×
Ad

ಸೋಮವಾರದವರೆಗೆ ಬ್ಯಾಂಕ್ ಗೆ ಹೋಗದೇ ಇರುವುದೇ ಒಳ್ಳೆಯದು. ಏಕೆಂದರೆ ?

Update: 2016-11-12 12:01 IST

ನವದೆಹಲಿ: ನೀವು ಎಟಿಎಂಗೆ ಹೋಗುವವರಾಗಿದ್ದರೆ ಇಂದು ಮತ್ತು ನಾಳೆ ನಿಮಗೆ ನಿರಾಶೆಯಾಗಲಿದೆ. ಸೋಮವಾರದವರೆಗೆ ಸ್ಥಿತಿ ಬದಲಾಗದು. ಜನರು ಎಟಿಎಂಗಳಿಗೆ ಮುಗಿಬಿದ್ದು ಹಣ ತೆಗೆಯುವ ಸ್ಥಿತಿಯಲ್ಲಿ ಬ್ಯಾಂಕುಗಳಿಗೆ ಎಟಿಎಂಗಳನ್ನು ತಕ್ಷಣವೇ ತುಂಬುವುದು ಅಸಾಧ್ಯವಾಗಲಿದೆ.

ಒಂದು ಎಟಿಎಂ ಮೆಷಿನ್‌ನಲ್ಲಿ 3-4 ರ್ಯಾಕುಗಳು ಮಾತ್ರ ಇರುತ್ತವೆ. ಅವುಗಳಲ್ಲಿಯೇ ನಗದನ್ನು ವಿತರಣೆಗಾಗಿ ಇಡಬೇಕು. ಎಟಿಎಂ ಯಂತ್ರಗಳಲ್ಲಿ ನಗದನ್ನು ಇಡುವ ಮತ್ತು ನಿಭಾಯಿಸುವ ಕಂಪನಿಗಳು ಈ ರ್ಯಾಕ್‌ಗಳನ್ನು ಒಂದು ನಿರ್ದಿಷ್ಟ ಮೌಲ್ಯದ ನೋಟುಗಳನ್ನು ಇಡಲು ಕಾನ್ಫಿಗರ್ ಮಾಡಬೇಕು. ಈವರೆಗೆ ಈ ರ್ಯಾಕ್‌ಗಳನ್ನು ರೂ. 100, ರೂ. 500 ಮತ್ತು ರೂ. 1000 ಕರೆನ್ಸಿ ನೋಟುಗಳನ್ನು ಬಿಡುವಂತೆ ಕಾನ್ಫಿಗರ್ ಮಾಡಲಾಗಿತ್ತು. ಆದರೆ ಹಣ ಅಮಾನ್ಯ ಮಾಡಿದ ಮೇಲೆ ಈ ರ್ಯಾಕ್‌ಗಳನ್ನು ರೂ. 50, ರೂ. 100, ರು. 500 ಮತ್ತು ರೂ. 2000ದ ನೋಟುಗಳನ್ನು ವಿತರಿಸುವಂತೆ ಮರಳಿ ರೂಪಿಸಬೇಕಿದೆ.

ರೂ. 50 ಮತ್ತು ರೂ. 2000ದ ನೋಟುಗಳನ್ನು ಸದ್ಯ ಎಟಿಎಂ ಯಂತ್ರಗಳಲ್ಲಿ ಕಾನ್ಫಿಗರ್ ಮಾಡಲಾಗಿಲ್ಲ. ಹೀಗಾಗಿ ಹಳೇ ನೋಟುಗಳಿಗೆ ಎಟಿಎಂಗಳನ್ನು ಖಾಲಿ ಮಾಡುವುದು ಮತ್ತು ಹಿನ್ನೆಲೆಯ ಕೆಲಸವನ್ನು ಅದೇ ದಿನ ಮುಗಿಸುವುದು ಬಹಳ ಸವಾಲಿನ ಕೆಲಸವಾಗಿರುತ್ತದೆ.

ನಗದು ನಿರ್ವಹಣಾ ಸಂಸ್ಥೆಯ ಲಾಜಿಕ್ಯಾಷ್ ಸೊಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ವಿಪಿನ್ ಜೈನ್ ಪ್ರಕಾರ, "ನಗದನ್ನು ಲೋಡ್ ಮಾಡಲು ಅದರದ್ದೇ ಆದ ಸವಾಲುಗಳಿವೆ. ಎಟಿಎಂ ಯಂತ್ರದಲ್ಲಿ ನಾಲ್ಕು ರ್ಯಾಕ್‌ಗಳಿವೆ. ಅವುಗಳನ್ನು ಭಾರತವಿಡೀ ಮರಳಿ ಕಾನ್ಫಿಗರ್ ಮಾಡಬೇಕೆಂದರೆ ಕನಿಷ್ಠ 7ರಿಂದ 10 ದಿನಗಳು ಬೇಕು."

ಹಾಗೆಯೇ ಬ್ಯಾಂಕ್‌ಗಳು ಮತ್ತು ಎಟಿಎಂಗಳಿಗೆ ಅಗತ್ಯವಿಲ್ಲದಿದ್ದರೂ ಹಣ ತೆಗೆಯಲು ಜನರು ಮುಗಿ ಬೀಳುವಂತಹ ಪರಿಸ್ಥಿತಿ ಮತ್ತೆ ಸಾಮಾನ್ಯವಾಗಲು ಅಷ್ಟೇ ಸಮಯ ಬೇಕು. ಜನಸಾಮಾನ್ಯರಿಗೆ ಕೈಯಲ್ಲಿ ಹಣವಿದ್ದರೆ ಉತ್ತಮ ಎನ್ನುವ ಮನೋಭಾವವಿರುತ್ತದೆ. ಉದಾಹರಣೆಗೆ ಆತನಿಗೆ ಕೇವಲ ರೂ. 2000 ಮಾತ್ರ ಬೇಕಿದ್ದರೂ, ಆತ ಅಂತಹ ಸ್ಥಿತಿಯಲ್ಲಿ ರೂ. 10,000ವನ್ನು ಬ್ಯಾಂಕಿನಿಂದ ತೆಗೆಯಲು ಬಯಸಿರುತ್ತಾನೆ. ಇದರಿಂದಾಗಿ ಯಂತ್ರಗಳು ತಕ್ಷಣವೇ ಖಾಲಿಯಾಗಿಬಿಡುತ್ತವೆ ಮತ್ತು ನಾವು ಅದನ್ನು ಮತ್ತೆ ಮತ್ತೆ ತುಂಬಬೇಕಾಗುತ್ತದೆ. ಅದೇ ಲಾಜಿಸ್ಟಿಕ್ ಕಂಪನಿಗಳ ದೊಡ್ಡ ಸವಾಲು. ಬ್ಯಾಂಕುಗಳು ಹರಿದ ನೋಟುಗಳ ಮೇಲೂ ಗಮನಹರಿಸಬೇಕಿದೆ. ಹಾಗೆಯೇ ಅದಕ್ಕೆ ಸಮಾನ ಉತ್ತಮ ಕರೆನ್ಸಿಯನ್ನು ಆರ್‌ಬಿಐನಿಂದ ಪಡೆದುಕೊಂಡು ಕಾರ್ಯ ನಿರ್ವಹಿಸಬೇಕು. ಇದೆಲ್ಲದಕ್ಕೂ ಸಮಯ ಬೇಕಿದೆ ಎನ್ನುತ್ತಾರೆ ಅವರು.

ಹೀಗಾಗಿ ನಿಮ್ಮ ಬಳಿ ಹಣವೇ ಇಲ್ಲದಿದ್ದರೆ ಮತ್ತು ತುರ್ತಾಗಿ ಅಗತ್ಯವಿದ್ದಲ್ಲಿ ಮಾತ್ರವೇ ನೀವು ಎಟಿಎಂ ಬದಲಾಗಿ ಬ್ಯಾಂಕಿಗೆ ಹೋಗಬೇಕು. ಇಲ್ಲದಿದ್ದರೆ ಪಾವತಿಯ ಇಲೆಕ್ಟ್ರಾನಿಕ್ ವಿಧಾನಗಳನ್ನು ಅನುಸರಿಸಿ. ಅನಗತ್ಯ ಎಟಿಎಂಗಳಿಗೆ ಮುಗಿ ಬೀಳುವುದರಿಂದ ಪ್ರಯೋಜನವಿಲ್ಲ. ದೀರ್ಘ ಸರತಿಯಲ್ಲಿ ನಿಲ್ಲುವುದು ಮತ್ತು ನಂತರವೂ ಹಣ ಸಿಗದೆ ವಾಪಸಾಗುವ ಕಷ್ಟ ತೆಗೆದುಕೊಳ್ಳಬೇಡಿ.

ಕೃಪೆ: economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News