ಮುಸ್ತಫಾ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪಿಎಫ್‌ಐ ಮನವಿ

Update: 2016-11-11 11:57 GMT

ಬಂಟ್ವಾಳ, ನ.11: ಮೈಸೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಹಮ್ಮದ್ ಮುಸ್ತಫಾ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾದ ಬಂಟ್ವಾಳ ತಾಲೂಕು ಘಟಕದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರಿಗೆ ಶುಕ್ರವಾರ ಸಂಜೆ ಮನವಿ ಸಲ್ಲಿಸಲಾಯಿತು.

ಮುಸ್ತಫಾ ಕೊಲೆ ಪ್ರಕರಣವನ್ನು ಖಂಡಿಸಿ ಪಿಎಫ್‌ಐ ಬಂಟ್ವಾಳ ತಾಲೂಕು ಘಟಕ ಬಿ.ಸಿ.ರೋಡಿನಲ್ಲಿರುವ ತಾಲೂಕು ಕಚೇರಿ ಎದುರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಟಿಪ್ಪುಜಯಂತಿ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ 144 ಸೆಕ್ಷನ್ ಹಿನ್ನೆಲೆಯಲ್ಲಿ ಬಿ.ಸಿ.ರೋಡಿಗೆ ಆಗಮಿಸಿದ್ದ ಜಿಲ್ಲಾ ಎಸ್ಪಿ ಪಿಎಫ್‌ಐ ಮುಖಂಡರನ್ನು ಬಂಟ್ವಾಳ ನಗರ ಠಾಣೆಗೆ ಕರೆದು ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು. ಸುದೀರ್ಘ ಮಾತುಕತೆಯ ಬಳಿಕ ಎಸ್ಪಿಯವರ ಮನವಿಯ ಮೇರೆಗೆ ಪ್ರತಿಭನೆ ಕೈಬಿಟ್ಟ ಪಿಎಫ್‌ಐ ಮುಖಂಡರು ಮುಸ್ತಫಾ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎಸ್ಪಿಮೂಲಕ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ, ರಾಜ್ಯ ಬಂಧೀಖಾನೆ ಮುಖ್ಯ ಅಧೀಕ್ಷಕ, ರಾಜ್ಯ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಜಿಲ್ಲಾಧಿಕಾರಿಗೆ ಮನವಿಯನ್ನು ಅರ್ಪಿಸಿದರು.

ಟಿಪ್ಪುಜಯಂತಿ ವೇಳೆ ಗಲಭೆ ಮತ್ತು ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದ ಸಂಘಪರಿವಾರ ಮತ್ತು ಬಿಜೆಪಿ ನಾಯಕರು ಕೆಲ ದಿನಗಳಿಂದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗರಿಷ್ಠ ಭದ್ರತೆ ಹೊಂದಿರುವ ಮೈಸೂರು ಜೈಲಲ್ಲಿ ಮುಸ್ತಫಾ ಕೊಲೆ ನಡೆದಿರುವುದು ಪೂರ್ವಯೋಜಿತ ಕೃತ್ಯವಾಗಿದೆ ಎಂಬುದು ಸ್ಪಷ್ಟಗೊಂಡಿದೆ. ಅಲ್ಲದೆ ಸಂಸದ ಪ್ರತಾಪ್ ಸಿಂಹ ಮೈಸೂರು ಜೈಲಿಗೆ ಆಗಾಗ ಭೇಟಿ ನೀಡುತ್ತಿದ್ದರು. ಈ ಹತ್ಯೆಯಲ್ಲಿ ಅವರೂ ಶಾಮೀಲಾಗಿರುವ ಶಂಕೆ ಇದ್ದು ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗರಿಷ್ಠ ಭದ್ರತೆಯನ್ನು ಹೊಂದಿರುವ ಜೈಲಿನೊಳಗೆ ಮಾರಕಾಸ್ತ್ರಗಳನ್ನು ಬಳಸಿ ಮುಸ್ತಫಾರನ್ನು ಕೊಲೆ ನಡೆಸಲಾಗಿದೆ. ಕೊಲೆಯ ಹಿಂದಿರುವ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಜೈಲಾಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು. ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕೊಲೆಯ ಹಿಂದಿರುವ ಅಪರಾಧಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸಲು ವಿಫಲವಾದರೆ ತಾಲೂಕಿನಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಪಿಎಪ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಗೋಳ್ತಮಜಲು, ಕಾರ್ಯದರ್ಶಿ ಸಲೀಂ ಕುಂಪಣಮಜಲು, ಮುಖಂಡರಾದ ಇಸಾಕ್ ಶಾಂತಿಯಂಗಡಿ, ಶಬೀರ್ ಶಾಂತಿಯಂಗಡಿ, ಖಲೀಲ್ ಕಲ್ಲಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News