ಬಿಡುಗಡೆಯಾಗುವ ಕೆಲವೇ ಗಂಟೆಗಳ ಮುನ್ನ ಹತ್ಯೆಗೀಡಾದ ಮುಸ್ತಫಾ

Update: 2016-11-11 18:33 GMT

ಮಂಗಳೂರು, ನ.11: ಮೂಡುಬಿದಿರೆಯ ಪ್ರಶಾಂತ್ ಪೂಜಾರಿ ಕೊಲೆಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಸ್ತಫಾ ಜಾಮೀನು ಪಡೆದು ಜೈಲಿನಿಂದ ಹೊರಬರುವ ಕೆಲವೇ ಗಂಟೆಗಳ ಮುನ್ನ ಹತ್ಯೆಗೈಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ವಿಚಾರಣೆಯು ಮಂಗಳೂರಿನ ಎರಡನೆ ಹೆಚ್ಚುವರಿ ಸೆಶನ್ಸ್ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಬಂಧನದಲ್ಲಿದ್ದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿಗಳು ಎರಡು ಲಕ್ಷ ರೂ. ಮೌಲ್ಯದ ಬಾಂಡ್ ಮತ್ತು ಎರಡು ಲಕ್ಷ ರೂ.ಮೌಲ್ಯದ ಆಸ್ತಿ ಹೊಂದಿರುವ ಇಬ್ಬರು ವ್ಯಕ್ತಿಗಳು ಜಾಮೀನು ನೀಡಬೇಕಾಗಿತ್ತು. ಮುಸ್ತಫಾನನ್ನು ಹೊರತುಪಡಿಸಿ ಇತರ ಆರೋಪಿಗಳು ಬಾಂಡ್ ಮತ್ತು ಜಾಮೀನು ನೀಡಿ ಜೈಲಿನಿಂದ ಹೊರಬಂದಿದ್ದರು ಎನ್ನಲಾಗಿದೆ.

ಮುಸ್ತಫಾ ಕೂಡಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಸೆ.21 ರಂದು ಹೈಕೋರ್ಟ್ ಮುಸ್ತಫಾನಿಗೆ ಜಾಮೀನು ನೀಡಿತ್ತು. ಆದರೆ ಮುಸ್ತಫಾನಿಗೆ ಜಾಮೀನು ನೀಡುವ ವ್ಯಕ್ತಿ ಲಭಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಿಡುಗಡೆ ಆದೇಶ ಪತ್ರವನ್ನು ನೀಡಿರಲಿಲ್ಲ. 10 ದಿನಗಳ ಹಿಂದೆ ಮುಸ್ತಫಾನಿಗೆ ಜಾಮೀನು ಒದಗಿಸಲು ಇಬ್ಬರು ಜಾಮೀನುದಾರರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯದ ಮಾಹಿತಿಗಾಗಿ ಆಸ್ತಿಯ ಮೂಲ ದಾಖಲೆಯಾದ ಮಾರಾಟ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪೈಕಿ ಓರ್ವರ ಆಸ್ತಿಯು 10 ಸೆಂಟ್ಸ್ ಇದ್ದು ವಾಣಿಜ್ಯ ಉಪಯೋಗಕ್ಕೆ ಭೂಮಿ ಪರಿವರ್ತನೆಗೊಂಡಿತ್ತು. ಹೀಗಾಗಿ ನ್ಯಾಯಾಲಯವು ಸದರಿ ಮಾರಾಟಪತ್ರದಲ್ಲಿ ಆಸ್ತಿಯ ಮೌಲ್ಯಕ್ಕೆ ಸಂಬಂಧಿಸಿದ ದಾಖಲೆ ಪತ್ರ ಹಾಜರುಪಡಿಸುವಂತೆ ತಿಳಿಸಿ ವಿಚಾರಣೆಯನ್ನು ಮುಂದೂಡಿತ್ತು. ಸೂಕ್ತ ದಾಖಲೆಯನ್ನು ಸಲ್ಲಿಸಿದ ಬಳಿಕ ನ.8ರಂದು ನ್ಯಾಯಾಲಯವು ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು ಎಂದು ತಿಳಿದುಬಂದಿದೆ.

ನ.9ರಂದು ನ್ಯಾಯಾಲಯದ ಕಚೇರಿಯಿಂದ ಮೈಸೂರು ಜೈಲಿಗೆ ಮುಸ್ತಫಾರ ಬಿಡುಗಡೆಯ ಆದೇಶಪತ್ರ ರವಾನೆಯಾಗಿತ್ತು. ನ.10ರಂದು 3 ಗಂಟೆಗೆ ನ್ಯಾಯಾಲಯದ ಆದೇಶಪ್ರತಿಯು ಜೈಲಿಗೆ ತಲುಪಿತ್ತು. ಆದರೆ ಆದೇಶ ಪ್ರತಿ ಜೈಲು ಅಧಿಕಾರಿಗಳ ಕೈಸೇರುವ ಮುನ್ನವೇ ಮುಸ್ತಾಫರನ್ನು ಹತ್ಯೆ ಮಾಡಲಾಗಿದೆ. ಮುಸ್ತಾಫ ಜೈಲಿನಿಂದ ಬಿಡುಗಡೆಯಾಗುವ ಮಾಹಿತಿ ಪಡೆದುಕೊಂಡು ಕೆಲವೇ ಗಂಟೆಗಳ ಮುನ್ನ ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News