×
Ad

ಜರ್ಮನಿ ಕಾನ್ಸುಲೇಟ್ ಕಚೇರಿ ಮೇಲೆ ತಾಲಿಬಾನ್ ದಾಳಿ

Update: 2016-11-12 00:22 IST

ಮಝಾರಿ ಶರೀಫ್ (ಅಫ್ಘಾನಿಸ್ತಾನ), ನ. 11: ಅಫ್ಘಾನಿಸ್ತಾನದ ಮಝಾರಿ ಶರೀಫ್ ನಗರದಲ್ಲಿರುವ ಜರ್ಮನಿ ಕಾನ್ಸುಲೇಟ್ ಕಚೇರಿಯಲ್ಲಿ ಗುರುವಾರ ರಾತ್ರಿ ತಾಲಿಬಾನ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕಾನ್ಸುಲೇಟ್ ಕಚೇರಿಯ ಹೊರಗೆ ಪ್ರಬಲ ಟ್ರಕ್ ಬಾಂಬ್ ಸ್ಫೋಟಗೊಂಡಾಗ ರಸ್ತೆಯಲ್ಲಿ ಬೃಹತ್ ಹೊಂಡವೊಂದು ಸೃಷ್ಟಿಯಾಯಿತು ಹಾಗೂ ಕಾರುಗಳು ಮತ್ತು ವಾಹನಗಳು ಗಾಳಿಯಲ್ಲಿ ಹಾರಿದವು.

ಸಂಘರ್ಷಪೀಡಿತ ಕುಂಡುಝ್‌ನಲ್ಲಿ ಈ ತಿಂಗಳ ಆರಂಭದಲ್ಲಿ ಅಮೆರಿಕ ನಡೆಸಿದ ವಾಯುದಾಳಿಗಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ಹೇಳಿದೆ.

ಕುಂಡುಝ್‌ನಲ್ಲಿ ನಡೆದ ದಾಳಿಯಲ್ಲಿ 32 ನಾಗರಿಕರು ಮೃತಪಟ್ಟಿದ್ದಾರೆ.

ಸಾಮಾನ್ಯವಾಗಿ ಶಾಂತಿ ನೆಲೆಸಿರುವ ನಗರದಲ್ಲಿ, ಬೃಹತ್ ಸ್ಫೋಟದ ಬಳಿಕ ಅಲ್ಲಲ್ಲಿ ಗುಂಡು ಹಾರಾಟದ ಸದ್ದು ಕೇಳಿಸಿತು. ಸಮೀಪದ ಅಂಗಡಿಗಳು ಮತ್ತು ಮನೆಗಳ ಕಿಟಿಕಿಗಳು ಮುರಿದವು. ಪರಿಸರದ ಭಯಗ್ರಸ್ತ ಜನರು ತಮ್ಮ ಮನೆಗಳಿಂದ ಹೊರಬಂದು ಆಸರೆ ಪಡೆಯಲು ಓಡಿದರು.

‘‘ಆತ್ಮಹತ್ಯಾ ದಾಳಿಕೋರನು ಸ್ಫೋಟಕಗಳಿಂದ ತುಂಬಿದ ತನ್ನ ವಾಹನವನ್ನು ಜರ್ಮನ್ ಕಾನ್ಸುಲೇಟ್ ಕಚೇರಿಯ ಗೋಡೆಗೆ ಗುದ್ದಿದನು’’ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಕಾನ್ಸುಲೇಟ್‌ನಲ್ಲಿರುವ ಎಲ್ಲ ಜರ್ಮನ್ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ ಎಂದು ಬರ್ಲಿನ್‌ನಲ್ಲಿ ಜರ್ಮನಿಯ ವಿದೇಶ ಸಚಿವಾಲಯ ತಿಳಿಸಿದೆ.

ಆದರೆ, ಏಳು ಅಫ್ಘಾನ್ ನಾಗರಿಕರು ಮೃತಪಟ್ಟಿದ್ದಾರೆ. ಆ ಪೈಕಿ ಇಬ್ಬರು ಮೋಟರ್ ಸೈಕಲ್ ಸವಾರರನ್ನು ಕಾನ್ಸುಲೇಟ್ ಕಚೇರಿಯ ಸಮೀಪವಿರುವ ಜರ್ಮನಿಯ ಭದ್ರತಾ ಪಡೆಗಳು ಗುಂಡು ಹಾರಿಸಿ ಕೊಂದಿವೆ. ನಿಲ್ಲುವಂತೆ ನೀಡಿದ ಸೂಚನೆಯನ್ನು ಧಿಕ್ಕರಿಸಿದ ಅವರನ್ನು ಜರ್ಮನ್ ಭದ್ರತಾ ಸಿಬ್ಬಂದಿ ಕೊಂದಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ರಾಜತಾಂತ್ರಿಕ ಕಚೇರಿಯ ಸಮೀಪ ಶುಕ್ರವಾರ ಬೆಳಗ್ಗೆ ಓರ್ವ ಶಂಕಿತನನ್ನೂ ಬಂಧಿಸಲಾಗಿದೆ. ಕನಿಷ್ಠ 128 ಮಂದಿ ಗಾಯಗೊಂಡಿದ್ದು, ಅವರ ಪೈಕಿ ಹಲವರ ಪರಿಸ್ಥಿತಿ ಗಂಭೀರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News