ಸ್ವಯಂಪ್ರೇರಣೆಯಿಂದ ತೆರಳಿ ಮೃತದೇಹ ಮೇಲೆತ್ತಿದ ಮಂಗಳೂರಿನ ಮೀನುಗಾರ ಯುವಕರು

Update: 2016-11-11 15:58 GMT

ಮಂಗಳೂರು,ನ.11: ‘ಮಾಸ್ತಿಗುಡಿ’ ಕನ್ನಡ ಚಲನಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ನೀರುಪಾಲಾಗಿದ್ದ ನಟರಾದ ಅನಿಲ್ ಮತ್ತು ಉದಯ್ರ ಮೃತದೇಹಗಳನ್ನು ಪತ್ತೆಹಚ್ಚುವಲ್ಲಿ ಮಂಗಳೂರಿನ ಐವರು ಯುವಕರು ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಜಾವಿದ್, ಝಾಕಿರ್, ಅರ್ಮಾನ್, ವಸೀಮ್ ಮತು ಸಾದಿಕ್ ಎಂಬವರೇ ಮೃತ ದೇಹಗಳನ್ನು ಪತ್ತೆ ಹಚ್ಚಿದವರಾಗಿದ್ದಾರೆ. ಈ ಯುವಕರು ವೃತ್ತಿಯಲ್ಲಿ ಮೀನುಗಾರರಾಗಿದ್ದು, ಜಿಲ್ಲಾ ಗೃಹರಕ್ಷಕದಳದ ಸಿಬ್ಬಂದಿಯೂ ಆಗಿದ್ದಾರೆ.

ಚಿತ್ರೀಕರಣದ ವೇಳೆ ನಟರಿಬ್ಬರು ಹೆಲಿಕಾಪ್ಟರ್‌ನಿಂದ ಜಲಾಶಯಕ್ಕೆ ಧುಮುಕುವ ಸಂದರ್ಭದಲ್ಲಿ ನೀರುಪಾಲಾಗಿದ್ದರು. ಘಟನೆಯ ಬಳಿಕ ಎನ್‌ಡಿಆರ್‌ಎಸ್ ತಂಡ, ಅಗ್ನಿಶಾಮಕ ದಳ ಮತ್ತು ಈಜುಗಾರರು ಮೃತದೇಹದ ಪತ್ತೆಗಾಗಿ ಶ್ರಮಿಸಿತ್ತು. ಆದರೆ, ಮೃತದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಘಟನೆಯ ಮಾರನೆಯ ದಿನ ಸ್ವಯಂ ಪ್ರೇರಿತರಾಗಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳಿದ್ದ ಈ ಐವರು ನುರಿತ ಈಜುಗಾರರು ಮೃತದೇಹಕ್ಕಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದರು. ಮೊದಲಿಗೆ ನಟ ಉದಯ್‌ಯವರ ಮೃತದೇಹ ಪತ್ತೆಯಾದರೆ, ಮಾರನೆಯ ದಿನ ಇನ್ನೋರ್ವ ನಟ ಅನಿಲ್‌ರ ಮೃತದೇಹ ಪತ್ತೆ ಹಚ್ಚುವಲ್ಲಿ ಈ ಐವರ ತಂಡ ಯಶಸ್ವಿಯಾಗಿತ್ತು.

ನೀರು ಪಾಲಾದವರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ನೀರಿಗೆ ಧುಮುಕುವ ಈ ಐವರು ಯುವಕರು ಮಂಗಳೂರಿನಲ್ಲಿ ಸ್ಥಳೀಯವಾಗಿ ಆಪದ್ಭಾಂಧವರೆಂದೇ ಹೆಸರು ಪಡೆದವರು. ಸುಸೈಡ್ ಸ್ಪಾಟ್ ಎಂದೇ ಕುಖ್ಯಾತಿ ಪಡೆದ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಈ ಐವರು ಮೀನುಗಾರರು ಬೆಂಗಳೂರು ತಲುಪಿದ ಕೇವಲ ಎರಡೇ ದಿನಗಳಲ್ಲಿ ನಟರಿಬ್ಬರ ಮೃತದೇಹಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಾವಿದ್, ಝಾಕಿರ್, ಅರ್ಮಾನ್, ವಸೀಮ್ ಮತು ಸಾದಿಕ್ ತುರ್ತು ಸಂದರ್ಭಗಳಲ್ಲಿ ಪಣಂಬೂರು ಗೃಹರಕ್ಷಕದಳದಲ್ಲಿ ಸೇವೆ ಸಲ್ಲಿಸುವ ಇವರ ಬಳಿ ತಮ್ಮದೇ ಆದ ಸಮವಸ್ತ್ರಗಳು ಹಾಗೂ ಶೋಧಕಾರ್ಯಕ್ಕಾಗಿ ಸೌಕರ್ಯಗಳಿವೆ. ಜೊತೆಗೆ ತಣ್ಣೀರುಬಾವಿಯಲ್ಲಿ ಮುಳುಗು ತಜ್ಞರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೀನುಗಾರಿಕೆ ವೃತ್ತಿಯ ಜೊತೆಗೆ ಜೀವರಕ್ಷಕರಾಗಿ ಅನೇಕ ಮಂದಿಯ ಪ್ರಾಣಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಈ ವರೆಗೆ ನೂರಕ್ಕಿಂತಲೂ ಅಧಿಕ ಶವಗಳನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗಿದೆ.

ಪ್ರಾಣದ ಹಂಗು ತೊರೆದು ಇತರರ ಪ್ರಾಣದ ಬಗ್ಗೆ ಸಾಹಸ ಮೆರೆಯುವ ಈ ಮಂಗಳೂರಿನ ಶೂರರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕಾರವೂ ಲಭಿಸಿದೆ.

ಜಾವಿದ್,ಝಾಕಿರ್, ಅರ್ಮಾನ್, ವಸೀಮ್, ಸಾಧಿಕ್ ನಿಜವಾದ ಆಪದ್ಭಾಂಧವರು. ಎಲ್ಲೇ ಏನೇ ದುರಂತಗಳು ಸಂಭವಿಸಿದರೂ ಕರೆ ಬಂದ ತಕ್ಷಣ ಸ್ಪಂದಿಸುತ್ತಾರೆ. ಅನೇಕ ಜೀವಗಳನ್ನು ರಕ್ಷಿಸಿದ್ದಾರೆ. ಹಲವು ಕಠಿಣ ಪರಿಸ್ಥಿತಿಗಳಲ್ಲಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಆಪದ್ಬಾಂಧವರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಎರಡು ವರ್ಷಗಳ ಹಿಂದೆ ಜಿಲ್ಲಾ ಗೃಹರಕ್ಷಕದಳದಿಂದ ಸನ್ಮಾನ ಮಾಡಲಾಗಿತ್ತು. ಇದೀಗ ‘ಮಾಸ್ತಿಗುಡಿ’ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ವಿಶೇಷ ಪುರಸ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಮೋಹನ್ ಚೂಂತಾರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News