ತನ್ವಿರ್ ಸೇಠ್‌ರನ್ನು ಸಂಪುಟದಿಂದ ವಜಾಗೊಳಿಸಿ: ಜನಾರ್ದನ ಪೂಜಾರಿ

Update: 2016-11-11 09:43 GMT

ಮಂಗಳೂರು,ನ.11:ಸಚಿವ ತನ್ವೀರ್ ಸೇಠ್ ಅಶ್ಲೀಲ ವೀಡಿಯೊ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸೇಠ್ ರ ರಾಜಿನಾಮೆಯನ್ನು ತಕ್ಷಣ ಪಡೆಯಬೇಕು. ರಾಜಿನಾಮೆ ನೀಡದಿದ್ದರೆ ಅವರನ್ನು ಸಚಿವ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕು ಎಂದು ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ತನ್ವೀರ್ ಸೇಠ್‌ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರೇ ತಕ್ಷಣ ರಾಜಿನಾಮೆ ನೀಡಬೇಕಿತ್ತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ವರದಿ ಕೇಳಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಕರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪಕ್ಷದ ಮುಖಂಡರಿಗೆ ಮುಜುಗರ ಉಂಟಾಗುವಂತೆ ಮಾಡಿದ ಸಚಿವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಜನಾರ್ದನ ಪೂಜಾರಿ ಆಗ್ರಹಿಸಿದರು.

1000, 500 ಮುಖ ಬೆಲೆಯ ನೋಟು ಅಮಾನ್ಯ ಉತ್ತಮ ಯೋಜನೆ. ಆದರೆ ಅದನ್ನು ಅನುಷ್ಠಾನಗೊಳಿಸಿದ ಕ್ರಮ ಸಮರ್ಪಕವಾಗಿಲ್ಲ. ಪ್ರಧಾನಿಗೆ ಅನುಭವದ ಕೊರತೆ. ಈ ಹಿಂದೆ ನಾನು ಕೇಂದ್ರದ ವಿತ್ತ ಸಚಿವನಾಗಿದ್ದಾಗ ಚಿಲ್ಲರೆ ಅಭಾವವನ್ನು ಸಮರ್ಪಕವಾಗಿ ನಿವಾರಿಸಿದ್ದೇನೆ. ಪ್ರಸಕ್ತ ಜನರಿಗೆ ಹಣದ ಅಭಾವ ಉಂಟಾಗುವಂತೆ ಮಾಡಿ ತೊಂದರೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಜನಾರ್ದನ ಪೂಜಾರಿ ಆರೋಪಿಸಿದರು. ಈ ಯೋಜನೆಯಿಂದ ಕಳ್ಳ ನೋಟಿನ ದಂಧೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ ಎನ್ನುವ ವಿಶ್ವಾಸ ತನಗಿಲ್ಲ ಎಂದು ಪೂಜಾರಿ ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ ,ಅರುಣ್ ಕುವೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News