ನೋಟು ರದ್ದಿನ ಬಳಿಕ ಪೇಟಿಎಂ ಜಾಹೀರಾತಿನಲ್ಲಿ ಪ್ರಧಾನಿ ಮೋದಿ

Update: 2016-11-10 07:12 GMT

ಹೊಸದಿಲ್ಲಿ, ನ.10: 500 ಹಾಗೂ 1,000 ರೂ.ನೋಟುಗಳನ್ನು ರದ್ದುಗೊಳಿಸಿದ ನಂತರ ಪ್ರಧಾನಿ ಮೋದಿ ಪೇಟಿಎಂ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮದ ಹಿಂದೆ ಇ-ಕಾಮರ್ಸ್ ಕಂಪೆನಿ ಪೇಟಿಎಂ ಜೊತೆಗಿನ ರಹಸ್ಯ ಒಪ್ಪಂದವೊಂದು ಕೆಲಸ ಮಾಡಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

‘‘ಪ್ರಧಾನಿ ಘೋಷಣೆಯ ದೊಡ್ಡ ಫಲಾನುಭವಿ ಪೇಟಿಎಂ. ಮರುದಿನವೇ ಪ್ರಧಾನಿ ಅದರ ಜಾಹೀರಾತಿನಲ್ಲಿ ಕಾಣಿಸುತ್ತಿದ್ದಾರೆ. ಏನಿದು ಒಪ್ಪಂದ, ಮಿಸ್ಟರ್ ಪಿಎಂ?’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ರಿಲಯನ್ಸ್ ಜಿಯೋ ಜಾಹೀರಾತಿನಲ್ಲಿ ಪ್ರಧಾನಿ ಕಾಣಿಸಿಕೊಂಡಿರುವುದಕ್ಕೂ ಈಗ ಪ್ರಧಾನಿಗೆ ಅಭಿನಂದನೆ ಸಲ್ಲಿಸುವ ಪೇಟಿಎಂ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿರುವುದಕ್ಕೂ ಸಾಮ್ಯತೆ ಕಲ್ಪಿಸಿ ಆಜ್ ತಕ್ ವೆಬ್ ಸೈಟ್‌ ಸುದ್ದಿಯೊಂದನ್ನು ಪ್ರಕಟಿಸಿರುವ ಬಗ್ಗೆ ಕೇಜ್ರಿವಾಲ್ ಪ್ರತಿಕ್ರಿಯಿಸುತ್ತಿದ್ದರು.

ಆಜ್ ತಕ್ ಶೀರ್ಷಿಕೆ ಹೀಗಿತ್ತು  ‘‘ಪೇಟಿಎಂ ವಾಕ್ಸ್ ಆನ್ ದಿ ಪಾಥ್‌ ಆಫ್ ರಿಲಯನ್ಸ್ ಜಿಯೋ, ಕ್ಯಾರೀಡ್ ಪಿಎಂ ಮೋದೀಸ್ ಫೋಟೋ ಇನ್ ಆ್ಯಡ್’’ ಎಂದು (ಪೇಟಿಎಂ ರಿಲಯನ್ಸ್‌ ಜಿಯೋ ಹಾದಿ ಹಿಡಿದಿದೆ. ಪ್ರಧಾನಿ ಮೋದಿಯವರ ಫೋಟೋವೊಂದನ್ನು ಜಾಹೀರಾತಿನಲ್ಲಿ ಹಾಕಿದೆ).

ಕೇಜ್ರಿವಾಲ್ ಟ್ವೀಟ್ ಮಾಡಿದ ತಕ್ಷಣ ಆಜ್ ತಕ್ ತನ್ನ ಟ್ವೀಟ್ ಡಿಲೀಟ್ ಮಾಡಿದ್ದರೂ ಪೇಟಿಎಂ ಬಗೆಗಿನ ಅದರ ವರದಿ ಅದರ ವೆಬ್ ಸೈಟ್ ನಿಂದ ಡಿಲೀಟ್ ಮಾಡಲಾಗಿರಲಿಲ್ಲ.

ಇನ್ನೊಂದು ಟ್ವೀಟಿನಲ್ಲಿ ಕೇಜ್ರಿವಾಲ್ ಅವರು ಮೋದಿ ಪೇಟಿಎಂ ಜಾಹೀರಾತಿನಲ್ಲಿ ಕಾಣಿಸಿರುವ ಬಗ್ಗೆ ‘ನಾಚಿಕೆಗೇಡು’ ಎಂದು ಬಣ್ಣಿಸಿದ್ದಾರೆ. ‘‘ಖಾಸಗಿ ಕಂಪೆನಿಗಳಿಗೆ ಪ್ರಧಾನಿ ಮಾಡೆಲ್ ಆಗುವುದು ಜನರಿಗೆ ಬೇಕಿದೆಯೇ ? ನಾಳೆ ಈ ಕಂಪೆನಿಗಳು ತಪ್ಪು ಮಾಡಿದಲ್ಲಿ ಅವುಗಳ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ ?’’ ಎಂದೂ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಪ್ರಧಾನಿ 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿರುವ ಬಗ್ಗೆ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರಮುಖ ಇ-ಕಾಮರ್ಸ್ ಕಂಪೆನಿಯಾಗಿರುವ ಪೇಟಿಎಂ ಪ್ರಮುಖ ರಾಷ್ಟ್ರೀಯ ದೈನಿಕಗಳ ಮುಖಪುಟ ಜಾಹೀರಾತನ್ನುಬುಕ್ ಮಾಡಿತ್ತು. ಇಷ್ಟು ಬೇಗನೇ ಪ್ರಮುಖ ದೈನಿಕಗಳ ಮುಖಪುಟ ಜಾಹೀರಾತು ಹಾಕಲು ಪೇಟಿಎಂಗೆ ಹೇಗೆ ಸಾಧ್ಯವಾಯಿತೆಂಬುದು ಹಲವರು ಎತ್ತಿರುವ ಪ್ರಶ್ನೆಯಾಗಿದೆ. ಪ್ರಧಾನಿಯ ಭಾಷಣ ಮುಗಿಯುವಾಗಲೇ ರಾತ್ರಿ 9:30 ಆಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News