆ ಆಟಗಾರ. ಗ್ಲೆನ್ ಟರ್ನರ್ ಹಾಗೂ ಮದಾಸ್ಸರ್ ನಝರ್ ವೃತ್ತಿಜೀವನದಲ್ಲಿ 2 ಬಾರಿ ದಿನದಾಟದಂತ್ಯಕ್ಕೆ 99 ರನ್ ಗಳಿಸಿದ್ದರು. ಈ ಮೊದಲು ಎಲ್ಲ ಆಟಗಾರರು ಟೆಸ್ಟ್‌ನ ಮರುದಿನ ಶತಕ ಪೂರೈಸಿದರು.

20: ಭಾರತದಲ್ಲಿ ಸತತ 20 ಬಾರಿ ಪ್ರವಾಸಿ ತಂಡ ಮೊದಲ ದಿನದಾಟದಲ್ಲಿ 300 ರನ್ ಗಳಿಸಲು ವಿಫಲವಾಗಿತ್ತು. ಇದೀಗ ಇಂಗ್ಲೆಂಡ್ ಮೊದಲನೆ ದಿನ 4 ವಿಕೆಟ್‌ಗೆ 311 ರನ್ ಗಳಿಸಿದ ಸಾಧನೆ ಮಾಡಿದೆ. 2012-13ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯ ತಂಡ ಮೊದಲ ದಿನದಂತ್ಯಕ್ಕೆ 300 ರನ್ ಗಳಿಸಿತ್ತು.

1: ಒಂದು ವರ್ಷದ ಬಳಿಕ ಪ್ರವಾಸಿ ತಂಡದ ಆಟಗಾರರಾದ ರೂಟ್ ಹಾಗೂ ಅಲಿ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ 48.2 ಓವರ್‌ಗಳಲ್ಲಿ ಗರಿಷ್ಠ(179 ರನ್) ಜೊತೆಯಾಟ ನಡೆಸಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕ ತಂಡದ ಆಟಗಾರರು ಈ ಸಾಧನೆ ಮಾಡಿದ್ದರು. 2013: ಪ್ರವಾಸಿ ತಂಡದ ಬ್ಯಾಟ್ಸ್‌ಮನ್ 2013ರಲ್ಲಿ ಭಾರತದ ವಿರುದ್ಧ ಕೊನೆಯ ಬಾರಿ ಶತಕ ಬಾರಿಸಿದ್ದ. ಆಸ್ಟ್ರೇಲಿಯದ ಮೈಕಲ್ ಕ್ಲಾರ್ಕ್ ಚೆನ್ನೈನಲ್ಲಿ ಈ ಸಾಧನೆ ಮಾಡಿದ್ದರು. 3 ವರ್ಷಗಳ ಬಳಿಕ ರೂಟ್ ಭಾರತದ ನೆಲದಲ್ಲಿ ಶತಕ ಬಾರಿಸಿದ ಮೊದಲ ವಿದೇಶಿ ಆಟಗಾರ. ಕಳೆದ ಸತತ 12 ಟೆಸ್ಟ್‌ಗಳಲ್ಲಿ ವಿದೇಶಿ ಆಟಗಾರರು ಭಾರತದ ನೆಲದಲ್ಲಿ ಶತಕ ಬಾರಿಸಿಲ್ಲ.

82.75: ರೂಟ್ 2014ರ ಬಳಿಕ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 82.75ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 15 ಹಾಗೂ ಅದಕ್ಕಿಂತ ಹೆಚ್ಚು ಇನಿಂಗ್ಸ್ ಆಡಿರುವ ಆಟಗಾರರ ಪೈಕಿ ಇದು ಶ್ರೇಷ್ಠ ಸಾಧನೆ. ರೂಟ್ 2014ರ ನಂತರ ಆಡಿರುವ 19 ಇನಿಂಗ್ಸ್‌ಗಳಲ್ಲಿ 4 ಶತಕ ಹಾಗೂ ಏಳು ಅರ್ಧಶತಕ ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News