13ನೆ ಆಳ್ವಾಸ್ ನುಡಿಸಿರಿಯಲ್ಲಿ 13 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

Update: 2016-11-09 12:13 GMT

ಮೂಡುಬಿದಿರೆ, ನ.9: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ಈ ಬಾರಿಯ ರಾಷ್ಟ್ರೀಯ ಸಮ್ಮೇಳನ 13ನೆ ವರ್ಷದ ಆಳ್ವಾಸ್ ನುಡಿಸಿರಿ-2016ರಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ 13 ಮಂದಿ ಸಾಧಕರಿಗೆ ’ಆಳ್ವಾಸ್ ನುಡಿಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ನುಡಿಸಿರಿಯ ರೂವಾರಿ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ನುಡಿಸಿರಿಯು ನ.18,19ಮತ್ತು 20ರಂದು ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಜರಗಲಿದ್ದು ಸಮಾರೋಪ ಸಮಾರಂದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗವುದು. ಪ್ರಶಸ್ತಿಯು 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರರಣಿಕೆಗಳನ್ನು ಒಳಗೊಂಡಿರುತ್ತದೆ. ಮೂರು ದಿನಗಳ ಕಾಲ ಜರಗುವ ಈ ಸಮ್ಮೇಳನದಲ್ಲಿ ಕನ್ನಡನಾಡಿನ ಖ್ಯಾತ ಕವಿಗಳು, ಸಂಶೋಧಕರು, ವಿಮರ್ಶಕರರು, ಕಲಾವಿದರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದರು.

ಪ್ರಶಸ್ತಿ ಪುರಸ್ಕೃತರ ವಿವರ

1. ಡಾ.ಗಿರಡ್ಡಿ ಗೋವಿಂದರಾಜ

ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಅಬ್ಬಗೇರಿಯವರಾದ ಡಾ. ಗಿರಡ್ಡಿ ಗೋವಿಂದರಾಜರು ಸಾಹಿತಿಯಾಗಿ, ವಿಮರ್ಶಕರಾಗಿ ಪ್ರಸಿದ್ಧರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಇಂಗ್ಲೆಂಡಿನ ಲ್ಯಾಂಕಸ್ಟರ್ ವಿಶ್ವವಿದ್ಯಾನಿಲಯದಿಂದ ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶೈಲಿಶಾಸ್ತ್ರದ ಮೇಲೆ ನಡೆಸಿದ ಸಂಶೋಧನೆಗೆ ಡಾಕ್ಟರೇಟ್ ಪದವಿ ಇವರಿಗೆ ದೊರೆಕಿದೆ. ಕರ್ನಾಟಕ ರಾಜ್ಯೋತ್ಸವ, ಸಾಹಿತ್ಯ ಅಕಾಡಮಿ ಗೌರವ, ನಾಟಕ ಅಕಾಡಮಿ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

2. ಸುಬ್ರಾಯ ಚೊಕ್ಕಾಡಿ

ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿಯವರು. ಸುಳ್ಯ, ಪೈಲೂರು, ಕುಕ್ಕುಜಡ್ಕ ಮೊದಲಾದ ಶಾಲೆಗಳಲ್ಲಿ 39 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದವರು. ಮೈಸೂರು ವಿ.ವಿ.ಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದವರು. ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ, ಹಾಡಿನ ಲೋಕ, ಬಂಗಾರದ ಹಕ್ಕಿ - ಇವುಗಳು ಇವರ ಕವನಸಂಕಲನಗಳು. ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ ಮೊದಲಾದ ಹತ್ತು ಹಲವು ಗೌರವಗಳು ಸಂದಿವೆ. ಇವರ ಹಿರಿಮೆಗೆ ’ಮುಕ್ತ ಹಂಸ’ ಗೌರವ ಗ್ರಂಥ ಸಮರ್ಪಣೆಯಾಗಿದೆ.

3. ಡಾ. ಚೆನ್ನಣ್ಣ ವಾಲೀಕಾರ

ಕವಿ, ಕಾದಂಬರಿಕಾರ, ನಾಟಕಕಾರ, ಸಂಶೋಧಕ, ಹೋರಾಟಗಾರ ಡಾ.ಚೆನ್ನಣ್ಣ ವಾಲೀಕಾರರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಿಂದ ಕನ್ನಡ ಎಂ.ಎ.ಪದವಿಯನ್ನು ಪಡೆದವರು. 11 ಕವನ ಸಂಕಲನಗಳು, ಕಪ್ಪುಕಥೆಗಳು, ಹೆಪ್ಪುಗಟ್ಟಿದ ಸಮುದ್ರವೇ ಮೊದಲಾದ 4 ಕಥಾ ಸಂಕಲನಗಳು, ಟೊಂಕದ ಕೆಳಗಿನ ಜನ, ಅಗ್ನಿರಾಜ ಮೊದಲಾದ 12 ನಾಟಕಗಳು, ಬೆಳ್ಯ, ಕೋಟೆಬಾಗಿಲು ಮೊದಲಾದ 5 ಕಾದಂಬರಿಗಳು, 11 ಡಪ್ಪಿನಾಟಗಳು ಇವರ ಲೇಖನಿಯಿಂದ ಮೂಡಿ ಬಂದಿವೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

4. ಡಾ.ಕೆ.ಆರ್.ಸಂಧ್ಯಾ ರೆಡ್ಡಿ

ಜಾನಪದ, ಕಾವ್ಯ, ಸಣ್ಣಕಥೆ, ಅಂಕಣಬರಹ, ಜೀವನ ಚರಿತ್ರೆ, ಭಾಷಾಂತರ ಮತ್ತು ಸಂಪಾದನೆ ಮೊದಲಾದ ಪ್ರಕಾರಗಳಲ್ಲಿ ಅರುವತ್ತಕ್ಕೂ ಹೆಚ್ಚು ಕೃತಿಗಳನ್ನು ಡಾ.ಕೆ.ಆರ್.ಸಂಧ್ಯಾ ರೆಡ್ಡಿಯವರು ರಚಿಸಿದ್ದಾರೆ. ಇವರ ಕಥೆ-ಕವಿತೆಗಳು ಹಿಂದಿ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಜಿ.ಶಂ.ಪರಮಶಿವಯ್ಯ ಜಾನಪದ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ, ದೇ.ಜ.ಗೌ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

5. ಜಿ.ಎನ್.ರಂಗನಾಥ ರಾವ್

ಪತ್ರಿಕಾ ಸಂಪಾದಕರಾಗಿ, ಬರಹಗಾರರಾಗಿ ಪ್ರಸಿದ್ಧರಾದ ಜಿ.ಎನ್.ರಂಗನಾಥ ರಾವ್ ಬೆಂಗಳೂರಿನ ಹಾರೋಹಳ್ಳಿಯವರು. ’ತಾಯಿ ನಾಡು’ ಕನ್ನಡ ದಿನಪತ್ರಿಕೆಯಲ್ಲಿ ಅಧೀನ ಸಂಪಾದಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ದುಡಿದು 1967ರಲ್ಲಿ ಪ್ರಜಾವಾಣಿ ದಿನಪತ್ರಿಕೆಯ ಸಹಸಂಪಾದಕರಾಗಿ ಸೇರಿಕೊಂಡರು. 33 ವರ್ಷಗಳಿಂದ ಪ್ರಜಾವಾಣಿ ಬಳಗದ ಪ್ರಮುಖ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದವರು.

6.ಅಕ್ಷರ ಕೆ.ವಿ.

ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಕೆ.ವಿ.ಅಕ್ಷರಾ ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗಶಿಕ್ಷಣ ಪಡೆದು, ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾನಿಲಯದಿಂದ ರಂಗಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದವರು. ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ತರಬೇತಿ ಕೇಂದ್ರದ ನಿರ್ದೇಶಕರಾಗಿ, ತರಬೇತುದಾರರಾಗಿ ಹಾಗೂ ನಾಟಕ ನಿರ್ದೇಶಕರಾಗಿ ಪ್ರಖ್ಯಾತರು. ’ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯ ಮೂಲಕ ಕನ್ನಡ ಭಾಷೆಯ ವೌಲಿಕ ಕೃತಿಗಳ ಪ್ರಕಟಣೆಯೂ ಇತರ ಆಸಕ್ತಿಗಳಲ್ಲಿ ಪ್ರಮುಖವಾದುದು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಶಿಪ್, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

7. ಹರಿಣಿ

ಕನ್ನಡ ಬೆಳ್ಳಿತೆರೆಯ ಕಲಾಲೋಕದಲ್ಲಿ ತಮ್ಮ ಭಾವಪೂರ್ಣ ಅಭಿನಯದಿಂದ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದವರು. ಕನ್ನಡ ಚಲನಚಿತ್ರ ‘ಜಗನ್ಮೋಹಿನಿ’ಯಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಪ್ರಥಮ ನಟಿ ಎಂಬುದಾಗಿ ಗುರುತಿಸಿಕೊಂಡವರು. ಮೂಲತ: ಉಡುಪಿಯ ಪಣಿಯಾಡಿಯವರಾದ ಇವರು 30ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಂಗಳಗೌರಿ, ಕನ್ಯಾದಾನ, ಧರ್ಮವಿಜಯ, ರತ್ನಮಂಜರಿ, ನಂದಾದೀಪ, ಸತಿ ಸುಕನ್ಯಾ ಮುಂತಾದ ಸಿನಿಮಾಗಳಲ್ಲಿ ಇವರು ಮನಮೋಹಕವಾಗಿ ನಟಿಸಿ ಸಿನಿಮಾಸಕ್ತರ ಮನಸ್ಸಿನಲ್ಲಿ ಮನೆಮಾಡಿದವರು ಇವರು. ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡ ಹರಿಣಿಯವರು ನಿರ್ಮಿಸಿದ ’ನಾಂದಿ’ ಚಿತ್ರವು ರಾಷ್ಟ್ರಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. ‘ನಮ್ಮ ಮಕ್ಕಳು’ ಚಿತ್ರಕ್ಕೆ ಫಿಲ್ಮ್‌ಪೇರ್ ಪ್ರಶಸ್ತಿಯೂ ಲಭಿಸಿದೆ.

8. ಶ್ರೀನಿವಾಸ ಕಪ್ಪಣ್ಣ

ಎಳವೆಯಲ್ಲೇ ರಂಗಕಲಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಜಾನಪದ ಹಾಗೂ ಶಾಸ್ತ್ರೀಯ ಪ್ರಕಾರಗಳೆರಡರಲ್ಲೂ ಸಮಾನ ಸಾಧನೆ ಮಾಡಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನೇರಿದವರು. ಬಿ.ವಿ.ಕಾರಂತ, ಚಂದ್ರಶೇಖರ ಕಂಬಾರ ಮೊದಲಾದವರೊಂದಿಗೆ ಸಹನಿರ್ದೇಶಕರಾಗಿ ಗುರುತಿಸಿಕೊಂಡವರು.

9. ಸಂಪಾಜೆ ಶೀನಪ್ಪರೈ

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸಂಪಾಜೆ ಶೀನಪ್ಪರೈಯವರು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ತಂದೆಯ ಸಹಕಾರದೊಂದಿಗೆ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿ ಬಣ್ಣದ ಪ್ರಪಂಚಕ್ಕೆ ಹೊಸ ಮೆರುಗನ್ನು ಕೊಟ್ಟವರು. ಭರತನಾಟ್ಯ ಹಾಗೂ ಯಕ್ಷಗಾನ ನಾಟ್ಯದ ಪ್ರಾವೀಣ್ಯತೆಯೊಂದಿಗೆ ಸೋಮನಾಥೇಶ್ವರ, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಎಡನೀರು ಹಾಗೂ ಹೊಸನಗರ ಮೇಳಗಳಲ್ಲಿ ಒಟ್ಟು 59 ವರ್ಷಗಳ ಕಲಾಸೇವೆ ಗೈದ ಧೀಮಂತರು.

10.ಜಬ್ಬಾರ್ ಸಮೊ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಜಬ್ಬಾರ್ ಸಮೊ ಅವರು ಎಳವೆಯಲ್ಲಿಯೇ ರಾಮಾಯಣ, ಮಹಾಭಾರತ ಹಾಗೂ ಪುರಾಣದ ಕಥೆಗಳ ಕುರಿತು ಕುತೂಹಲವನ್ನು, ಆಸಕ್ತಿಯನ್ನು ಬೆಳೆಸಿಕೊಂಡವರು. ಕಲ್ಲುಗುಂಡಿ, ಸಂಪಾಜೆ ಪರಿಸರದ ಯಕ್ಷಗಾನದ ವಾತಾವರಣ ಜಬ್ಬಾರ್ ಅವರನ್ನು ಯಕ್ಷಗಾನದತ್ತ ಮುಖಮಾಡುವಂತೆ ಮಾಡಿತು. ಬಣ್ಣದ ಮಾಲಿಂಗ, ಶೀನಪ್ಪ ರೈ ಮೊದಲಾದವರ ವೇಷ ಮತ್ತು ಮಾತುಗಾರಿಕೆಗಳಿಂದ ಪ್ರೇರೇಪಿತರಾಗಿ ಯಕ್ಷಗಾನ ಮತ್ತು ತಾಳಮದ್ದಲೆಯ ಮೇಲೆ ಆಸಕ್ತಿ ಅಧ್ಯಯನದಲ್ಲಿ ತೊಡಗಿಸಿಕೊಂಡವರು.

11. ಎಚ್.ಆರ್.ಲೀಲಾವತಿ

ಕರ್ನಾಟಕ ಶಾಸ್ರೀಯ ಸಂಗೀತದಲ್ಲಿ ಅಪಾರ ಸಾಧನೆ ಮಾಡಿದ ಶ್ರೀಮತಿ ಎಚ್.ಆರ್.ಲೀಲಾವತಿಯವರು ಮೈಸೂರು ಆಕಾಶವಾಣಿಯ ’ಎ’ ದರ್ಜೆಯ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸಿದವರು. ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಸ್ಕೃತ, ಗುಜರಾತಿ, ಮಯಾಳಂ, ಹಿಂದಿ, ಬೆಂಗಾಲಿ, ಅಸ್ಸಾಮಿ, ತೆಲುಗು ಭಾಷೆಯ ಹಾಡುಗಳನ್ನು ಕರಗತ ಮಾಡಿಕೊಂಡು ತಮ್ಮ ಸ್ವರ ಮಾಧುರ್ಯದಿಂದ ಜನಮಾನಸದಲ್ಲಿ ಮನೆಮಾಡಿದವರು ಇವರು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷತೆ, ದಕ್ಷಿಣ ಭಾರತ ಸಂಗೀತ ಅಕಾಡಮಿ, ಕೇಂದ್ರ ಸಂಗೀತ ಅಕಾಡಮಿ ಮೊದಲಾದ ಹಲವು ಸಂಸ್ಥೆಗಳ ಸದಸ್ಯತ್ವ ಪಡೆದವರು. ಮಧುಚಂದ್ರ ಎಂಬ ನಾಟಕ, ‘ನಿಸರ್ಗನಂದನ’ ಎಂಬ ರೂಪಕಗಳೂ ಇವರ ಲೇಖನಿಯಿಂದ ಮೂಡಿಬಂದಿವೆ.

12. ಡಾ. ದರ್ಬೆ ಚಂದ್ರಶೇಕರ ಚೌಟ (ಡಾ.ಡಿ.ಸಿ.ಚೌಟ)

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಮೀಯಪದವಿನವರಾದ ಡಿ.ಸಿ.ಚೌಟರು ಸಸ್ಯಶಾಸ್ತ್ರದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಮುಂಬೈ ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ತಳಿವಿಜ್ಞಾನದ ಕುರಿತು ಪಿಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ. 1978ರಿಂದ ತೋಟಗಾರಿಕೆ ಬೆಳೆಗಳಲ್ಲಿ ತೊಡಗಿಸಿಕೊಂಡ ಇವರು ನವೀನ ಪ್ರಯೋಗಗಳನ್ನು ಅಳವಡಿಸಿಕೊಂಡು ಯಶಸ್ಸು ಕಂಡವರು. ಕರ್ನಾಟಕದಲ್ಲಿ ಮೊತ್ತ ಮೊದಲು ಸಿಹಿನೀರಿನ ಮೀನು ಸಾಕಣೆಯನ್ನು ಪರಿಚಯಿಸಿದವರು. ಕಾಸರಗೋಡಿನ ಮೀಯಪದವಿನ ವಿಶಾಲ ಕೃಷಿಭೂಮಿಯಲ್ಲಿ ತೆಂಗು, ವೆನಿಲ್ಲಾ, ಹಲಸು, ಬಾಳೆ, ಕೊಕ್ಕೊ ಹಾಗೂ ವಿವಿಧ ಬಗೆಯ ಹಣ್ಣು-ತರಕಾರಿಗಳನ್ನು ವೈಜ್ಞಾನಿಕವಾಗಿ ಬೆಳೆಸಿ ಯಶಸ್ಸುಕಂಡವರು.

13. ಡಾ.ಜಿ.ಜ್ಞಾನಾನಂದ

ಪಾರಂಪರಿಕ ಶಿಲ್ಪಿಮನೆತನದವರಾದ ಜಿ.ಜ್ಞಾನಾನಂದರು ಸಂಖ್ಯಾಶಾಸ್ತ್ರದಲ್ಲಿ ಬಿ.ಎಸ್ಸಿ ಪದವೀಧರರಾಗಿ, ಎಂ.ಎ.ಡಿ.ಲಿಟ್, ಶೈಕ್ಷಣಿಕ ಸಾಧನೆಗಳನ್ನು ಗಳಿಸಿದವರು.

ಸಾಂಪ್ರಾದಾಯಿಕ ಶಿಲ್ಪಕ್ಕೆ ಕರ್ನಾಟಕದಲ್ಲಿ ಸೂಕ್ತ ಪಠ್ಯ ಗ್ರಂಥಗಳಾಗಲಿ, ಮೂಲ ಶಿಲ್ಪ ಶಾಸ್ತ್ರಗಳಾಗಲೀ ಇಲ್ಲದಿರುವಾಗ ಆ ಕೊರತೆಯನ್ನು ಶ್ರೀ ಕಾಶ್ಯಪ ಶಿಲ್ಪ ಶಾಸ್ತಂ್ರ, ಶ್ರೀ ಬ್ರಾಹ್ಮೀಯ ಚಿತ್ರಕರ್ಮ ಶಾಸ್ತ್ರಂ, ಪಾರಂಪರಿಕ ಶಿಲ್ಪ, ನೆಲೆ-ಹಿನ್ನಲೆ  ಮೊದಲಾದ ಅನೇಕ ಶಾಸ್ತ್ರ ಮತ್ತು ಪಠ್ಯ ಕೃತಿಗಳ ಮೂಲಕ ನೀಗಿದವರು. ತಾಮ್ರದ ತಗಡುಗಳಲ್ಲಿ ಬಹುಪಾಲು ಕವಚಗಳು, ಬಾಗಿಲುವಾಡಗಳು, ಮುಖವಾಡಗಳ ತಯಾರಿಕೆಗೆ ಸೀಮಿತಗೊಂಡಿರುವ ಪ್ರತಿಮಾಶಿಲ್ಪವನ್ನು ಕಥನಮಾಲಿಕೆಯ ಪಟಗಳ ತಯಾರಿಕೆಯ ಮೂಲಕ ಉಬ್ಬು ಕೆತ್ತನೆಯ ಶಿಲ್ಪಕ್ಕೆ ಹೊಸ ಆಯಾಮವನ್ನು ನೀಡಿದವರು.

ಸಮ್ಮೇಳನದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿಡಿವೆ. ಆಳ್ವಾಸ್ ಕೃಷಿಸಿರಿ, ಚಿತ್ರಸಿರಿ, ಛಾಯಾಚಿತ್ರಸಿರಿ, ವಿದ್ಯಾರ್ಥಿಸಿರಿ, ಸಿನಿಸಿರಿ ಕಾರ್ಯಕ್ರಮಗಳೊಂದಿಗೆ ಫಲಪುಷ್ಪ ಪ್ರದರ್ಶನ, ಮತ್ಸ್ಯ ಪ್ರದರ್ಶನಗಳು ನಡೆಯಲಿವೆ. ವಿದ್ಯಾರ್ಥಿಪ್ರತಿನಿಧಿಗಳಿಗೆ ಸಂಪೂರ್ಣ ಉಚಿತ ಹಾಗೂ ಇತರ ಪ್ರತಿನಿಧಿಗಳಿಗೆ ರೂ.100/- ಪ್ರತಿನಿಧಿ ಶುಲ್ಕದೊಂದಿಗೆ ವಸತಿ-ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಆಳ್ವರು ತಿಳಿಸಿದರು. ಮಾಧ್ಯಮ ಸಂಪರ್ಕಾಧಿಕಾರಿ ಡಾ.ಪದ್ಮನಾ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News