ನೋಟು ನಿಷೇಧವನ್ನು ಟೀಕಿಸಿದರೆ’ದೇಶದ್ರೋಹ’ಆಗಬಹುದು: ಮಾಚಿ ಸಚಿವ ಡಾ.ಎಂ.ಕೆ. ಮುನೀರ್
ಕೋಝಿಕ್ಕೋಡ್, ನ.12: ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಹಳೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಕೇಂದ್ರ ಸರಕಾರದ ಕ್ರಮವನ್ನು ಟೀಕಿಸಿದರೆ ದೇಶದ್ರೋಹದ ಹಣೆಪಟ್ಟಿ ಹೊರಬೇಕಾದೀತು ಎಂದು ಯೂತ್ ಲೀಗ್‌ನ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಕೇರಳ ಸಚಿವ ಡಾ.ಎಂ.ಕೆ. ಮುನೀರ್ ಹೇಳಿದ್ದಾರೆ. ಆದ್ದರಿಂದ ಹಳೆ ನೋಟು ಅಪಮೌಲ್ಯಗೊಳಿಸಿದ ಕ್ರಮವನ್ನು ಯಾರೂ ಟೀಕಿಸಿಲ್ಲ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಯೂತ್ ಮುಸ್ಲಿಂ ಲೀಗ್ ರಾಜ್ಯ ಸಮ್ಮೇಳನದ ಎರಡನೆ ದಿನದ ಸೆಮಿನಾರ್ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಕಪ್ಪುಹಣ ತಡೆಯಲು ಹಳೆ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಈಗ ಜನಸಾಮಾನ್ಯರು ಹಳೆ ನೋಟು ಹೊಸ ನೋಟಿಗೆ ಬದಲಾಯಿಸಲು ಕಷ್ಟ ಪಡುತ್ತಿದ್ದಾರೆ. ಇವರು ಯಾರೂಕಪ್ಪು ಹಣ ಇರುವವರಲ್ಲ. ಮೋದಿಯ ಕ್ರಮವನ್ನು ಟೀಕಿಸಿದರೆ ಸಾವಿರ ವಿರೋಧದ ಧ್ವನಿಗಳು ಏಳುತ್ತವೆ ಎಂದು ಮುನೀರ್ ಹೇಳಿದ್ದಾರೆ. ಇದಕ್ಕೆಂದೆ ಅಂತಾರಾಷ್ಟ್ರೀಯ ಏಜೆನ್ಸಿಯನ್ನು ನೇಮಕಗೊಳಿಸಲಾಗಿದೆ.ನೋಟ್ ನಿಷೇಧವನ್ನು ಟೀಕಿಸಿದರೆ ಕಪ್ಪುಹಣ ಮತ್ತುಪಾಕಿಸ್ತಾನ ಬೆಂಬಲಿಗ ಎಂದು ಆರೋಪ ಹೊರಿಸಲಾಗುತ್ತದೆ. ಏನಿದ್ದರೂ ನೋಟು ಚಲಾವಣೆಯಿಂದ ಹಿಂಪಡೆದರೆ ಕಪ್ಪು ಹಣವನ್ನು ತಡೆಯಬಹುದೆಂಬ ಬಿಜೆಪಿಯ ಚಿಂತನೆ ಮೌಢ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಟೀಕಿಸಿದ್ದಾರೆಂದು ವರದಿ ತಿಳಿಸಿದೆ.